×
Ad

ರಾಯಚೂರು | ಆಕ್ಸಿಜನ್ ಕೊರತೆಯಿಂದ ಕ್ಯಾನ್ಸರ್ ರೋಗಿ ಸಾವು : ಒಪೆಕ್ ಆಸ್ಪತ್ರೆಯ ವೈದ್ಯಾಧಿಕಾರಿ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

Update: 2025-09-22 18:21 IST

ರಾಯಚೂರು: ಇಲ್ಲಿನ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ (ಒಪೆಕ್) ಆಸ್ಪತ್ರೆಯಲ್ಲಿ ದಾಖಲಾದ ಕ್ಯಾನ್ಸರ್ ರೋಗಿ ಶ್ರೀನಿವಾಸ ಅವರು ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ವೈದ್ಯಾಧಿಕಾರಿ, ಸ್ಟಾಫ್ ನರ್ಸ್ ಹಾಗೂ ವಾರ್ಡ್‌ಬಾಯ್ ವಿರುದ್ಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂರು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಶ್ರೀನಿವಾಸ ಸೆ.18ರಂದು ಬೆಳಿಗ್ಗೆ 11:30ಕ್ಕೆ ಉಸಿರಾಟದ ತೊಂದರೆಯಿಂದ ಒಪೆಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬೆಳಿಗ್ಗೆ ಕ್ಯಾನ್ಸರ್ ತಜ್ಞ ಹಾಗೂ ಆಸ್ಪತ್ರೆಯ ವಿಶೇಷಾಧಿಕಾರಿ ಡಾ.ರಮೇಶ ಬಿ.ಸಾಗರ್ ಅವರು ಚಿಕಿತ್ಸೆ ನೀಡಿದ್ದರು.

ಮಧ್ಯಾಹ್ನ ಕೆಲವು ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ, ಹಾಸಿಗೆಯೊಂದಿಗೇ ಕೊಂಡೊಯ್ಯಲಾಗಿದ್ದ ಆಕ್ಸಿಜನ್ ಸಿಲಿಂಡರ್ ಖಾಲಿಯಾಗಿತ್ತು. ಸರಿಯಾಗಿ ಪರಿಶೀಲನೆ ಮಾಡದೆ ಆಕ್ಸಿಜನ್ ಅನ್ನು ಐಸಿಯುವಿನಿಂದ ಹೊರಗೆ ತೆಗೆದುಕೊಂಡು ಬಂದ ಕಾರಣ, ಶ್ರೀನಿವಾಸ ಉಸಿರಾಟದ ತೊಂದರೆಯಿಂದ ನರಳಾಡಲಾರಂಭಿಸಿದರು. ಆಕ್ಸಿಜನ್ ತರಲು ತೆರಳಿದ್ದ ನರ್ಸ್ ಹಾಗೂ ವಾರ್ಡ್‌ಬಾಯ್ 15 ನಿಮಿಷಕ್ಕೂ ಹೆಚ್ಚು ಸಮಯ ಹಿಂದಿರುಗದೆ, ಸ್ಥಳದಲ್ಲಿದ್ದ ವೈದ್ಯರು ಹಾಗೂ ಸಿಬ್ಬಂದಿಯ ಸಹಾಯ ಬೇಡಿಕೊಂಡರೂ ಸ್ಪಂದನೆ ದೊರಕಲಿಲ್ಲ.

ಆಕ್ಸಿಜನ್ ಸಹಾಯವಿಲ್ಲದೆ 15 ನಿಮಿಷ ನರಳಿ ಶ್ರೀನಿವಾಸ ಮೃತಪಟ್ಟಿದ್ದರು. ಬಳಿಕ ಅಲ್ಲಿದ್ದ ವೈದ್ಯರು ಹಾಗೂ ಸಿಬ್ಬಂದಿಗಳು ಸ್ಥಳದಿಂದ ಓಡಿ ಹೋಗಿದ್ದಾರೆ ಎಂದು ಮೃತನ ತಂದೆ ಕೆ. ಮುರಳಿಧರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ಆಧರಿಸಿ ಬಿಎನ್‌ಎಸ್‌ಎಸ್ ಕಾಯ್ದೆ 2023ರ ಕಲಂ 194 ಅಡಿಯಲ್ಲಿ ಯುಡಿಆರ್ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News