ಹಟ್ಟಿ | ನೀಟ್ ಅಕ್ರಮ ಖಂಡಿಸಿ ಎಸ್‌ಎಫ್‌ಐ ಪ್ರತಿಭಟನಾ ರ‍್ಯಾಲಿ

ಎನ್‌ಟಿಎ ವಿಸರ್ಜನೆ, ಧರ್ಮೇಂದ್ರ ಪ್ರಧಾನ ರಾಜೀನಾಮೆಗೆ ಆಗ್ರಹ

Update: 2026-07-23 21:15 IST

ಹಟ್ಟಿ : ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳು, ಶಿಕ್ಷಣ ಕ್ಷೇತ್ರದಲ್ಲಿನ ಅವ್ಯವಸ್ಥೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯನ್ನು ವಿಸರ್ಜಿಸುವುದು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಹಟ್ಟಿ ಘಟಕದ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಯಿತು.

ಕಾಮ್ರೇಡ್ ಅಮರಗುಂಡಪ್ಪ ನೆಲೋಗಿ ಬಸ್ ನಿಲ್ದಾಣದಿಂದ ಆರಂಭವಾದ ರ್ಯಾಲಿಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕ್ಯಾಂಪ್ ಬಸ್ ನಿಲ್ದಾಣದವರೆಗೆ ಸಾಗಿತು. ಪ್ರತಿಭಟನಾಕಾರರು ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳು, ಕೇಂದ್ರ ಸರ್ಕಾರದ ಶಿಕ್ಷಣ ನೀತಿ ಹಾಗೂ ವಿದ್ಯಾರ್ಥಿ ವಿರೋಧಿ ಧೋರಣೆಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಪ್ರತಿಭಟನಾಕಾರರು ಭಾರತದ ರಾಷ್ಟ್ರಪತಿಗೆ ಬರೆದ ಮನವಿ ಪತ್ರವನ್ನು ಹಟ್ಟಿ ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿ ಅವರಿಗೆ ಸಲ್ಲಿಸಿ, ರಾಷ್ಟ್ರಪತಿಗಳಿಗೆ ತಲುಪಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯನ್ನು ವಿಸರ್ಜಿಸಿ ಪಾರದರ್ಶಕ ಪರೀಕ್ಷಾ ವ್ಯವಸ್ಥೆ ಜಾರಿಗೆ ತರಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ದೇಶದಾದ್ಯಂತ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿನ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದು, ಅವರ ನ್ಯಾಯಸಮ್ಮತ ಬೇಡಿಕೆಗಳನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಬಾರದು. ಪ್ರಜಾಪ್ರಭುತ್ವದ ರೀತಿಯಲ್ಲಿ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿಗಳ ಧ್ವನಿಗೆ ಸ್ಪಂದಿಸಿ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸವನ್ನು ಮರುಸ್ಥಾಪಿಸಬೇಕು ಎಂದು ಎಸ್‌ಎಫ್‌ಐ ಮುಖಂಡರು ಒತ್ತಾಯಿಸಿದರು.

ವಿನಾಯಕ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ನರಸಪ್ಪ ಯಾದವ್ ಮಾತನಾಡಿ, ಶಿಕ್ಷಣವು ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಭೂತ ಹಕ್ಕಾಗಿದ್ದು, ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆ ಹಾಗೂ ಸಮಾನ ಅವಕಾಶಗಳು ಇರಬೇಕು. ನೀಟ್ ಸೇರಿದಂತೆ ರಾಷ್ಟ್ರೀಯ ಮಟ್ಟದ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ತರುತ್ತವೆ. ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಸುರೇಶ್ ಸೇರಿದಂತೆ ಎಸ್‌ಎಫ್‌ಐ ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಮುಖಂಡರಾದ ರಮೇಶ ಜೆ., ಮೌನೇಶ ಕಡ್ಡೋಣಿ, ಡಿವೈಎಫ್‌ಐ ಮುಖಂಡರಾದ ಇಮ್ರಾನ್ ಪಾಷಾ, ರಿಯಾಜ್ ಖುರೇಷಿ, ಪಯಾಜ್, ಮಹಿಬು, ಮಹಾಂತೇಶ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಎಐಡಿಡಬ್ಲ್ಯೂಎ), ವನಜಾಕ್ಷಿ, ಸಾಹೀರಾ ಬಾನು, ಶಾಂತಕುಮಾರಿ, ಸಿಐಟಿಯು ಮುಖಂಡರಾದ ಯಂಕೋಬ್ ಮಿಯ್ಯಾಪೂರು, ರಮೇಶ ಬಾಬು, ಜಮದಗ್ನಿ ಕೋಠಾ, ಬಾಬು ಭೂಪುರ್, ಮಲ್ಲಿಕಾರ್ಜುನ್ ಕಡೇಚೂರು ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಗೂ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಈ ಸಂದರ್ಭದಲ್ಲಿ ತಾಲೂಕು ಮುಖಂಡ ರಮೇಶ ಜೆ., ಹಟ್ಟಿ ಘಟಕದ ಅಧ್ಯಕ್ಷ ಮೌನೇಶ ಕಡ್ಡೋಣಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News