ರಾಯಚೂರು : ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ "ಛಾತ್ರೋನ್ ಕಿ ಗೂಂಜ್" ಬೃಹತ್ ಪ್ರತಿಭಟನೆ; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ

Update: 2026-07-23 14:15 IST

ರಾಯಚೂರು, ಜು. 23: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ, ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಪಾಡುವಂತೆ ಆಗ್ರಹಿಸಿ ರಾಯಚೂರಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಗುರುವಾರ "ಛಾತ್ರೋನ್ ಕಿ ಗೂಂಜ್" ಹೆಸರಿನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ರಾಯಚೂರು ಜಿಲ್ಲಾ ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ವಿವಿಧ ವಿದ್ಯಾರ್ಥಿ ಸಂಘಟನೆಗಳು ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳು ಸೇರಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು "ಬಿಜೆಪಿ ಹಠವೋ–ದೇಶ ಬಚಾವೋ", "ವಿದ್ಯಾರ್ಥಿಗಳಿಗೆ ನ್ಯಾಯ ಬೇಕು", "ನೀಟ್ ಹಗರಣದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು", "ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲೇಬೇಕು" ಎಂದು ಘೋಷಣೆಗಳನ್ನು ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

ಸಂಸತ್ ಭವನ ಚಲೋ ಹೋರಾಟದಲ್ಲಿ ವಿದ್ಯಾರ್ಥಿಗಳ ಮೇಲೆ ಜಲಫಿರಂಗಿ, ಅಶ್ರುವಾಯು ಹಾಗೂ ಲಾಠಿಚಾರ್ಜ್ ನಡೆಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜು ಮಾತನಾಡಿ, ನ್ಯಾಯಯುತವಾಗಿ ಹೋರಾಟ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರ್ಕಾರ ಲಾಠಿಚಾರ್ಜ್ ಮಾಡಿ ದೌರ್ಜನ್ಯ ಎಸಗಿದೆ. ತಮ್ಮ ಹಕ್ಕಿಗಾಗಿ ಹೋರಾಡುವುದು ತಪ್ಪಾ? ಯುವಕರ ಸಮಸ್ಯೆ ಕೇಳದ ಇಂತಹ ಸರ್ಕಾರ ಬೇಕಾ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಪ್ರಶ್ನಿಸಿದರು.

ಭಗತ್ ಸಿಂಗ್, ಮಹಾತ್ಮಾ ಗಾಂಧೀ, ಸರ್ದಾರ್ ವಲ್ಲಭಭಾಯಿ ಪಟೇಲ್, ಸುಖದೇವ, ರಾಜಗುರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನ ಹಕ್ಕು, ಸರ್ಕಾರವನ್ನು ಆರಿಸುವ ಮತದಾನದ ಹಕ್ಕು, ಸಮಾನ ಶಿಕ್ಷಣದ ಹಕ್ಕು ನೀಡಿದ್ದಾರೆ. ಆದರೆ ಬಿಜೆಪಿಯ ಕೇಂದ್ರ ಸರ್ಕಾರ ಎಸ್‌ಐಆರ್ ಮೂಲಕ ಮತದಾನದ ಹಕ್ಕು, ಪೇಪರ್ ಲೀಕ್ ಮೂಲಕ ಶಿಕ್ಷಣದ ಹಕ್ಕು, ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಮಾಡುವ ಮೂಲಕ ಸಂವಿಧಾನದತ್ತ ಹಕ್ಕು ಕಸಿದುಕೊಳ್ಳುತ್ತಿದೆ. ಆಗಸ್ಟ್‌ನಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ದೇಶ ವಿರೋಧಿ ಸರ್ಕಾರವನ್ನು ಕಿತ್ತೆಸೆಯಬೇಕು. ಹೋರಾಟವನ್ನು ಯಾವುದೇ ಕಾರಣಕ್ಕೆ ಸ್ಥಗಿತಗೊಳಿಸದೇ ತೀವ್ರಗೊಳಿಸುತ್ತೇವೆ. ಎರಡನೇ ಸ್ವಾತಂತ್ರ್ಯ ಹೋರಾಟಕ್ಕೆ ಸಿದ್ಧರಾಗೋಣ ಎಂದು ಕರೆ ನೀಡಿದರು.

ಜಂತರ್ ಮಂತರ್‌ನಲ್ಲಿ ಹೋರಾಟ ನಡೆಸಿದ ವಿದ್ಯಾರ್ಥಿಗಳ ಮೇಲೆ ದಾಖಲಿಸಿರುವ ಎಲ್ಲಾ ಪ್ರಕರಣಗಳನ್ನು ತಕ್ಷಣ ಹಿಂಪಡೆಯಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ದೇಶದ ಉನ್ನತ ಶಿಕ್ಷಣ ಪ್ರವೇಶ ಪರೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮರುಸ್ಥಾಪಿಸಲು ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶ್ರೀದೇವಿ ನಾಯಕ ಅವರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಹಲವು ವರ್ಷಗಳ ಶ್ರಮ ಹಾಗೂ ಭವಿಷ್ಯಕ್ಕೆ ಗಂಭೀರ ಧಕ್ಕೆಯಾಗಿದೆ. ಪರೀಕ್ಷಾ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸ ಕುಸಿದಿದ್ದು, ತಪ್ಪಿತಸ್ಥರ ವಿರುದ್ಧ ಯಾವುದೇ ರಾಜಕೀಯ ಒತ್ತಡವಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದರೆ ಹೋರಾಟ ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆ ನೀಡಿದರು.

ಪ್ರತಿಭಟನೆಯ ವೇಳೆ ನೀಟ್ ಪರೀಕ್ಷೆಯ ಪಾರದರ್ಶಕತೆ, ವಿದ್ಯಾರ್ಥಿಗಳ ಹಕ್ಕುಗಳ ರಕ್ಷಣೆ ಹಾಗೂ ಶಿಕ್ಷಣ ವ್ಯವಸ್ಥೆಯಲ್ಲಿ ಜವಾಬ್ದಾರಿತನಕ್ಕೆ ಆಗ್ರಹಿಸಿ ಘೋಷಣೆಗಳು ಮೊಳಗಿದವು. ಅಂಬೇಡ್ಕರ್ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆಯ ವಾತಾವರಣ ನಿರ್ಮಾಣವಾಗಿದ್ದು, ಶಾಂತಿ ಕಾಪಾಡಲು ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆ. ಶಾಂತಪ್ಪ, ಮೊಹಮ್ಮದ್ ಶಲಾಂ, ಸುರೇಖಾ, ಪ್ರತಿಭಾ ರೆಡ್ಡಿ, ಯುವ ಮುಖಂಡ ಮರಿಸ್ವಾಮಿ, ಜೀಶಾನ್ ಅಖಿಲ್ ಸಿದ್ದೀಖಿ, ಪ್ರತಾಪ್, ಎಸ್.ಆರ್. ಖಾನ್, ಮುದಾಸಿರ್, ಗಟ್ಟು ಬಿಚ್ಚಾಳಿ, ಸಾಜೀದ್ ಸಮೀರ್, ನರಸಿಂಹಲು ಮಾಡಿಗಿರಿ, ಪವನ್ ಕುಮಾರ್, ಯಂಕಣ್ಣ ಯಾದವ, ನಾಗರಾಜ್, ಸ್ವಾಮಿ, ರಾಘವೇಂದ್ರ, ಈರಣ್ಣ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

 

 

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News