Raichur | ಜೋಳ ಖರೀದಿ ಬಾಕಿ ಹಣ ಪಾವತಿಗೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ
ರಸಗೊಬ್ಬರ ಕೊರತೆ ನಿವಾರಣೆ, ಕಳಪೆ ಬೀಜ ಮಾರಾಟ ನಿಯಂತ್ರಣಕ್ಕೆ ಒತ್ತಾಯ
ರಾಯಚೂರು: ಜೋಳ ಖರೀದಿ ಬಾಕಿ ಹಣವನ್ನು ತಕ್ಷಣ ಪಾವತಿಸುವುದು, ರಸಗೊಬ್ಬರ ಕೊರತೆಯನ್ನು ನಿವಾರಿಸುವುದು ಹಾಗೂ ಕಳಪೆ ಬೀಜಗಳ ಮಾರಾಟ ನಿಯಂತ್ರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ನಗರದ ಹೊರವಲಯದಲ್ಲಿರುವ ನೂತನ ಜಿಲ್ಲಾಡಳಿತ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ರೈತರಿಂದ ಖರೀದಿಸಲಾದ ಜೋಳದ ಹಣವನ್ನು ಸರ್ಕಾರ ಇನ್ನೂ ಪಾವತಿಸಿಲ್ಲ. ಜಿಲ್ಲೆಯ ಶೇ.85ರಷ್ಟು ರೈತರಿಗೆ ಹಣ ಬಾಕಿಯಿದ್ದು, ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಜಿಲ್ಲೆಯಲ್ಲಿ 12.50 ಲಕ್ಷ ಕ್ವಿಂಟಾಲ್ ಜೋಳ ಖರೀದಿಸಲಾಗಿದ್ದು, ಸುಮಾರು 10.50 ಲಕ್ಷ ಕ್ವಿಂಟಾಲ್ ಜೋಳದ ಹಣ ಇನ್ನೂ ರೈತರಿಗೆ ಸಂದಾಯವಾಗಿಲ್ಲ. ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ಬೀಜ ಮತ್ತು ರಸಗೊಬ್ಬರ ಖರೀದಿಸಲು ರೈತರ ಬಳಿ ಹಣದ ಕೊರತೆ ಉಂಟಾಗಿದ್ದು, ಬಡ್ಡಿ ಸಾಲದ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಹತ್ತಿ ಖರೀದಿಸಿದ ರೈತರಿಗೆ ಒಂದು ವಾರದೊಳಗೆ ಹಣ ಪಾವತಿಸಿದ ಸರ್ಕಾರ, ಜೋಳ ಖರೀದಿಯ ಹಣ ಬಿಡುಗಡೆ ಮಾಡದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ವೇಳೆ ಜಿಲ್ಲೆಯಾದ್ಯಂತ ರಸಗೊಬ್ಬರ ಕೊರತೆ ಉಂಟಾಗಿದ್ದು, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ಯಾದಗಿರಿ ಜಿಲ್ಲೆಯಲ್ಲಿ ಎಕರೆವಾರು ರಸಗೊಬ್ಬರ ವಿತರಣೆಗೆ ಕ್ರಮ ಕೈಗೊಂಡಿರುವಂತೆ, ರಾಯಚೂರು ಜಿಲ್ಲೆಯಲ್ಲೂ ಎಲ್ಲ ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ದೊರೆಯುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು. ರಸಗೊಬ್ಬರ ಖರೀದಿಯೊಂದಿಗೆ ಇತರೆ ಉತ್ಪನ್ನಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ಒತ್ತಾಯಿಸುವ ಪದ್ಧತಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
29 ಸಾವಿರ ರೂ. ಮೌಲ್ಯದ ರಸಗೊಬ್ಬರ ಖರೀದಿಸುವ ರೈತರು ಹೆಚ್ಚುವರಿಯಾಗಿ 9,257 ರೂ. ಮೌಲ್ಯದ ಇತರೆ ಗೊಬ್ಬರಗಳನ್ನು ಖರೀದಿಸಬೇಕೆಂಬ ಷರತ್ತು ವಿಧಿಸಲಾಗುತ್ತಿದೆ. ರೈತರ ಮೇಲಿನ ಈ ಹೆಚ್ಚುವರಿ ಹೊರೆಯನ್ನು ಜಿಲ್ಲಾಡಳಿತ ತಡೆಯಬೇಕು ಎಂದು ಮನವಿ ಮಾಡಿದರು.
ನೀರಾವರಿ ಪ್ರದೇಶಗಳ ಮುಖ್ಯ ಹಾಗೂ ಉಪಕಾಲುವೆಗಳಲ್ಲಿ ಸಮರ್ಪಕವಾಗಿ ಹೂಳು ತೆರವು ಮತ್ತು ಸ್ವಚ್ಛತಾ ಕಾರ್ಯ ನಡೆಯದಿರುವುದರಿಂದ ಮುಂದಿನ ದಿನಗಳಲ್ಲಿ ನೀರಾವರಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಕಾಲುವೆಗಳ ಸ್ವಚ್ಛತಾ ಕಾಮಗಾರಿಯನ್ನು ತಕ್ಷಣ ಕೈಗೊಳ್ಳಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.
ಪ್ರತಿಭಟನೆಯ ಬಳಿಕ ರೈತ ಸಂಘದ ಮುಖಂಡರು ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ, ಯಂಕಪ್ಪ ಕಾರಬಾರಿ, ದೊಡ್ಡ ಬಸನಗೌಡ, ಸೂಗುರಯ್ಯ ಆರ್.ಎಸ್. ಮಠ, ಪ್ರಭಾಕರ ಪಾಟೀಲ ಇಂಗಳದಾಳ, ಬಸವರಾಜ ಮಾಲಿಪಾಟೀಲ, ಬೂದಯ್ಯ ಸ್ವಾಮಿ, ಚಾಮರಾಜ ಜಾನೇಕಲ್, ಸಿದ್ದಯ್ಯಸ್ವಾಮಿ, ಲಿಂಗನಗೌಡ, ಬಾಲಾಜಿ ಸೇರಿದಂತೆ ರೈತರು ಪಾಲ್ಗೊಂಡಿದ್ದರು.