Sindhanur | ಕೃಷಿಯಿಲ್ಲದೆ ಮಾನವ ಜೀವನ ಅಸಾಧ್ಯ: ಕೆ.ವಿರೂಪಾಕ್ಷಪ್ಪ
'ಕಾರಹುಣ್ಣಿಮೆ ಸಂಭ್ರಮ' ಕಾರ್ಯಕ್ರಮ
ಸಿಂಧನೂರು: ಆಧುನಿಕತೆ ಎಷ್ಟೇ ಮುಂದುವರೆದರೂ ಕೃಷಿ ಮತ್ತು ಒಕ್ಕಲುತನವಿಲ್ಲದೆ ಮಾನವ ಜೀವನ ಸಾಗುವುದು ಅಸಾಧ್ಯ. ಆಹಾರ ಭದ್ರತೆಗಾಗಿ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಹೇಳಿದರು.
ನಗರದ ಕುಷ್ಟಗಿ ರಸ್ತೆಯ ಜಾನುವಾರು ಮಾರುಕಟ್ಟೆಯಲ್ಲಿ ತಾಲೂಕು ಕಾರಹುಣ್ಣಿಮೆ ಸಾಂಸ್ಕೃತಿಕ ಕ್ರೀಡಾ ಉತ್ಸವ ಟ್ರಸ್ಟ್ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಸಂಯುಕ್ತಾಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಮುಂಗಾರು ಕಾರಹುಣ್ಣಿಮೆ ಸಂಭ್ರಮ–2026 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭೂಮಿಯ ಮೇಲಿರುವ ಪ್ರತಿಯೊಬ್ಬರೂ ಕೃಷಿಕ ಕುಟುಂಬದೊಂದಿಗೆ ನಂಟು ಹೊಂದಿದ್ದು, ಕೃಷಿಯಿಂದ ಉತ್ಪಾದನೆಯಾಗುವ ಆಹಾರ ಧಾನ್ಯಗಳೇ ಮಾನವ ಬದುಕಿನ ಆಧಾರವಾಗಿವೆ. ಹಲವು ವರ್ಷಗಳಿಂದ ಕಾರಹುಣ್ಣಿಮೆ ಸ್ಪರ್ಧೆಗಳ ಮೂಲಕ ರೈತರಲ್ಲಿ ಕೃಷಿ ಬಗ್ಗೆ ಆಸಕ್ತಿ ಮತ್ತು ಉತ್ಸಾಹ ಮೂಡಿಸುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಎತ್ತುಗಳ ಸಂಖ್ಯೆ ಹಾಗೂ ಪಶುಸಂಗೋಪನೆ ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ರೈತರು ಮತ್ತೆ ಒಕ್ಕಲುತನ ಮತ್ತು ಪಶುಸಂಗೋಪನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಎಪಿಎಂಸಿ ಕಾರ್ಯದರ್ಶಿ ಡಾ. ಶಿವಾನಂದ ಕುಂಬಾರ ಮಾತನಾಡಿ, ಕೃಷಿಯೊಂದಿಗೆ ಪಶುಸಂಗೋಪನೆಯನ್ನು ಸಮನ್ವಯಗೊಳಿಸಿದರೆ ರೈತರ ಆದಾಯ ಹೆಚ್ಚಲು ಸಾಧ್ಯ. ಸ್ಥಳೀಯ ಮತ್ತು ಪಾರಂಪರಿಕ ಜಾನುವಾರು ತಳಿಗಳ ಸಂರಕ್ಷಣೆಗೂ ರೈತರು ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಯುವ ಮುಖಂಡ ರವಿ ಮಲ್ಲದಗುಡ್ಡ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರೇಶ ಯಡಿಯೂರಮಠ ಕಾರ್ಯಕ್ರಮದ ಸಾನಿಧ್ಯವಹಿಸಿದ್ದರು.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ನ ಅಧ್ಯಕ್ಷ ಶರಣಪ್ಪ ರಡ್ಡೆರ್, ಮುಖಂಡರಾದ ಎನ್.ಶಿವನಗೌಡ ಗೊರೇಬಾಳ, ವೀರನಗೌಡ ಬಾದರ್ಲಿ, ಕೆ.ಮರಿಯಪ್ಪ, ಛತ್ರಪ್ಪ ಕುರಕುಂದಿ, ಖಾಜಿಮಲಿಕ್ ವಕೀಲ, ವೆಂಕಟರಾವ್ ಬಾದರ್ಲಿ, ಟ್ರಸ್ಟ್ ಸಮಿತಿಯ ಅಧ್ಯಕ್ಷ ಚೆನ್ನನಗೌಡ ಮೇಟಿ ಸೇರಿದಂತೆ ಟ್ರಸ್ಟ್ ನ ಪದಾಧಿಕಾರಿಗಳು ರೈತರು ಭಾಗವಹಿಸಿದ್ದರು. ಕಾರುಣ್ಯಾಶ್ರಮದ ಚೆನ್ನಬಸವ ಸ್ವಾಮಿ ಹರಟೆನೂರು ನಿರೂಪಿಸಿದರು.