Raichur | ಜಂತರಮಂತರ್ ಪ್ರತಿಭಟನೆ ‘ರಾಜಕೀಯ ಪ್ರೇರಿತ ’ : ಬಿಜೆಪಿ ಆರೋಪ

Update: 2026-07-24 17:07 IST

ರಾಯಚೂರು: ದೆಹಲಿಯ ಜಂತರಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಬಳಿ ಕಾಂಗ್ರೆಸ್ ಪ್ರತಿಭಟನೆ ನಡೆಸಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಿಧಾನಪರಿಷತ್ ಮಾಜಿ ಸದಸ್ಯ ಎನ್. ಶಂಕ್ರಪ್ಪ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ಮರುಪರೀಕ್ಷೆ ನಡೆಸಲಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಆದರೂ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಉದ್ದೇಶದಿಂದ ಕೆಲವರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಗದೆ ಸರ್ಕಾರದ ವಿರುದ್ಧ ಯುವಕರನ್ನು ಪ್ರಚೋದಿಸಿ ಹೋರಾಟ ನಡೆಸುತ್ತಿದೆ. ರಾಜಕೀಯ ಲಾಭಕ್ಕಾಗಿ ಇತರ ವಿರೋಧ ಪಕ್ಷಗಳೂ ಕೈಜೋಡಿಸಿದ್ದು, ಜಂತರಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿಂದೆ ಕಾಣದ ಕೈಗಳು ಕಾರ್ಯನಿರ್ವಹಿಸುತ್ತಿವೆ ಹಾಗೂ ವಿದೇಶದಿಂದ ಹಣ ಹರಿದು ಬರುತ್ತಿದೆ ಎಂದು ಅವರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯಲ್ಲಿ ಮಾಜಿ ಸಂಸದ ಬಿ ವಿ ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೇಕಿಹಾಳ್, ಕರಿಯಪ್ಪ,ಜಂಬಣ್ಣ ನೀಲಗಲ್, ರವೀಂದ್ರ ಜಾಲ್ದಾರ್, ನಾಗರಾಜ್ ಭಲ್ಕಿ, ರಾಜಕುಮಾರ್, ರಾಘವೇಂದ್ರ ಹುಟಕೂರ್, ವಿಜಯ್ ಕುಮರ್ ಸಜ್ಜನ್, ಅಂಬ್ರೆಷ್ ಪಾಟೀಲ್, ಕೆ ಆರ್ ಪಾಟೀಲ್, ಶಂಕರ್ ರೆಡ್ಡಿ, ಅಂಜಿನಯ್ಯ ಕಡಗೋಲ್, ರೂಪ್ ಶ್ರೀನಿವಾಸ್ ನಾಯಕ್, ಮೌನೇಶ್ ಇತರರು ಉಪಸ್ಥಿತರಿದ್ದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News