ಸಿಂಧನೂರಿನ 19 ಗ್ರಾಮಗಳನ್ನು ಮಸ್ಕಿಗೆ ಸೇರಿಸುವ ನಿರ್ಧಾರಕ್ಕೆ ವಿರೋಧ : ಕಲಮಂಗಿಯಲ್ಲಿ ʼರಸ್ತೆ ರೋಕೋʼ ಪ್ರತಿಭಟನೆ
ರಾಯಚೂರು: ಸಿಂಧನೂರು ತಾಲೂಕಿನ ತುರ್ವಿಹಾಳ ಹಾಗೂ ಗುಂಜಳ್ಳಿ ಹೋಬಳಿಯ 19 ಗ್ರಾಮಗಳನ್ನು ಮಸ್ಕಿ ತಾಲೂಕಿಗೆ ಸೇರಿಸುವ ಪ್ರಸ್ತಾವನೆಗೆ ವಿರೋಧ ವ್ಯಕ್ತವಾಗಿದ್ದು, ಕರುನಾಡು ಹಸಿರು ಸೇನಾ ಸಂಘ ಹಾಗೂ ಕೆಆರ್‌ಎಸ್ ಪಕ್ಷದ ನೇತೃತ್ವದಲ್ಲಿ ಗುರುವಾರ ಸಿಂಧನೂರು ತಾಲೂಕಿನ ಕಲಮಂಗಿ ಗ್ರಾಮದಲ್ಲಿ ರಸ್ತೆ ರೋಕೋ ಚಳವಳಿ ನಡೆಸಲಾಯಿತು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಅವರು ತುರ್ವಿಹಾಳ ಹೋಬಳಿಯ 3 ಪಂಚಾಯತ್‌ಗಳ 11 ಹಳ್ಳಿಗಳು ಹಾಗೂ ಗುಂಜಳ್ಳಿ ಹೋಬಳಿಯ 8 ಹಳ್ಳಿಗಳನ್ನು ಸೇರಿಸಿ ಒಟ್ಟು 19 ಹಳ್ಳಿಗಳನ್ನು ಮಸ್ಕಿ ತಾಲೂಕಿಗೆ ಸೇರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಈ ಕ್ರಮವನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.
ಯಾವುದೇ ಗ್ರಾಮಗಳನ್ನು ಮತ್ತೊಂದು ತಾಲೂಕಿಗೆ ಸೇರಿಸಬೇಕಾದರೆ ಗ್ರಾಮ ಪಂಚಾಯತ್ ಸದಸ್ಯರು, ಅಧ್ಯಕ್ಷರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಬೇಕಾಗುತ್ತದೆ. ಆದರೆ ಯಾವುದೇ ಚರ್ಚೆ ನಡೆಸದೇ ಏಕಪಕ್ಷೀಯವಾಗಿ ಪತ್ರ ಬರೆದು ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ತುರ್ವಿಹಾಳ ಮತ್ತು ಗುಂಜಳ್ಳಿ ಹೋಬಳಿಯ ಕೆಲ ಗ್ರಾಮಗಳು ಮಸ್ಕಿ ತಾಲ್ಲೂಕಿಗೆ ಸುಮಾರು 60 ಕಿ.ಮೀ ದೂರದಲ್ಲಿವೆ. ಅಲ್ಲಿಗೆ ಹೋಗಲು ಸಾರಿಗೆ ಸೌಲಭ್ಯ ಸರಿಯಾಗಿ ಇಲ್ಲ. ಆಡಳಿತಾತ್ಮಕವಾಗಿ ಸಿಂಧನೂರೇ ಸೂಕ್ತ ಎಂದು ಗ್ರಾಮಸ್ಥರ ಮನವಿ. ಇದನ್ನು ಲೆಕ್ಕಿಸದೆ ಮಸ್ಕಿಗೆ ಸೇರಿಸುವ ಕ್ರಮ ಅನ್ಯಾಯಕರ ಎಂದು ಪ್ರತಿಭಟನಾಕಾರರು ದೂರಿದರು.
ಸಿಂಧನೂರಿನ 19 ಗ್ರಾಮಗಳನ್ನು ಮಸ್ಕಿಗೆ ಸೇರಿಸುವಂತೆ ಶಾಸಕ ಹಂಪನಗೌಡ ಬಾದರ್ಲಿ ಸಲ್ಲಿಸಿದ ಪತ್ರದ ಹಿನ್ನೆಲೆಯಲ್ಲಿ, ಅಪರ ಜಿಲ್ಲಾಧಿಕಾರಿಗಳು ಮಸ್ಕಿ ಹಾಗೂ ಸಿಂಧನೂರು ತಹಶೀಲ್ದಾರರಿಗೆ ಕೂಲಂಕುಷವಾಗಿ ವಿಚಾರಣೆ ನಡೆಸಿ, ಎರಡು ದಿನಗಳಲ್ಲಿ ಸಂಪೂರ್ಣ ದಾಖಲೆಗಳೊಂದಿಗೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಇನ್ನೊಂದೆಡೆ, ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ಈ ಕ್ರಮವನ್ನು ವಿರೋಧಿಸಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಒಂದೇ ಪಕ್ಷದ ಇಬ್ಬರು ಶಾಸಕರ ಭಿನ್ನ ನಿಲುವು ರಾಜಕೀಯವಾಗಿ ಬಿಸಿ ಚರ್ಚೆಗೆ ಗ್ರಾಸವಾಗುತ್ತಿದೆ. ಇದರ ನಡುವೆ ಗ್ರಾಮಸ್ಥರ ಹಿತಾಸಕ್ತಿ ಹಾಳಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ಈ ನಿರ್ಧಾರ ಹಿಂಪಡೆದು, ಗ್ರಾಮಗಳನ್ನು ಸಿಂಧನೂರಲ್ಲೇ ಮುಂದುವರೆಸಬೇಕು. ಇಲ್ಲವಾದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಪ್ರತಿಭಟನೆಯಲ್ಲಿ ಕರುನಾಡು ಹಸಿರು ಸೇನಾ ಸಂಘದ ಅಧ್ಯಕ್ಷ ಬಸವಂತರಾಯ, ಉಪಾಧ್ಯಕ್ಷ ದೇವರೆಡ್ಡಿ, ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ನಿರುಪಾದಿ ಗೋಮರ್ಸಿ ಮತ್ತಿತರರು ಉಪಸ್ಥಿತರಿದ್ದರು.