Raichur | ದಲಿತರ ಹತ್ಯೆ ಖಂಡಿಸಿ ಬೈಕ್ ರ‍್ಯಾಲಿ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ
ದೇವದುರ್ಗ (ರಾಯಚೂರು): ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದಲ್ಲಿ ನಡೆದ ಬಿಎಸ್‌ಪಿ ಮುಖಂಡ ಭೂಮಾನಂದ ಅವರ ಕೊಲೆ, ಹೊಕ್ರಾಣಿಯ ದಲಿತ ಯುವತಿ ಅಶ್ವಿನಿ ಹಾಗೂ ಲಿಂಗಸೂಗೂರು ತಾಲೂಕಿನ ಕರಡಕಲ್ ಗ್ರಾಮದ ದಲಿತ ಮಹಿಳೆ ರಾಣೆಮ್ಮ ಅವರ ಕೊಲೆ ಪ್ರಕರಣಗಳನ್ನು ಖಂಡಿಸಿ ವಿವಿಧ ದಲಿತಪರ ಸಂಘಟನೆಗಳು, ಬಿಎಸ್‌ಪಿ ಹಾಗೂ ಒಳ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಭಾನುವಾರ ಬೈಕ್ ರ‍್ಯಾಲಿ ನಡೆಸಲಾಯಿತು.
ಹದ್ದಿನಾಳ ಗ್ರಾಮದ ಭೂಮಾನಂದ ಅವರ ಸಮಾಧಿಯಿಂದ ರಾಯಚೂರು ಜಿಲ್ಲಾ ಕೇಂದ್ರದವರೆಗೆ ಬೈಕ್ ರ‍್ಯಾಲಿ ನಡೆಸಿದ ಪ್ರತಿಭಟನಾಕಾರರು, ಮೂರು ಪ್ರಕರಣಗಳ ನಿಷ್ಪಕ್ಷಪಾತ ತನಿಖೆ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಹೋರಾಟಕ್ಕೂ ಮುನ್ನ ಹದ್ದಿನಾಳ ಗ್ರಾಮದಲ್ಲಿ ರಸ್ತೆ ತಡೆ ನಡೆಸಲಾಯಿತು. ಬಳಿಕ ಬೈಕ್ ರ‍್ಯಾಲಿ ಹಾಗೂ ಸಂವಿಧಾನ ಜಾಗೃತಿ ಜಾಥಾ ನಡೆಯಿತು. ರ‍್ಯಾಲಿಯುದ್ದಕ್ಕೂ ದಲಿತಪರ ಹೋರಾಟಗಾರ ಅಂಬಣ್ಣ ಅರೋಲಿಕರ್ ಹಾಗೂ ಸಂಗಡಿಗರು ಕ್ರಾಂತಿ ಗೀತೆಗಳನ್ನು ಹಾಡಿದರು.
ಹೋರಾಟಗಾರರಾದ ಎಸ್. ಮಾರೆಪ್ಪ ವಕೀಲ, ನರಸಪ್ಪ ದಂಡೋರ ಸೇರಿದಂತೆ ಹಲವರು ಮಾತನಾಡಿ, ದಲಿತರ ಮೇಲೆ ನಡೆಯುತ್ತಿರುವ ಭೀಕರ ಹತ್ಯೆಗಳು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಪ್ರಕರಣಗಳಲ್ಲಿರುವ ಆರೋಪಿಗಳು ಯಾರೇ ಆಗಿದ್ದರೂ, ನಿಷ್ಪಕ್ಷಪಾತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದಲಿತಪರ ಹೋರಾಟಗಾರರಾ ರವೀಂದ್ರನಾಥ ಪಟ್ಟಿ, ಎಂ ಆರ್ ಎಸ್ ಎಚ್ ರಾಜ್ಯಾಧ್ಯಕ್ಷ ಶಿವರಾಯ ಅಕ್ಕರಕಿ, ದಲಿತ ಸಂಘರ್ಷ ಸಮಿತಿ ಸಂಚಾಲಕ ಹನುಮಂತಪ್ಪ ಕಾಕರಗಲ್, ಶಿವಪ್ಪ ಫಲಕನಮರಡಿ, ಎಸ್ ಮಾರೆಪ್ಪ, ಹೇಮರಾಜ ಅಸ್ಕಿಹಾಳ, ಶಾಂತಕುಮಾರ ಹೊನ್ನಟಗಿ, ರಾಜಪ್ಪ ಸಿರವಾರಕರ್, ಜೆ ಅಬ್ರಾಂ ಹೊನ್ನಟಗಿ, ಹಿರಿಯ ಬಹುಜನ ಚಿಂತಕ ಎಂ ಆರ್ ಬೇರಿ, ಎಂ ಆರ್ ಎಸ್ ಎಚ್ ಜಿಲ್ಲಾಧ್ಯಕ್ಷ ಹನುಮಂತ ಮನ್ನಾಪುರಿ, ವಕೀಲ ತಮ್ಮಣ್ಣ ಬೊಮ್ಮನಾಳ, ಬಸವರಾಜ, ಸೂರಿ, ನರಸಪ್ಪ ದಂಡೋರ, ಹಿರಿಯ ಮುಖಂಡ ಭೂತಪ್ಪ ಜಾಲಹಳ್ಳಿ, ಯಲ್ಲಪ್ಪ ಆಲ್ದರ್ತಿ, ಜೈ ಭೀಮ ಹನುಮಂತ, ಬಸವರಾಜ ನಕ್ಕುಂದಿ, ಯೇಸು ಗಬ್ಬೂರು, ಜಾಕೋಬ್ ಬೋಮ್ಮನಾಳ, ಬಸವರಾಜ ಜಗ್ಲಿ, ಮೌನೇಶ ಗಾಣದಾಳ, ಸಾಬಣ್ಣ ಕಮಲದಿನ್ನಿ, ಮರಿಗೌಡ ಮಲದಕಲ್, ಯಲ್ಲಪ್ಪ ಹಿರೇಬಾದರದಿನ್ನಿ, ಮೌನೇಶ ಪೀತಗಲ, ನರಸಿಂಹಲು, ಎಲ್ ವಿ ಸುರೇಶ, ಡಿ ಜಯಪ್ಪ ಸಿರವಾರ, ಮಲ್ಲಪ್ಪ ನವಲಕಲ ಮತ್ತು ಹತ್ತಕ್ಕೂ ಹೆಚ್ಚು ದಲಿತಪರ ಸಂಘಟನೆಯ ರಾಜ್ಯ ಜಿಲ್ಲಾ ಮತ್ತು ವಿವಿಧ ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಬಿಎಸ್ಪಿ ಕಾರ್ಯಕರ್ತರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.