×
Ad

ಆರ್ಟಿಪಿಎಸ್‌ ಭೂ ಸಂತ್ರಸ್ತರಿಗೆ ಉದ್ಯೋಗ ನೀಡಲು ಆಗ್ರಹಿಸಿ ಡಿ.30 ರಂದು ಹೋರಾಟ: ಬಸವರಾಜ ಸ್ವಾಮಿ

Update: 2024-12-28 21:37 IST

ರಾಯಚೂರು: ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತದ ರಾಯಚೂರು ಬೃಹತ್‌ ಶಾಖೋತ್ಪನ್ನ ವಿದ್ಯುತ್‌ ಸ್ಥಾವರ (ಆರ್ಟಿಪಿಎಸ್‌) ಸ್ಥಾಪನೆಗಾಗಿ ಭೂಮಿ ಹಾಗೂ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಉದ್ಯೋಗ ನೀಡಲು ಆಗ್ರಹಿಸಿ ಡಿ.30 ರಂದು ತಾಲ್ಲೂಕಿನ ಶಕ್ತಿನಗರದಲ್ಲಿರುವ ಆರ್ ಟಿಪಿಎಸ್‌ ಮುಂಭಾಗದಲ್ಲಿ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ ಎಂದು ಭೂಸಂತ್ರಸ್ತರ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಸವರಾಜ ಸ್ವಾಮಿ ತಿಳಿಸಿದರು.

ಅವರಿಂದು ಮಾದ್ಯಮಗೋಷ್ಠಿಯಲ್ಲಿ ಮಾತನಾಡಿ,ನಾಲ್ಕು ದಶಕಗಳ ಹಿಂದೆ ಸ್ಥಾಪನೆಗೊಂಡ ಆರ್ಟಿಪಿಎಸ್‌ಗಾಗಿ ದೇವಸುಗೂರು, ಚಿಕ್ಕಸುಗೂರು, ಹೆಗ್ಗಸನಹಳ್ಳಿ ,ಯದ್ಲಾಪುರ ಸೇರಿದಂತೆ ಸುತ್ತ-ಮುತ್ತಲಿನ ಹಳ್ಳಿಗಳ ನೂರಾರು ಜನರು ಸಾವಿರಾರು ಎಕರೆ ಜಮೀನನ್ನು ನೀಡಿದ್ದು ಅವರಿಗೆ ಉದ್ಯೋಗ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದ್ದ ಕೆಪಿಸಿಎಲ್‌ ಅಧಿಕಾರಿಗಳು ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಅನ್ಯಾಯ ಮಾಡುತ್ತಲೇ ಬಂದಿದ್ದಾರೆ ಎಂದು ಆರೋಪಿಸಿದರು.

ಕೆಪಿಸಿಎಲ್‌ 2005 ರಲ್ಲಿ ಉದ್ಯೋಗಕ್ಕಾಗಿ ನೋಟಿಫಿಕೇಶ್‌ ಹೊರಡಿಸಿತ್ತು ಅದರಂತೆ 554 ಜನರು ಅರ್ಜಿ ಸಲ್ಲಿಸಿದ್ದರು. ಆದರೆ ಅವರಲ್ಲಿ ಕೇವಲ 199 ಜನರ ಅರ್ಹತಾ ಪಟ್ಟಿಯನ್ನು ಏಕಪಕ್ಷಿಯವಾಗಿ ಸಿದ್ಧಪಡಿಸಿದ ಅಧಿಕಾರಿಗಳು ಇಲ್ಲಿತನಕ 76 ಜನರಿಗೆ ಮಾತ್ರ ಕೆಲಸ ನೀಡಿದ್ದು, ಉಳಿದ ಕುಟುಂಬಸ್ಥರು, ಉದ್ಯೋಗಾಕಾಂಕ್ಷಿಗಳಿಗೆ ಅನರ್ಹರೆಂದು ತಿಳಿಸಿ ಅವರನ್ನು ಆಯ್ಕೆಯಿಂದ ದೂರವಿಟ್ಟು ತೀವ್ರ ಅನ್ಯಾಯ ಮಾಡಿದ್ದಾರೆ ಈ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದು ಅರ್ಹರನ್ನು ಉದ್ಯೋಗಕ್ಕೆ ಪಡೆಯಬಹುದು ಎಂದು ಕೋರ್ಟ್‌ ಆದೇಶವಿದ್ದರು ಸಹ ಇಲ್ಲಿಯವರೆಗೆ ನೇಮಕಾತಿ ಮಾಡಿಕೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಆರ್ಟಿಪಿಎಸ್‌ಗಾಗಿ ಭೂಮಿ ಮತ್ತು ಮನೆಗಳನ್ನು ಕಳೆದುಕೊಂಡವರಿಗೆ ನ್ಯಾಯ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಶಾಸಕರು, ಸಂಸದರು, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ದಶಕಗಳು ಕಳೆಯುತ್ತಿದ್ದರು ಸಂತ್ರಸ್ತರ ಕುಟುಂಬಸ್ಥರಿಗೆ, ವಾರಸುದಾರರಿಗೆ ಉದ್ಯೋಗವಿಲ್ಲದಂತಾಗಿದ್ದು, ತಕ್ಷಣ ಉದ್ಯೋಗ ನೀಡುವುದರ ಕುರಿತು ಸ್ಪಷ್ಟತೆಯನ್ನು ಅಧಿಕಾರಿಗಳು ಕೊಡಬೇಕು. 30 ರಂದು ಆರ್ಟಿಪಿಎಸ್‌ ಕಚೇರಿ ಮುಂಭಾಗದಲ್ಲಿ ಹೋರಾಟ ನಡೆಸಲಿದ್ದು, ಇದಕ್ಕು ಜಗ್ಗದಿದ್ದರೇ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಸಂಘದ ಅಧ್ಯಕ್ಷ ಪಿ.ಸೂಗಪ್ಪ, ಪದಾಧಿಕಾರಿಗಳಾದ ಶರಣಪ್ಪ, ಮಾರೆಪ್ಪ, ಡೋಣಿ ರಾಮಪ್ಪ, ಹನುಮಂತಪ್ಪ ಸೇರಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News