Raichur | ವಿದ್ಯುತ್ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ
ರಾಯಚೂರು: ಸರ್ಕಾರದ ಅಧೀನದಲ್ಲಿರುವ ವಿದ್ಯುತ್ ವಿತರಣಾ ಕೇಂದ್ರಗಳನ್ನು ಯಾವುದೇ ಕಾರಣಕ್ಕೂ ಖಾಸಗಿ ಕಂಪನಿಗಳಿಗೆ, ವಿಶೇಷವಾಗಿ ಟಾಟಾ ಪವರ್ ಗೆ ವಹಿಸಬಾರದು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಜೆಸ್ಕಾಂ ಅಧೀಕ್ಷಕ ಅಭಿಯಂತರರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಳಿಕ ಜೆಸ್ಕಾಂ ಅಧಿಕಾರಿಗಳ ಮೂಲಕ ಇಂಧನ ಸಚಿವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ವಿದ್ಯುತ್ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಪ್ರಯತ್ನ ನಡೆಸುತ್ತಿರುವುದು ಖಂಡನೀಯ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ವಿದ್ಯುತ್ ಖಾಸಗೀಕರಣ ನೀತಿ ಹಾಗೂ ಕೃಷಿ ತಿದ್ದುಪಡಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ರೈತರು ಹೋರಾಟ ನಡೆಸಿದ್ದ ಹಿನ್ನೆಲೆಯಲ್ಲಿ ಅವುಗಳನ್ನು ಹಿಂಪಡೆಯಲಾಗಿತ್ತು. ಆದರೆ ರಾಜ್ಯ ಸರ್ಕಾರಗಳು ತಮ್ಮ ಇಚ್ಛೆಯಂತೆ ಇಂತಹ ನೀತಿಗಳನ್ನು ಜಾರಿಗೆ ತರಲು ಅವಕಾಶ ನೀಡಿರುವುದರಿಂದ ಕರ್ನಾಟಕದಲ್ಲೂ ಖಾಸಗೀಕರಣ ಪ್ರಕ್ರಿಯೆ ಮುಂದುವರಿಯುತ್ತಿದೆ ಎಂದು ದೂರಿದರು.
ವಿದ್ಯುತ್ ಖಾಸಗೀಕರಣದ ವಿರುದ್ಧ ಈ ಹಿಂದೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕರು, ಇದೀಗ ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದರೂ ಅದೇ ನೀತಿಯನ್ನು ಮುಂದುವರಿಸಲು ಮುಂದಾಗಿರುವುದು ವಿರೋಧಾಭಾಸವಾಗಿದೆ ಎಂದು ಟೀಕಿಸಿದರು.
ರೈತರ ಕೃಷಿ ಪಂಪ್‌ಸೆಟ್‌ಗಳು, ಭಾಗ್ಯಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆಗಳ ಅಡಿಯಲ್ಲಿ ಉಚಿತ ವಿದ್ಯುತ್ ನೀಡುತ್ತಿರುವ ಸರ್ಕಾರ, ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿ ಕಂಪನಿಗಳಿಗೆ ವಹಿಸುವ ಮೂಲಕ ಈ ಸೌಲಭ್ಯಗಳಿಗೆ ಕುತ್ತು ತರುವ ಹುನ್ನಾರ ನಡೆಸಿದೆ ಎಂಬ ಆತಂಕ ವ್ಯಕ್ತಪಡಿಸಿದರು.
ರೈತರು, ಗ್ರಾಮೀಣ ಜನತೆ ಹಾಗೂ ಸಾಮಾನ್ಯ ಗ್ರಾಹಕರ ಹಿತದೃಷ್ಟಿಯಿಂದ ಸರ್ಕಾರ ವಿದ್ಯುತ್ ಖಾಸಗೀಕರಣದ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ರಾಮಯ್ಯ ಜವಳಗೇರಾ, ಚನ್ನಪ್ಪ ಹುಣಸಿಹಾಳ ಹುಡಾ, ರಾಮಬಾಬು , ಗಂಗಪ್ಪ ಏಗನೂರು, ಜಷ್ಮೀರ ಅಲಿ, ಶ್ರೀನಿವಾಸ, ನಿಂಗಪ್ಪ ವಡ್ಲೂರು, ಹನುಮಂತ್ರಾಯ ಸೇರಿ ಅನೇಕರಿದ್ದರು