ರಾಯಚೂರು ಜಿಲ್ಲೆ | ಕರಡು ಪಟ್ಟಿಯಲ್ಲಿ 13,93,163 ಮತದಾರರು : ಜಿಲ್ಲಾಧಿಕಾರಿ ಪೂವಿತಾ ಎಸ್.
ರಾಯಚೂರು : ಜಿಲ್ಲೆಯ ಎಲ್ಲಾ ಮತಕ್ಷೇತ್ರಗಳಿಗೆ ಸಂಬಂಧಿಸಿದಂತೆ 2026ನೇ ಸಾಲಿನ ಕರಡು ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 13,93,163 ಮತದಾರರು ಕರಡು ಪಟ್ಟಿಯಲ್ಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್. ಅವರು ಹೇಳಿದರು.
ಆ.4ರ ಸೋಮವಾರ ದಂದು ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಯಚೂರು ಜಿಲ್ಲೆಯಲ್ಲಿ ಒಟ್ಟು 13,93,163 (ಪುರುಷ, ಮಹಿಳೆ ಮತ್ತು ಇತರೆ ಮತದಾರರು ಒಳಗೊಂಡಂತೆ) ಮತದಾರರು ಇದ್ದಾರೆ. ಹಿಂದಿನ ಮತದಾರರ ಪಟ್ಟಿಯಿಂದ ಒಟ್ಟು 3,21,396 ಮತದಾರರನ್ನು ತೆಗೆದುಹಾಕಲಾಗಿದೆ. ಅದರಲ್ಲಿ ಮರಣ ಹೊಂದಿದವರು 61,385, ಫರ್ಮನೆಂಟ್ ಆಗಿ ಶಿಫ್ಟ್ ಆದವರು 1,87,941, ಗೈರು ಮತದಾರರು 30,733 ಹಾಗೂ ಇತರರು 365 ಒಳಗೊಂಡಿದೆ ಎಂದರು.
2025ರ ಮತದಾರರ ಪಟ್ಟಿಗೆ ಹೋಲಿಸಿದರೆ ಈ ಬಾರಿಯ ಕರಡು ಪಟ್ಟಿಯಲ್ಲಿ 3,21,396 (ಶೇಕಡಾ 18.75%) ಮತದಾರರ ವ್ಯತ್ಯಾಸವಿದೆ.
ಹೊಸ ಮತದಾರರ ನೋಂದಣಿ: ಅಕ್ಟೋಬರ್ 1, 2026ಕ್ಕೆ 18 ವಯಸ್ಸು ಪೂರ್ಣಗೊಳ್ಳುವ ಹೊಸ ಮತದಾರರು ಫಾರ್ಮ್-6 ಅನ್ನು ಆನ್‌ಲೈನ್ ಮೂಲಕ ಅಥವಾ ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಸಲ್ಲಿಸಿ ತಮ್ಮ ಹೆಸರನ್ನು ಸೇರಿಸಿಕೊಳ್ಳಬಹುದು. ಎಲ್ಲಾ ಪರಿಷ್ಕರಣೆ ಹಾಗೂ ಆಕ್ಷೇಪಣೆಗಳ ವಿಲೇವಾರಿಯ ನಂತರ ಅಂತಿಮ ಮತದಾರರ ಪಟ್ಟಿಯು ಅಕ್ಟೋಬರ್ 27, 2026 ರಂದು ಬಿಡುಗಡೆಯಾಗಲಿದೆ.
ಸಾರ್ವಜನಿಕರು ತಮ್ಮ ಹೆಸರುಗಳ ಪರಿಶೀಲನೆ, ವಿಳಾಸ ಬದಲಾವಣೆ ಅಥವಾ ಹೊಸ ಸೇರ್ಪಡೆಗಾಗಿ ನಿಗದಿತ ಅವಧಿಯೊಳಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆಯ ಶಿರಸ್ತಾದರ ಋಶಿಕೇಶಿ ಸೇರಿದಂತೆ ಇತರರು ಇದ್ದರು.