ಜ.18ರಂದು 114 ಜೋಡಿಗಳ ಸಾಮೂಹಿಕ ವಿವಾಹ: ಮಾನ್ವಿಯಲ್ಲಿ ಪೂರ್ವ ಸಿದ್ಧತೆ ಸಭೆ
ಮಾನ್ವಿ: ಜನವರಿ 18 ರಂದು ಸಮಾಜ ಸೇವಕ, ಗುತ್ತೇದಾರ ಸೈಯದ್ ಅಕ್ಬರ್ ಪಾಶ ಹುಸೇನಿ ಅವರಿಂದ ನಡೆಯಲಿರುವ 114 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದ ನಿಮಿತ್ತ ಇಂದು ಪೂರ್ವಭಾವಿ ಸಭೆ ಮಾನ್ವಿ ನಗರದ ಕುಬಾ ಮಸೀದಿಯಲ್ಲಿ ನಡೆಯಿತು.
ಸಭರಯಲ್ಲಿ ಸುಮಾರು 114 ವಧು, ವರ ಮತ್ತು ಅವರ ಕುಟುಂಬದ ಮುಖ್ಯಸ್ಥರು ಭಾಗವಹಿಸಿದ್ದರು. ವಧು ವರರಿಗೆ ಮದುವೆಯ ದಿನ ಧರಿಸಬಹುದಾದ ಹೊಸ ಬಟ್ಟೆಗಳನ್ನು ಮತ್ತು ಐಡಿ ಕಾರ್ಡ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಕ್ಬರ್ ಪಾಶ ಅವರು, ಮದುವೆ ಹೆಸರಲ್ಲಿ ಆಗುವ ಅನಗತ್ಯ ಖರ್ಚುಗಳನ್ನು ತಡೆಯುವುದು ಮತ್ತು ಸಾಮೂಹಿಕ ವಿವಾಹದ ಮೂಲಕ ಬಡವರ ಮದುವೆ ಹೊರೆಯನ್ನು ನೀಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇಂತಹ ಸಮಾಜಮುಖಿ ಕೆಲಸ ಮಾಡಲು ಯೋಚಿಸಿದಾಗ ಸಮಾಜದ ಮುಖಂಡರ ಹಾಗೂ ವಧು ವರರಿಂದ ಇಷ್ಟು ದೊಡ್ಡಮಟ್ಟದ ಬೆಂಬಲ ಸಿಗುತ್ತೆ ಎಂದು ಕೊಂಡಿರಲಿಲ್ಲ. 101 ಮದುವೆ ಮಾಡಬೇಕು ಎಂದು ಕೊಂಡಿದ್ದೆವು, ಇದೀಗ 118 ಜೋಡಿಗಳು ನೋಂದಣಿ ಮಾಡಿಕೊಂಡಿದ್ದನ್ನು ಕಂಡರೆ ಜನರಿಗೆ ಇಂತಹ ಕಾರ್ಯಕ್ರಮದ ತೀರಾ ಅವಶ್ಯಕತೆ ಇತ್ತು ಎಂದೆನಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ವಿವಿಧ ಧಾರ್ಮಿಕ ಗುರುಗಳು ಮತ್ತು ಮುಖಂಡರುಗಳು ವಿವಾಹದ ಮಹತ್ವ ಮತ್ತು ಸುಖಕರ ದಾಂಪತ್ಯದ ಜವಾಬ್ದಾರಿಗಳು ಮತ್ತು ದಂಪತಿಗಳ ಹಕ್ಕುಗಳ ಕುರಿತು ಮಾರ್ಗದರ್ಶನ ನೀಡಿದರು.
ಜನವರಿ 18 ರಂದು ನಡೆಯುವ ಸಾಮೂಹಿಕ ವಿವಾಹ ಅಚ್ಚುಕ್ಕಟ್ಟಾಗಿ ನಿರ್ವಹಿಸಿ ಎಲ್ಲಾ ಜೋಡಿಗಳಿಗೂ ಶುಭ ಹಾರೈಸೋಣ ಎಂದರು.
ಸಭೆಯಲ್ಲಿ ಮುಫ್ತಿ ಜೀಶಾನ್ ಸಾಬ್, ಸೈಯದಗ ಸಜ್ಜಾದೆ ನಶೀನ್ ಹುಸೇನಿ, ಶೇಕ್ ಫರೀದ್ ಉಮ್ರಿ, ಸೈಯ್ಯದ್ ಖಾಲಿದ್ ಖಾದ್ರಿ, ಎಂ ಎ ಎಚ್ ಮುಖೀಮ್, ಆಮಿರ್ ಸುಹೇಲ್ ಸಿದ್ದಿಖಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಬಾಗಯ್ಯ ನಾಯಕ, ಅಬ್ದುಲ್ ರೆಹ್ಮಾನ್ ಸಾಬ್, ಎಲ್ಲಾ ತಾಲೂಕುಗಳ ಖಾಜಿಗಳು, ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.