ಅಶ್ವಿನಿ ಅತ್ಯಾಚಾರ-ಕೊಲೆ ಖಂಡಿಸಿ ರಾಯಚೂರಿನಲ್ಲಿ ಪ್ರತಿಭಟನೆ
ರಾಯಚೂರು: ಸಿರವಾರ ತಾಲೂಕಿನ ಹೊಕ್ರಾಣಿ ಗ್ರಾಮದಲ್ಲಿ 22 ವರ್ಷದ ದಲಿತ ಯುವತಿ ಕುಮಾರಿ ಅಶ್ವಿನಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿ, ಮೃತದೇಹವನ್ನು ಬಾವಿಗೆ ಎಸೆದಿರುವ ಆರೋಪದ ಪ್ರಕರಣವನ್ನು ಖಂಡಿಸಿ ಸಣ್ಣ ಬಾಬು ನೇತೃತ್ವದಲ್ಲಿ ರಾಯಚೂರಿನಲ್ಲಿ ಪ್ರತಿಭಟನೆ ನಡೆಯಿತು.
ನಗರದ ಮಾದಾರ ಚನ್ನಯ್ಯ ವೃತ್ತದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ದಲಿತ ಸಂಘಟನೆಗಳ ಮುಖಂಡರು, ಹೋರಾಟಗಾರರು, ಕನ್ನಡಪರ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯ ಬಳಿಕ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ ಮುಖಂಡರು, ಪ್ರಕರಣದ ಎಲ್ಲ ಆರೋಪಿಗಳನ್ನು ಶೀಘ್ರ ಬಂಧಿಸಿ ಕಾನೂನುಬದ್ಧವಾಗಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಆ.19ರಂದು ಬಹಿರ್ದೆಸೆಗೆಂದು ಮನೆಯಿಂದ ಹೊರಹೋಗಿದ್ದ ಅಶ್ವಿನಿ ಅವರನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿಯ ಪತ್ತೆಗಾಗಿ ತನಿಖೆ ಮುಂದುವರಿದಿದೆ.
ಘಟನೆಯನ್ನು ಖಂಡಿಸಿ ಜಿಲ್ಲೆಯ ವಿವಿಧ ದಲಿತಪರ ಸಂಘಟನೆಗಳು ಹಾಗೂ ಹೋರಾಟಗಾರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.