ರಾಯಚೂರು | ಜಾತಿಗಣತಿಯಲ್ಲಿ ಬಸವಣ್ಣ ಅನುಯಾಯಿಗಳು ಧರ್ಮದ ಕಾಲಂನಲ್ಲಿ ‘ಇತರೆ’ ಎಂದು ನಮೂದಿಸಬೇಕು : ಹರವಿ ನಾಗನಗೌಡ
ರಾಯಚೂರು: ಹಿಂದುಳಿದ ವರ್ಗಗಳ ಜಾತಿ ಗಣತಿಯಲ್ಲಿ ಬಸವಾನುಯಿಗಳು ಧರ್ಮದ ಕಾಲಂನಲ್ಲಿ ‘ಇತರೆ’ ಎಂದು, ಜಾತಿ ಕಾಲಂನಲ್ಲಿ ‘ಲಿಂಗಾಯತ’ ಎಂದು ಬರೆಯಿಸಬೇಕು ಎಂದು ಬಸವ ಸಂಸ್ಕೃತಿ ಅಭಿಯಾನದ ಸಂಚಾಲಕ ಹರವಿ ನಾಗನಗೌಡ ಹೇಳಿದರು.
ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಲಿಂಗಾಯತ ಧರ್ಮವು ಸ್ವತಂತ್ರ ಧರ್ಮವಾಗಿದ್ದು, ಕಾಯಕದ ಆಧಾರದ ಮೇಲೆ ಜಾತಿಗಳಾಗಿ ವಿಂಗಡಿಸಲಾಗಿದೆ. ವಿಶ್ವಗುರು ಬಸವಣ್ಣನವರೇ ಲಿಂಗಾಯತ ಧರ್ಮದ ಸ್ಥಾಪಕರು. ಸಮುದಾಯದಲ್ಲಿ 97 ಉಪಪಂಗಡಗಳಿವೆ. ಆದ್ದರಿಂದ ಸಮೀಕ್ಷೆಯ ಧರ್ಮ ಅಂಕಣ (ಕಲಂ 8)ದಲ್ಲಿ ‘ಇತರೆ’, ಜಾತಿ ಕಲಂನಲ್ಲಿ ‘ಲಿಂಗಾಯತ’, ಉಪಜಾತಿ ಕಾಲಂ (10)ನಲ್ಲಿ ತಮ್ಮ ಉಪಜಾತಿ ನಮೂದಿಸಬೇಕು” ಎಂದು ತಿಳಿಸಿದರು.
ಮೀಸಲಾತಿ ಧರ್ಮದ ಮೇಲೆ ನಿರ್ಧಾರವಾಗುವುದಿಲ್ಲ, ಅದು ಜಾತಿಯ ಆಧಾರದ ಮೇಲೆ ಮಾತ್ರ ನೀಡಲಾಗುತ್ತದೆ. ಕೆಲವರು ಗೊಂದಲ ಉಂಟು ಮಾಡುವ ಕೆಲಸ ಮಾಡುತ್ತಿದ್ದಾರೆ. ಲಿಂಗಾಯತರು ಎಚ್ಚರಿಕೆಯಿಂದ ಸಮೀಕ್ಷೆಯಲ್ಲಿ ವಿವರ ನೀಡಬೇಕು ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ರುದ್ರಯ್ಯ ಮಾತನಾಡಿ, “ಈ ಜಾತಿ ಗಣತಿ ಸಮಾಜದ ಜನಸಂಖ್ಯೆ ಸಂಗ್ರಹಿಸಲು ನಡೆಯುತ್ತಿದೆ, ಧರ್ಮಕ್ಕೆ ಸಂಬಂಧಪಟ್ಟಿಲ್ಲ. ಆದರೆ ಲಿಂಗಾಯತ ಸ್ವತಂತ್ರ ಧರ್ಮ. ಸೊನ್ನಲಿಗೆಯ ಸಿದ್ದರಾಮಯ್ಯ ನವರು ಕೂಡ ಅನೇಕ ವಚನಗಳಲ್ಲಿ ಬಸವ ಧರ್ಮವನ್ನು ಉಲ್ಲೇಖಿಸಿದ್ದಾರೆ. ಹೀಗಾಗಿ ಗೊಂದಲಕ್ಕೊಳಗಾಗದೆ ಎಲ್ಲರೂ ಧರ್ಮ ಕಾಲಂನಲ್ಲಿ ‘ಇತರೆ’, ಜಾತಿ ಕಲಂನಲ್ಲಿ ‘ಲಿಂಗಾಯತ’, ಉಪಜಾತಿ ಕಾಲಂನಲ್ಲಿ ತಮ್ಮ ಉಪಜಾತಿ ಬರೆಯಿಸಬೇಕು ಎಂದು ತಿಳಿಸಿದರು.
ರಾಚನಗೌಡ ಕೋಳೂರು, ಮಹಾಜನ ಶೆಟ್ಟಿ, ಕೆ. ಬಸವರಾಜ, ದೇವೆಂದ್ರಮ್ಮ, ಕುರುಗೋಡು ಬಸವರಾಜ ಸೇರಿದಂತೆ ಹಲವರು ಉಪಸ್ಥಿತರಿದ್ದರು.