×
Ad

Raichur | ರಸಗೊಬ್ಬರ ಸಮರ್ಪಕ ಪೂರೈಕೆ ಮಾಡಲು ಒತ್ತಾಯಿಸಿ ಕೆಪಿಆರ್‌ಎಸ್ ನಿಂದ ಪ್ರತಿಭಟನೆ

Update: 2026-06-16 22:50 IST

ರಾಯಚೂರು: ರೈತರಿಗೆ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರವನ್ನು ಸಮರ್ಪಕವಾಗಿ ಪೂರೈಸಬೇಕು, ಜೋಳ ಖರೀದಿಯ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ನಿವೇಶನ ರಹಿತ ಬಡ ಕುಟುಂಬಗಳಿಗೆ ಮನೆ ನಿವೇಶನ ಮತ್ತು ಹಕ್ಕುಪತ್ರಗಳನ್ನು ವಿತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿ ಸತ್ಯಾಗ್ರಹ ನಡೆಸಲಾಯಿತು.

ನಗರದ ವಾಲ್ಮೀಕಿ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಟಿಪ್ಪು ಸುಲ್ತಾನ್ ಪಾರ್ಕ್ ವರೆಗೆ ಸಾಗಿತು. ರೈತರು, ಕೃಷಿ ಕೂಲಿಕಾರರು ಹಾಗೂ ವಿವಿಧ ಗ್ರಾಮಗಳ ನಿವಾಸಿಗಳು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡರು. ಬಳಿಕ ಜಿಲ್ಲಾ ಆಡಳಿತ ಭವನದ ಮುಂಭಾಗದಲ್ಲಿ ಧರಣಿ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮುಂಗಾರು ಆರಂಭವಾಗಿದ್ದರೂ ಜಿಲ್ಲೆಯ ಹಲವು ಭಾಗಗಳಲ್ಲಿ ರೈತರಿಗೆ ಗುಣಮಟ್ಟದ ಬೀಜ ಮತ್ತು ರಸಗೊಬ್ಬರಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಕೆಲ ವ್ಯಾಪಾರಿಗಳು ಕೃತಕ ಅಭಾವ ಸೃಷ್ಟಿಸಿ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಎಲ್ಲಾ ತಾಲ್ಲೂಕುಗಳಲ್ಲಿ ಎಂಆರ್‌ಪಿ ದರದಲ್ಲಿ ಅಗತ್ಯ ಪ್ರಮಾಣದ ಬೀಜ ಮತ್ತು ರಸಗೊಬ್ಬರ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರಾಯಚೂರು ಜಿಲ್ಲೆಯಲ್ಲಿ ಎಂಎಸ್‌ಪಿ ದರದಲ್ಲಿ ಖರೀದಿಸಲಾದ ಜೋಳದ ಬಾಕಿ ಹಣವನ್ನು ಇನ್ನೂ ಅನೇಕ ರೈತರಿಗೆ ಪಾವತಿಸಿಲ್ಲ. ಹೀಗಾಗಿ ಬಾಕಿ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ವಿದ್ಯುತ್ ವಿತರಣೆಯನ್ನು ಹಿಂದಿನಂತೆ ಜೆಸ್ಕಾಂ ಮೂಲಕವೇ ಮುಂದುವರಿಸಬೇಕು. ಟಾಟಾ ಪವರ್ ಗೆ ವಿದ್ಯುತ್ ವಿತರಣೆಯ ಜವಾಬ್ದಾರಿ ನೀಡಬಾರದು ಹಾಗೂ ವಿದ್ಯುತ್ ಖಾಸಗೀಕರಣದ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ನಗರ ಹಾಗೂ ಗ್ರಾಮೀಣ ಪ್ರದೇಶಗಳ ನಿವೇಶನ ರಹಿತ ಬಡ ಕುಟುಂಬಗಳಿಗೆ ಆಶ್ರಯ ಯೋಜನೆಯಡಿ ನಿವೇಶನ ಮಂಜೂರು ಮಾಡಬೇಕು. ಹಲವು ವರ್ಷಗಳಿಂದ ಸರ್ಕಾರಿ ಜಾಗ ಹಾಗೂ ಆಶ್ರಯ ಕಾಲೋನಿಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡಿ, ಕುಡಿಯುವ ನೀರು, ರಸ್ತೆ, ಚರಂಡಿ ಹಾಗೂ ಬೀದಿ ದೀಪ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಅಲ್ಲದೆ ದೇವದುರ್ಗ, ಸಿಂಧನೂರು, ಮಸ್ಕಿ, ಲಿಂಗಸೂಗೂರು ಹಾಗೂ ರಾಯಚೂರು ತಾಲ್ಲೂಕುಗಳ ವಿವಿಧ ಗ್ರಾಮಗಳಲ್ಲಿ ಸ್ಮಶಾನ ರಸ್ತೆಗಳ ಅಭಿವೃದ್ಧಿ, ಒತ್ತುವರಿ ತೆರವು, ಬಂಡಿದಾರಿ ಸಮಸ್ಯೆ ಪರಿಹಾರ, ಹೈಟೆಕ್ ಶೌಚಾಲಯ ನಿರ್ಮಾಣ, ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಜಾರಿ, ಜಿಪಿಎಸ್ ತಾಂತ್ರಿಕ ಸಮಸ್ಯೆ ನಿವಾರಣೆ ಹಾಗೂ ಕಾರ್ಮಿಕರಿಗೆ ಪೂರ್ಣ ಕೂಲಿ ಪಾವತಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟರು.

ಬಿಸಿಲಿನ ತಾಪದಿಂದ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡಬೇಕು. ರಾಯಚೂರು ತಾಲ್ಲೂಕಿನ ವಿವಿಧ ಗ್ರಾಮಗಳ ವಸತಿರಹಿತ ಕುಟುಂಬಗಳಿಗೆ ಮನೆ ನಿರ್ಮಿಸಬೇಕು ಹಾಗೂ ಸಾರ್ವಜನಿಕ ಸ್ಮಶಾನ ಭೂಮಿಗಳ ಒತ್ತುವರಿ ತೆರವುಗೊಳಿಸಿ ಅಗತ್ಯ ಭೂಮಿ ಮಂಜೂರು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಕೃಷಿ ಕೂಲಿಕಾರ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಚಂದ್ರಪ್ಪ, ಬಸವಂತ್ರಾಯಗೌಡ, ನರಸಣ್ಣ ನಾಯಕ, ಚನ್ನಪ್ಪ ಆನೆಗುಂದಿ, ಕೆ.ಜಿ. ವೀರೇಶ, ಕರಿಯಪ್ಪ ಅಚ್ಚೋಳಿ, ರಂಗನಗೌಡ, ದೇವೇಂದ್ರಗೌಡ, ಶಬ್ಬೀರ್ ಜಾಲಹಳ್ಳಿ, ಹೆಚ್. ಪದ್ಮಾ, ಪೆಂಚಲಯ್ಯ, ರಂಗಪ್ಪ ಯಾಪಲದಿನ್ನಿ ಸೇರಿದಂತೆ ರೈತರು, ಕೃಷಿ ಕೂಲಿಕಾರರು ಮತ್ತು ವಿವಿಧ ಗ್ರಾಮಗಳ ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News