Raichur | ನಕಲಿ ವೈದ್ಯರು, ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
ರಾಯಚೂರು: ಜಿಲ್ಲೆಯಲ್ಲಿ ಕೆಪಿಎಮ್‌ಇ ಕಾಯ್ದೆಯಡಿ ನೋಂದಾಯಿಸದ ಅಥವಾ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ನಕಲಿ ವೈದ್ಯರು, ಆಸ್ಪತ್ರೆಗಳು ಹಾಗೂ ವ್ಯಸನ ಮುಕ್ತಿ ಕೇಂದ್ರಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪೂವಿತಾ ಎಸ್. ಅವರು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಕೆಪಿಎಮ್‌ಇ ಕಾಯ್ದೆ ಅನುಷ್ಠಾನ ಮತ್ತು ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ, ನಕಲಿ ವೈದ್ಯರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ವೈದ್ಯಕೀಯ ಪದವಿ ಇಲ್ಲದೇ ಚಿಕಿತ್ಸೆ ನೀಡುತ್ತಿರುವವರನ್ನು ಗುರುತಿಸಿ, ಕೆಪಿಎಮ್‌ಇ ಕಾಯ್ದೆ-2007ರಡಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕೆಪಿಎಮ್‌ಇ ಅನುಮತಿ ಪಡೆಯದೆ ಮೆಡಿಕಲ್ ಅಂಗಡಿಗಳ ಒಳಭಾಗ ಅಥವಾ ಪಕ್ಕದಲ್ಲಿ ಕ್ಲಿನಿಕ್ ನಡೆಸುತ್ತಿರುವ ಪ್ರಕರಣಗಳನ್ನು ಪರಿಶೀಲಿಸಬೇಕು. ನೋಂದಾಯಿತ ವೈದ್ಯರ ಹೆಸರಿನಲ್ಲಿ ಕ್ಲಿನಿಕ್ ಇಲ್ಲದಿದ್ದರೆ ಅಂತಹ ಮೆಡಿಕಲ್ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಹಾಯಕ ಔಷಧ ನಿಯಂತ್ರಕರಿಗೆ ನಿರ್ದೇಶನ ನೀಡಿದರು.
ಆರು ತಿಂಗಳಲ್ಲಿ 20 ನಕಲಿ ವೈದ್ಯರ ವಿರುದ್ಧ ಕ್ರಮ :
ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ 20 ನಕಲಿ ವೈದ್ಯರ ವಿರುದ್ಧ ಕ್ರಮ ಕೈಗೊಂಡು ಅವರ ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ. ಅಲ್ಲದೆ 2.20 ಲಕ್ಷ ರೂ. ದಂಡ ವಸೂಲು ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಂದಿತಾ ಎಂ.ಎನ್. ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಡಾ. ಟಿ. ರೋಣಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವಿಜಯಶಂಕರ, ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ. ಶಿವಕುಮಾರ್ ನಾರಾ, ಸಹಾಯಕ ಔಷಧ ನಿಯಂತ್ರಕ ಸಚಿನ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಶಂಕರಗೌಡ, ಐಎಂಎ ಅಧ್ಯಕ್ಷ ಡಾ. ಶೈಲೇಶ್ ಅಮರಕೇಡ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.