Raichur | ಶಾಸಕ ಪ್ರಸಾದ್ ಅಬ್ಬಯ್ಯಗೆ ಸಚಿವ ಸ್ಥಾನ ನೀಡಬೇಕು : ಬಲಗೈ ಜಾತಿಗಳ ಒಕ್ಕೂಟ ಆಗ್ರಹ
ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡುವಂತೆ ಒತ್ತಾಯ
ರಾಯಚೂರು: ರಾಜ್ಯ ಸಚಿವ ಸಂಪುಟದ ಮುಂದಿನ ವಿಸ್ತರಣೆಯಲ್ಲಿ ಹುಬ್ಬಳ್ಳಿ–ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ಮಂಚಾಲ ಒತ್ತಾಯಿಸಿದರು.
ನಗರದ ನೃಪತುಂಗ ಹೋಟೆಲ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಉತ್ತರ ಕರ್ನಾಟಕದ ಬಲಗೈ ಸಮುದಾಯಕ್ಕೆ ಸಮರ್ಪಕ ಪ್ರಾತಿನಿಧ್ಯ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಲಗೈ ಸಮುದಾಯದಿಂದ ಕಾಂಗ್ರೆಸ್ ಪಕ್ಷದ 9 ರಿಂದ 10 ಶಾಸಕರು ಆಯ್ಕೆಯಾಗಿದ್ದರೂ, ಮೈಸೂರು ಮತ್ತು ಕಲಬುರಗಿ ವಿಭಾಗಗಳಿಗೆ ಮಾತ್ರ ಸಚಿವ ಸ್ಥಾನ ದೊರೆತಿದೆ. ಬೆಳಗಾವಿ ವಿಭಾಗದ ಸಮುದಾಯದ ನಾಯಕರಿಗೆ ಸಚಿವ ಸ್ಥಾನದಲ್ಲಿ ಅವಕಾಶ ಸಿಕ್ಕಿಲ್ಲ ಎಂದು ಹೇಳಿದರು.
ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಪ್ರಸಾದ್ ಅಬ್ಬಯ್ಯ ಅವರು ಜನಪರ ಆಡಳಿತ, ಅಭಿವೃದ್ಧಿ ಕಾರ್ಯಗಳು ಹಾಗೂ ಸರ್ವಧರ್ಮೀಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ನಾಯಕರು. ಉತ್ತರ ಕರ್ನಾಟಕದ ಜನರ ಆಶಯಗಳಿಗೆ ಸ್ಪಂದಿಸುವ ದೃಷ್ಟಿಯಿಂದ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ 32 ವರ್ಷಗಳಿಂದ ಬೆಳಗಾವಿ ವಿಭಾಗದ ಬಲಗೈ ಸಮುದಾಯಕ್ಕೆ ಸಚಿವ ಸ್ಥಾನ ದೊರೆತಿಲ್ಲ. ಆದ್ದರಿಂದ ರಾಜ್ಯ ನಾಯಕತ್ವ ಮತ್ತು ಕಾಂಗ್ರೆಸ್ ಹೈಕಮಾಂಡ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಪ್ರಸಾದ್ ಅಬ್ಬಯ್ಯ ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ಭೀಮಣ್ಣ ಮಂಚಾಲ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಎನ್.ಸತ್ಯನಾರಾಯಣ, ಕೆ. ಈ. ಕುಮಾರ, ಆರ್.ರಾಮಕೃಷ್ಣ, ಆರ್.ಬಸವರಾಜ, ಎಂ. ಮಾರೆಪ್ಪ, ಶಶಿಧರ್, ಗಾರ್ಲೆ ದಿಗಂಬರ್, ಬಿ. ರಮೇಶ ಉಪಸ್ಥಿತರಿದ್ದರು