×
Ad

ಅಯ್ಯಪ್ಪ ಮಾಲಾಧಾರಿಗಳಿಗೆ ತಮ್ಮ ಮನೆಯಲ್ಲೇ ಭೋಜನದ ವ್ಯವಸ್ಥೆ ಮಾಡುತ್ತಿರುವ ಕರೀಂ ಸಾಬ್

Update: 2024-12-28 23:36 IST

ರಾಯಚೂರು: ಜಿಲ್ಲೆಯ ಕವಿತಾಳ ಪಟ್ಟಣದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಬಿ.ಎ.ಕರೀಂಸಾಬ್ ಎಂಬವರು ತಮ್ಮ ಮನೆಯಲ್ಲಿ ಶನಿವಾರ ಊಟದ ವ್ಯವಸ್ಥೆ ಮಾಡುವ ಮೂಲಕ ಭಾವೈಕ್ಯತೆ ಸಾರಿದ್ದಾರೆ.

ಕಳೆದ ಮೂರು ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಭಕ್ತರಿಗೆ ತಮ್ಮ ಮನೆಯಲ್ಲಿ ಭೋಜನಾ ವ್ಯವಸ್ಥೆ ಮಾಡುತ್ತಿದ್ದಾರೆ. ಕರೀಂಸಾಬ್ ಅವರ ಆಹ್ವಾನವನ್ನು ಅಯ್ಯಪ್ಪ ಸ್ವಾಮಿ ಭಕ್ತರು ಸ್ವೀಕರಿಸಿ ಭೋಜನ ಕೂಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಶಬರಿಮಲೆಗೆ ಪಾದಾಯಾತ್ರೆ ಮಾಡಿ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಬಂದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಕರೀಂಸಾಬ್ ಸ್ವತಃ ತಮ್ಮ ಮನೆಯಲ್ಲಿ ಹೋಳಿಗೆ, ಲಡ್ಡು, ಚಪಾತಿ, ಪಲ್ಯ, ಹಸಿ ತರಕಾರಿ, ಅನ್ನ, ಸಾಂಬಾರು ಉಣಬಡಿಸಿದ್ದಾರೆ.

ಅಯ್ಯಪ್ಪ ಭಕ್ತರಿಗೆ ಯಾವುದೇ ಜಾತಿ, ಧರ್ಮದ ಭೇದ-ಭಾವ ಇಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ ಹೀಗೆ ಯಾವುದೇ ಧರ್ಮದವರ ಮನೆಯಲ್ಲಿ ಪೂಜೆ ಮಾಡಲು ಮತ್ತು ಪ್ರಸಾದ ಸ್ವೀಕರಿಸಲು ಅವಕಾಶವಿದೆ. ಭಕ್ತಿಯಿಂದ ಆಹ್ವಾನ ನೀಡಿದರೆ ನಾವು ತಿರಸ್ಕರಿಸುವುದಿಲ್ಲ ಎಂದು ಮಾಲಾಧಾರಿ ಗುರುಸ್ವಾಮಿ ಚನ್ನಯ್ಯ ಹೇಳಿದರು.

ಕಳೆದ ಮೂರು ವರ್ಷಗಳಿಂದ ಅಯ್ಯಪ್ಪಸ್ವಾಮಿ ಭಕ್ತರಿಗೆ ಮನೆಯಲ್ಲಿ ಭೋಜನ ವ್ಯವಸ್ಥೆ ಮಾಡುತ್ತಿದ್ದೇನೆ. ಧರ್ಮ, ಜಾತಿ ಎಂದು ಬೇಧ ಮಾಡದೆ ಮಾನವಕುಲಕ್ಕೆ ಒಳಿತನ್ನು ಬಯಸುವುದು ಶ್ರೇಷ್ಠ ಎಂಬುದು ನನ್ನ ನಂಬಿಕೆ ಎಂದು ಕರೀಂಸಾಬ್ ಅವರು ಹೇಳಿದರು.

ಭೋಜನಾಕೂಟದಲ್ಲಿ ಯಮುನಪ್ಪ ಯಾದವ್, ಗಂಗಪ್ಪ ದಿನ್ನಿ, ತಾಯಣ್ಣ ಯಾದವ್, ಪಂಪಾಪತಿ, ಸಂಜು, ವೆಂಕಟೇಶ, ಕೃಷ್ಣ, ವಿಜಯ ಸೇರಿದಂತೆ ಕವಿತಾಳ ಮತ್ತು ಪಾತಾಪುರ ಅಯ್ಯಪ್ಪ ಪೀಠದ ಸ್ವಾಮಿ ಭಕ್ತರು ಇದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News