×
Ad

ರಾಯಚೂರು | ವಾಲ್ಮೀಕಿ ನಾಯಕ ಸಮುದಾಯದ 3 ಶಾಸಕರಿಗೆ ಸಚಿವ ಸ್ಥಾನ ನೀಡಲು ಒತ್ತಾಯ

Update: 2025-12-29 14:30 IST

ರಾಯಚೂರು: ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಪರಿಶಿಷ್ಟ ವರ್ಗಗಳ ಇಲಾಖೆಗೆ ಸಚಿವ ಸ್ಥಾನ ಖಾಲಿ ಇದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆ ಇಲಾಖೆಯನ್ನು ತಮ್ಮಲ್ಲಿಯೇ ಇಟ್ಟುಕೊಂಡಿರುವುದರಿಂದ ನಿರೀಕ್ಷಿತ ಮಟ್ಟದ ಪ್ರಗತಿ ಸಾಧ್ಯವಾಗಿಲ್ಲ. ಕೂಡಲೇ ಈ ಇಲಾಖೆಗೆ ಸಚಿವರನ್ನು ನೇಮಿಸುವುದರ ಜೊತೆಗೆ ವಾಲ್ಮೀಕಿ ಸಮುದಾಯಕ್ಕೆ ಕನಿಷ್ಠ ಮೂರು ಸಚಿವ ಸ್ಥಾನಗಳನ್ನು ನೀಡಬೇಕು ಎಂದು ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ವಿಭಾಗೀಯ ಕಾರ್ಯದರ್ಶಿ ಎನ್. ರಘುವೀರ ನಾಯಕ ಆಗ್ರಹಿಸಿದರು.

ಅವರು ಸೋಮವಾರ ರಾಯಚೂರಿನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕದಲ್ಲಿ ಸುಮಾರು 70 ಲಕ್ಷ ಜನಸಂಖ್ಯೆ ಹೊಂದಿರುವ ವಾಲ್ಮೀಕಿ ಸಮುದಾಯಕ್ಕೆ ಈ ಸರ್ಕಾರದಲ್ಲಿ ಸೂಕ್ತ ಪ್ರಾತಿನಿಧ್ಯ ದೊರಕುತ್ತಿಲ್ಲ ಎಂದು ಆರೋಪಿಸಿದರು.

ಪರಿಶಿಷ್ಟ ಪಂಗಡಕ್ಕೆ ಮೀಸಲಾದ 15 ಕ್ಷೇತ್ರಗಳ ಪೈಕಿ ಸುಮಾರು 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ. ಅಲ್ಲದೆ 3 ಸಾಮಾನ್ಯ ಕ್ಷೇತ್ರಗಳ ಪೈಕಿ ಒಂದರಲ್ಲಿ ಕೂಡ ವಾಲ್ಮೀಕಿ ಸಮುದಾಯದ ಕಾಂಗ್ರೆಸ್ ಶಾಸಕ ಗೆದ್ದಿದ್ದಾರೆ. ಆದರೂ ಈ ಶಾಸಕರಿಗೆ ಸಚಿವ ಸ್ಥಾನ ನೀಡದಿರುವುದು ತಾರತಮ್ಯಕ್ಕೆ ನಿದರ್ಶನವಾಗಿದೆ ಎಂದರು.

ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ನಿಗದಿತ ಸಮಯದಲ್ಲಿ ವಿದ್ಯಾರ್ಥಿ ವೇತನ ತಲುಪುತ್ತಿಲ್ಲ, ಪ್ರೈಸ್ ಮನಿ ಯೋಜನೆ ನೆನಗುದಿಗೆ ಬಿದ್ದಿದೆ. ಜಿಲ್ಲೆಯಲ್ಲಿ ಅನೇಕ ವಾಲ್ಮೀಕಿ ಭವನಗಳು ಅನುದಾನದ ಕೊರತೆಯಿಂದ ಅಪೂರ್ಣವಾಗಿವೆ. ವಸತಿ ನಿಲಯಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ನಗರದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಹಾಸಿಗೆ ಮತ್ತು ಮಂಚಗಳೇ ಇಲ್ಲ. ವೃತ್ತಿಪರ ಬಾಲಕಿಯರ ವಸತಿ ನಿಲಯದಲ್ಲಿಯೂ ಅಗತ್ಯ ಸೌಕರ್ಯಗಳ ಕೊರತೆ ಎದುರಾಗಿದೆ ಎಂದು ದೂರಿದರು.

ಇನ್ನೂ ಸಾಕಷ್ಟು ವರ್ಷಗಳಿಂದ ಇಲಾಖೆಯಲ್ಲಿ ನೇಮಕಾತಿಗಳು ನಡೆದಿಲ್ಲ. ಇಡೀ ರಾಯಚೂರು ಜಿಲ್ಲೆಗೆ ಕೇವಲ ಒಂದೇ ಒಂದು ಏಕಲವ್ಯ ವಸತಿ ಶಾಲೆ ಇದೆ. ಪ್ರತಿ ತಾಲೂಕಿಗೆ ಒಂದರಂತೆ ಸುಮಾರು 7 ಏಕಲವ್ಯ ವಸತಿ ಶಾಲೆಗಳು ಅಗತ್ಯವಿದ್ದರೂ ಈವರೆಗೆ ಸ್ಥಾಪನೆಯಾಗಿಲ್ಲ. ಜಿಲ್ಲೆಯಲ್ಲಿ ಕೇವಲ 3 ಆಶ್ರಮ ಶಾಲೆಗಳಿದ್ದು, ಎಲ್ಲಾ ತಾಲೂಕುಗಳಿಗೆ ಒಂದರಂತೆ ಸುಮಾರು 7 ಆಶ್ರಮ ಶಾಲೆಗಳು ಇರಬೇಕೆಂದು ಅವರು ತಿಳಿಸಿದರು.

ಪ್ರತಿಷ್ಠಿತ ಶಾಲೆಗಳ ದಾಖಲಾತಿ ಗುರಿ ಜಿಲ್ಲೆಗೆ ಕೇವಲ 63ಕ್ಕೆ ಸೀಮಿತವಾಗಿದ್ದು, ಅದನ್ನು ಕನಿಷ್ಠ 200ಕ್ಕೆ ಹೆಚ್ಚಿಸಬೇಕು. ಜೊತೆಗೆ ರಾಯಚೂರು ನಗರದಲ್ಲಿ ಒಂದೇ ಒಂದು ಪ್ರತಿಷ್ಠಿತ ಶಾಲೆಯೂ ನೋಂದಣಿಯಾಗದಿರುವುದು ಸರ್ಕಾರದ ನಿರ್ಲಕ್ಷ್ಯಕ್ಕೆ ಕನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದು ಕೇವಲ ಒಂದು ಜಿಲ್ಲೆಯ ಸಮಸ್ಯೆಯಲ್ಲ, ಇಡೀ ರಾಜ್ಯದಾದ್ಯಂತ ಪರಿಶಿಷ್ಟ ವರ್ಗಗಳ ಇಲಾಖೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಇಲಾಖೆಗೆ ಪೂರ್ಣಾವಧಿ ಸಚಿವರ ನೇಮಕ ಅನಿವಾರ್ಯವಾಗಿದೆ ಎಂದರು.

ಸಾಮಾನ್ಯ ಕ್ಷೇತ್ರದಿಂದ ಗೆದ್ದು ಸಹಕಾರ ಸಚಿವರಾಗಿದ್ದ ವಾಲ್ಮೀಕಿ ಸಮುದಾಯದ ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರಿಂದ ಸಚಿವ ಸ್ಥಾನ ಹಿಂಪಡೆದ ಬಳಿಕ ಅವರಿಗೆ ಗೌರವಯುತ ಸ್ಥಾನಮಾನ ನೀಡಿಲ್ಲ. ಹೀಗಾಗಿ ಮುಂದಿನ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಯಲ್ಲಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಿಂದ ಗೆದ್ದಿರುವ ವಾಲ್ಮೀಕಿ ನಾಯಕ ಸಮುದಾಯದ ಕನಿಷ್ಠ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಜೊತೆಗೆ ಸಾಮಾನ್ಯ ಕ್ಷೇತ್ರದಿಂದ ಗೆದ್ದಿರುವ ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ನಾಯಕ, ರಮೇಶ್ ನಾಯಕ, ರಾಮು ನಾಯಕ, ನರೇಂದ್ರ ನಾಯಕ ಉಪಸ್ಥಿತರಿದ್ದರು.








Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News