ರಾಯಚೂರು | ಕಾರ್ಮಿಕರ ಚುನಾವಣೆಯಲ್ಲಿ ಸಿಐಟಿಯು ಪಕ್ಷಕ್ಕೆ ಭರ್ಜರಿ ಗೆಲವು
ಕೆ.ಮಹಾಂತೇಶ್, ಎಸ್.ಎ.ಶಫಿ
ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪೆನಿ ಕಾರ್ಮಿಕ ಹಾಗೂ ಸಿಬ್ಬಂದಿ ವರ್ಗದ ಚುನಾವಣೆಯಲ್ಲಿ ಸಿಐಟಿಯು (ಬಂಡಿಗಾಲಿ ಪಕ್ಷ), ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ ಕಂಪೆನಿ ಆಡಳಿತ ಮಂಡಳಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಹಟ್ಟಿ ಚಿನ್ನದಗಣಿ ಕಂಪೆನಿ ಕಾರ್ಮಿಕ ಹಾಗೂ ಸಿಬ್ಬಂದಿ ವರ್ಗದ ಚುನಾವಣೆಯಲ್ಲಿ ಸಿಐಟಿಯು ಪ್ರಮುಖ ಸ್ಥಾನಗಳನ್ನು ಗೆದ್ದು ಬೀಗಿದೆ. ಕಳೆದ ಒಂದು ತಿಂಗಳಿನಿಂದ ಗಣಿ ಕಾರ್ಮಿಕ ಚುನಾವಣೆಗೆ ವಿವಿಧ ಹಂತಗಳಲ್ಲಿ ಪ್ರಚಾರ ಮಾಡಲಾಗಿತ್ತು. ತೀವ್ರ ಪ್ರತಿಷ್ಠೆಯಾಗಿ ಪರಿಗಣಿಸಿದ್ದ ಕಾರ್ಮಿಕ ಸಂಘಟನೆಗಳು ಒಂದು ವಾರದಿಂದ ಬಿರುಸಿನ ಪ್ರಚಾರ ನಡೆಸಿದ್ದರು. ಸಿಐಟಿಯು, ಆಕಳು ಪಕ್ಷ, ಎಐಟಿಯುಸಿ, ಟಿಯುಸಿಐ ಸೇರಿದಂತೆ ಇನ್ನಿತರು ಗೆಲವಿಗಾಗಿ ಬಾರಿ ಪೈಪೋಟಿ ನಡೆಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಕೆ.ಮಹಾಂತೇಶ್, ಆರ್ ಮಾನಸಯ್ಯ, ಚಂದ್ರಶೇಖರ, ರಾಘವೇಂದ್ರ ಕುಷ್ಟಗಿ, ಶಂಕರ ಸ್ಪರ್ಧಿಸಿದ್ದರು. ಗೆಲುವಿಗಾಗಿ ಅನೇಕ ಕಸರತ್ತು ನಡೆಸಿ ಮತದಾರರಾದ ಕಾರ್ಮಿಕರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಜಿದ್ದಾಜಿದ್ದಿನ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಹಾಂತೇಶ ಹಾಗೂ ಕಾರ್ಯದರ್ಶಿಯಾಗಿ ಎಸ್.ಎ.ಶಫಿ ಗೆಲವು ಸಾಧಿಸಿದ್ದಾರೆ.
ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿಯ ಒಟ್ಟು 25 ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಸಿಐಟಿಯು ಗುರುತಿನ ಬಂಡಿಗಾಲಿ 13 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾರ್ಮಿಕ ಸಂಘದ ಚುನಾವಣೆಯಲ್ಲಿ ಪ್ರಧಾನ ಕಾರ್ಯದರ್ಶಿ ಎಂದು ಹೇಳಲಾಗುವ ಸ್ಥಾನಕ್ಕೆ 5 ಜನ ಸ್ಪರ್ಧೆಯಲ್ಲಿದ್ದರು. ಭಿನ್ನಮತದಿಂದ ಹೊರಬಂದು ಸಿಐಟಿಯುನ ಬಂಡಿಗಾಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಎಂ.ಶಫಿ ಜಯಗಳಿಸಿದರು.
ಎರಡು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಿಐಟಿಯುನ ಚಂದ್ರಶೇಖರ ಆನ್ವರಿ ( 1,007 ಮತ), ಎಐಟಿಯುಸಿ ಸಂಘದ ತಿಪ್ಪಣ್ಣ (944 ಮತ) ಗೆಲವು ಸಾಧಿಸಿದ್ದಾರೆ. ಆರು ಕಾರ್ಯದರ್ಶಿ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಂಡಿಗಾಲಿಯ ಜಮದಗ್ನಿ ಕೋಠಾ, ಗೌಸ್ ಮೀಯಾ, ಮುಹಮ್ಮದ್ ಹನೀಫ್ ಯಂಕೋಬ, ನಾಗರಾಜ, ರಮೇಶ ಬಾಬು, ಸಿಐಟಿಯು ಗುರುತಿನ ಬಂಡಿಗಾಲಿ ತನ್ನ ತೆಕ್ಕೆಗೆ ಪಡೆದುಕೊಂಡು ಗೆಲುವು ಸಾಧಿಸಿದ್ದಾರೆ.
ಖಜಾಂಚಿ ಹಾಗೂ ಉಪ ಖಜಾಂಚಿ ಎರಡು ಸ್ಥಾನಗಳಿಗೆ ಸಿಐಟಿಯು ಬಂಡಿಗಾಲಿ ಸಿದ್ದಪ್ಪ ಮುಡಂರಗಿ, ಚಂದ್ರಶೇಖರ ಜಯಗಳಿಸಿದರು. ಮಹಿಳಾ ಮೀಸಲು ಸ್ಥಾನಕ್ಕೆ ಎಐಟಿಯುಸಿನ ಪೆಚ್ಚಲಮ್ಮ, ಆಡಳಿತ ವಿಭಾಗಕ್ಕೆ ಆಕಳು ಪಕ್ಷದ ಕುಪ್ಪಣ್ಣ ಆಯ್ಕೆಯಾಗಿದ್ದಾರೆ.
ತಾಂತ್ರಿಕ (ಎ) ಬಂಡಿಗಾಲಿಯ ಗುಂಡಪ್ಪ, ತಾಂತ್ರಿಕ (ಬಿ) ಗಂಗಪ್ಪ, ಲೋಹ ವಿಭಾಗಕ್ಕೆ ತಕ್ಕಡಿಯ ಮುನಿರುದ್ದಿನ್ ಗೆಲುವು ಸಾಧಿಸಿದರು. ಊಟಿಯ ಹನುಮಂತರಾಯ, ಹೀರಾ-ಬುದ್ದಿನ್ನಿಯ ಉಮಾಪತಿ ಗೆಲುವು ಸಾಧಿಸುವ ಮೂಲಕ ಎರಡು ಸ್ಥಾನಗಳು ತಕ್ಕಡಿ ಪಾಲಾಗಿವೆ. ಮಲ್ಲಪ್ಪ ಶಾಫ್ಟ್‌ನ ಮೂರು ಸ್ಥಾನಗಳಲ್ಲಿಆಕಳು ಪಕ್ಷದ ಗುರುರಾಜ್, ಮೌನೇಶ, ಹಾಜಿಬಾಬಾ ಜಯಗಳಿಸಿ ಆಯ್ಕೆಯಾದರು.
ಸೆಂಟ್ರಲ್ ಶಾಫ್ಟ್‌ನ ಎರಡು ಸ್ಥಾನಗಳಲ್ಲಿ ಆಕಳು ಪಕ್ಷದ ಗ್ಯಾನಪ್ಪ, ಹನುಮಂತ ಗುರಿಕಾರ ಆಯ್ಕೆ ಆಗಿದ್ದಾರೆ. ವಿಲೇಜ್ ಶಾಫ್ಟ್‌ನಲ್ಲಿ ಆಕಳು ಪಕ್ಷದ ಅಮರೇಶ ಗೆಲುವು ಸಾಧಿಸಿದ್ದಾರೆ. 3 ವರ್ಷಕ್ಕೊಮ್ಮೆ ನಡೆಯುವ ಕಂಪನಿ ಕಾರ್ಮಿಕ ಸಂಘದ ಚುನಾವಣೆಯಾಗಿದ್ದು, ಹಿಂದೆ ಎಐಟಿಯುಸಿಯಿಂದ ಸ್ಪರ್ಧಿಸಿದ್ದ ಶಫಿ ಈ ಬಾರಿ ಸಿಐಟಿಯು ಬಂಡಿಗಾಲಿ ಪಕ್ಷದಿಂದ ಸ್ಪರ್ಧಿಸಿ ಗೆಲವು ಸಾಧಿಸಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಗೆಲುವಿನ ಬಳಿಕ ಸಿಐಟಿಯು ಸಂಘಟನೆಯ ಮುಖಂಡರಲ್ಲಿ ಸಂಭ್ರಮದ ಮನೆ ಮಾಡಿತು. ಕಾರ್ಯಕರ್ತರು ಬಣ್ಣ ಎರಚಿ ಸಂಭ್ರಮಿಸಿದರು. ನನ್ನ ಮೇಲೆ ವಿಶ್ವಾಸ ಇಟ್ಟು ಮತ ನೀಡಿ ಗೆಲ್ಲಿಸಿದಕ್ಕೆ ಹಾಗೂ ಪ್ರತ್ಯೇಕ್ಷ ಹಾಗೂ ಪರೋಕ್ಷವಾಗಿ ಬೆಂಬಲ ನೀಡಿದ ಎಲ್ಲಾ ಮತದಾರ ಕಾರ್ಮಿಕ ಹಾಗೂ ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹಟ್ಟಿ ಚಿನ್ನದ ಗಣಿಯ ಕಾರ್ಮಿಕರ ಹಾಗೂ ಸಿಬ್ಬಂ ದಿಗಳ ಯೂನಿಯನ್ ಅಧ್ಯಕ್ಷರಾದ ಕೆ.ಮಹಾಂತೇಶ್ ಹಾಗೂ ಕಾರ್ಯದರ್ಶಿಯಾದ ಶಫಿ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.