Manvi | ರಂಗಾಯಣ ತಂಡದಿಂದ 'ಸಣ್ಣ ಗೌಡಸಾನಿ' ನಾಟಕ ಪ್ರದರ್ಶನ
ರಂಗಭೂಮಿ ಉಳಿಸಿ ಬೆಳೆಸಲು ಎಲ್ಲರ ಪ್ರೋತ್ಸಾಹ ಅಗತ್ಯ: ಶಿವರಾಜ ನಾಯಕ
ಮಾನ್ವಿ: ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಲು ಎಲ್ಲರ ಪ್ರೋತ್ಸಾಹ ಅಗತ್ಯ ಎಂದು ಎಪಿಎಂಸಿ ಮಾಜಿ ನಿರ್ದೇಶಕ ಜಿ. ಶಿವರಾಜ ನಾಯಕ ಬಲ್ಲಟಗಿ ಹೇಳಿದರು.
ಪಟ್ಟಣದ ಸತ್ಯಸಾಯಿ ಗಾರ್ಡನ್ ಫಂಕ್ಷನ್ ಹಾಲ್‌ನಲ್ಲಿ ಕನ್ನಡ ಜಾನಪದ ಪರಿಷತ್ತಿನ ತಾಲೂಕು ಘಟಕ ಹಾಗೂ ಕಲಬುರಗಿ ರಂಗಾಯಣದ ಸಹಯೋಗದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ‘ಸಣ್ಣ ಗೌಡಸಾನಿ’ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ನಾಟಕ, ರಂಗಭೂಮಿ ಹಾಗೂ ಬಯಲಾಟ ನಮ್ಮ ನಾಡಿನ ದೇಸಿ ಕಲೆಗಳಾಗಿವೆ. ಜಿಲ್ಲೆಯ ಹಿರಿಯ ಸಾಹಿತಿ ಡಾ. ಶಾಂತರಸರ ‘ಸಣ್ಣ ಗೌಡಸಾನಿ’ ಕಾದಂಬರಿಯನ್ನು ನಾಟಕವಾಗಿ ರೂಪಾಂತರಿಸಿ ಪ್ರದರ್ಶಿಸುತ್ತಿರುವ ಕಲಬುರಗಿ ರಂಗಾಯಣದ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ರಂಗಭೂಮಿ ಕಲಾವಿದರಾದ ರಂಗಪ್ಪ ತಡಕಲ್, ಶರಣಪ್ಪ ಮಾಸ್ತರ, ಡಿ. ವೆಂಕೋಬ, ವೆಂಕೋಬ ನಾಯಕ ಬೈಲ್ ಮರ್ಚೇಡ್, ಈರಪ್ಪ ಕುರ್ಡಿ, ಮಹ್ಮದ್ ಮುಜೀಬ್, ಜಿ.ಎಂ. ರಂಗಪ್ಪ, ಯಲ್ಲಪ್ಪ ನವಲಕಲ್, ಮಧುಕುಮಾರಿ ಪಾಂಡೆ ಹಾಗೂ ಮೌನೇಶ ಪೋತ್ನಾಳ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ತಿಮ್ಮಾರೆಡ್ಡಿ ಭೋಗಾವತಿ, ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಗೋನಾಳ, ತಾಲ್ಲೂಕು ಘಟಕದ ಅಧ್ಯಕ್ಷ ತಾಯಪ್ಪ ಬಿ.ಹೊಸೂರು, ಮಹಿಳಾ ಘಟಕದ ಅಧ್ಯಕ್ಷೆ ಕೆ.ವಿಜಯಲಕ್ಷ್ಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಕುರ್ಡಿ, ಜೆಡಿಎಸ್ ಮುಖಂಡ ಮೌನೇಶ ಹರೇಟನೂರು, ನಿವೃತ್ತ ಶಿಕ್ಷಕ ಮಹಾದೇವಪ್ಪ, ಇಟಗಿ ಭೀಮನಗೌಡ, ನೇತಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ಈ.ನರಸಿಂಹ ಕಜಾಪ ಪದಾಧಿಕಾರಿಗಳಾದ ಹೆಚ್.ಟಿ. ಪ್ರಕಾಶ ಬಾಬು ,ನಾಗರಾಜ ಕೊಳ್ಳಿ, ಲಕ್ಷ್ಮಣ ಜಾನೇಕಲ್ ಹಾಗೂ ಅರುಣಕುಮಾರ ಉಪಸ್ಥಿತರಿದ್ದರು.