×
Ad

Raichur | ಶಾಸಕ ಎನ್.ಎಸ್.ಬೋಸರಾಜು ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹ

Update: 2026-06-16 21:57 IST

ರಾಯಚೂರು: ರಾಜ್ಯ ಸಚಿವ ಸಂಪುಟದ ಎರಡನೇ ವಿಸ್ತರಣೆಯಲ್ಲಿ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಎನ್.ಎಸ್. ಬೋಸರಾಜು ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕ ಬಾಲಸ್ವಾಮಿ ಕೊಡ್ಲಿ ಒತ್ತಾಯಿಸಿದರು.

ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ಐದು ದಶಕಗಳಿಂದ ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯಲ್ಲಿ ಸಂಘಟಿಸಿ ಬಲಪಡಿಸಿರುವ ಬೋಸರಾಜು ಅವರು ಪಕ್ಷಕ್ಕೆ ನಿರಂತರ ಸೇವೆ ಸಲ್ಲಿಸಿರುವ ಹಿರಿಯ ನಾಯಕರಾಗಿದ್ದಾರೆ ಎಂದು ಹೇಳಿದರು.

ಕಾಡಾ ಅಧ್ಯಕ್ಷ, ಎಚ್‌ಕೆಆರ್‌ಡಿಬಿ ಅಧ್ಯಕ್ಷ, ಶಾಸಕ, ವಿಧಾನ ಪರಿಷತ್ ಸದಸ್ಯ ಹಾಗೂ ಸಚಿವರಾಗಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಅವರು ಅಭಿವೃದ್ಧಿ ಪರ ಆಡಳಿತದ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ ಎಂದು ತಿಳಿಸಿದರು.

ಕಳೆದ ಮೂರು ವರ್ಷಗಳಲ್ಲಿ ಸುಮಾರು 1,931 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಕಾಮಗಾರಿಗಳನ್ನು ನಗರ ಹಾಗೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೈಗೊಂಡಿದ್ದು, ರಸ್ತೆ ನಿರ್ಮಾಣ, ಬ್ರಿಡ್ಜ್-ಕಂ-ಬ್ಯಾರೇಜ್ ಕಾಮಗಾರಿಗಳು, ಕನಕನಾಳ ಯೋಜನೆ ಹಾಗೂ ತುಂಗಭದ್ರಾ ಅಣೆಕಟ್ಟೆಯ ಗೇಟ್‌ಗಳ ಪುನರ್‌ನಿರ್ಮಾಣ ಮತ್ತು ದುರಸ್ತಿ ಕಾರ್ಯಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.

ರಾಜ್ಯದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಿರುವ ಬೋಸರಾಜು ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಸಲ್ಲಿಸಲು 15 ಮಂದಿ ಕಾರ್ಯಕರ್ತರ ತಂಡ ದೆಹಲಿಗೆ ತೆರಳಲಿದೆ. ಅಲ್ಲದೆ, ಸುಮಾರು 150 ಮಂದಿ ಕಾರ್ಯಕರ್ತರು ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಲಿದ್ದಾರೆ ಎಂದು ಬಾಲಸ್ವಾಮಿ ಕೊಡ್ಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅರುಣ್ ಚಾಂದ, ಮರಿಸ್ವಾಮಿ, ಪ್ರೀತಂ ಕೊಡ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News