ಲಿಂಗಸುಗೂರು | ಶಾಲಾ ಮಕ್ಕಳಿಗೆ ವಿತರಿಸಬೇಕಿದ್ದ 50 ಸಾವಿರಕ್ಕೂ ಅಧಿಕ ಐರನ್ ಮಾತ್ರೆಗಳು ಶೌಚಾಲಯದಲ್ಲಿ ಪತ್ತೆ
ಲಿಂಗಸುಗೂರು: ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಬೇಕಿದ್ದ 50 ಸಾವಿರಕ್ಕೂ ಅಧಿಕ ಐರನ್ ಹಾಗೂ ಫೋಲಿಕ್ ಆಮ್ಲ (WIFS) ಮಾತ್ರೆಗಳು ಶಾಲೆಯ ಶೌಚಾಲಯದಲ್ಲಿ ಪತ್ತೆಯಾದ ಘಟನೆ ತಾಲೂಕಿನ ಗುರುಗುಂಟಾ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಸಾಪ್ತಾಹಿಕ ಕಬ್ಬಿಣ ಮತ್ತು ಫೋಲಿಕ್ ಆಮ್ಲ ಪೂರಕ (Weekly Iron and Folic Acid Supplementation – WIFS) ಯೋಜನೆಯಡಿ ವಿದ್ಯಾರ್ಥಿಗಳಿಗೆ ವಿತರಿಸಬೇಕಿದ್ದ ಮಾತ್ರೆಗಳು ಶೌಚಾಲಯದಲ್ಲಿ ಪತ್ತೆಯಾಗಿವೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಆಗಿನ ತಾಲೂಕು ಆರೋಗ್ಯಾಧಿಕಾರಿ ಡಾ. ಅಮರೇಶ ಮಾಕಾಪುರ ಅವರು ಶೌಚಾಲಯದಲ್ಲಿದ್ದ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಂದಾಜು 50 ಸಾವಿರಕ್ಕೂ ಅಧಿಕ ಮಾತ್ರೆಗಳು ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ವಶಪಡಿಸಿಕೊಂಡ ಮಾತ್ರೆಗಳನ್ನು ಮುಂದಿನ ಆದೇಶದವರೆಗೆ ಗುರುಗುಂಟಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ.
ಈ ಪ್ರಕರಣದಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಬೇಕಿದ್ದ ಐರನ್ ಮಾತ್ರೆಗಳನ್ನು ವಿತರಿಸದೆ ಶೌಚಾಲಯದಲ್ಲಿ ಬಿಸಾಡಿರುವುದು ಶಿಕ್ಷಕರ ಕರ್ತವ್ಯ ಲೋಪವನ್ನೇ ಪ್ರತಿಬಿಂಬಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಆರೋಗ್ಯ ಇಲಾಖೆಯಿಂದ ಕಾರಣ ಕೇಳಿ ನೋಟಿಸ್:
ಗುರುಗುಂಟಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು 13 ಜುಲೈ 2026ರಂದು ಶಾಲೆಯ ಮುಖ್ಯ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಮಾತ್ರೆಗಳನ್ನು ಏಕೆ ವಿತರಿಸಲಿಲ್ಲ ಹಾಗೂ ಅವು ಶೌಚಾಲಯಕ್ಕೆ ಹೇಗೆ ತಲುಪಿದವು ಎಂಬ ಕುರಿತು ಸಮಗ್ರ ವಿವರಣೆ ನೀಡುವಂತೆ ಸೂಚಿಸಲಾಗಿದೆ.
ಪ್ರಕರಣ ಗಂಭೀರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದಲೂ ಮುಖ್ಯ ಶಿಕ್ಷಕರು ಸೇರಿದಂತೆ ಸಂಬಂಧಪಟ್ಟ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಶಿಕ್ಷಕರಿಂದ ಸ್ಪಷ್ಟನೆ ಪಡೆದ ಬಳಿಕ ಇಲಾಖಾ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.