ರಾಯಚೂರು | ಮತಗಳ್ಳತನದ ಕುರಿತು ಚುನಾವಣಾ ಆಯೋಗ ಮೌನ : ವಿನಯ್ ಕುಮಾರ್ ಸೊರಕೆ ಆರೋಪ
ರಾಯಚೂರು: ದೇಶದಲ್ಲಿ ಮತಗಳ್ಳತನ ನಡೆಯುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ದೂರು ನೀಡಿದರೂ, ಯಾವುದೇ ಕ್ರಮ ಕೈಗೊಳ್ಳದೇ ಬದಲಿಗೆ ಅವರಿಗೆ ಬೆದರಿಕೆ ಹಾಕಲಾಗುತ್ತಿದೆ. ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ಬೆಂಗಳೂರು ಮಹಾದೇವಪುರ ಬಳಿಕ ಈಗ ಕಲಬುರಗಿ ಜಿಲ್ಲೆಯ ಅಳಂದದಲ್ಲಿಯೂ ಮತಗಳ್ಳತನ ನಡೆದಿದೆ. ಈ ಕುರಿತು ಪ್ರಿಯಾಂಕ್ ಖರ್ಗೆ ಮತ್ತು ಬಿ.ಆರ್.ಪಾಟೀಲ್ ದೂರು ನೀಡಿದರೂ ಚುನಾವಣಾ ಆಯೋಗ ಮೌನವಾಗಿದೆ. ಬಿಹಾರ, ಮಹಾರಾಷ್ಟ್ರದಲ್ಲಿ ಮತ ಕಳ್ಳತನದ ದಾಖಲೆಗಳಿವೆ. ಅಮಿತ್ ಶಾ ಅವರು ಚುನಾವಣಾ ಪ್ರಚಾರದ ವೇಳೆ ಮತ ಸೇರಿಸುವ ಬಗ್ಗೆ ಬಹಿರಂಗ ಹೇಳಿಕೆ ನೀಡಿದರೂ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ ಏಕೆ?” ಎಂದು ಪ್ರಶ್ನಿಸಿದರು.
ಮುಂದಿನ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ದುರಾಡಳಿತದ ಬಗ್ಗೆ ಜನತೆಗೆ ತಲುಪಿಸುತ್ತೇವೆ. ಜನರೇ ಬಿಜೆಪಿ ವಿರುದ್ಧ ತಕ್ಕ ಉತ್ತರ ನೀಡುತ್ತಾರೆ” ಎಂದರು.
ಅವರು ಶೇ.5 ಅಭಿವೃದ್ಧಿ ಮಾಡಿ ಶೇ.95 ಪ್ರಚಾರ ಪಡೆಯುತ್ತಾರೆ. ಕಾಂಗ್ರೆಸ್ ನೂರರಷ್ಟು ಅಭಿವೃದ್ಧಿ ಮಾಡಿದರೂ ಪ್ರಚಾರದಲ್ಲಿ ಹಿಂದೆ ಬೀಳುತ್ತದೆ. ಇದರಿಂದ ನಮ್ಮ ಕೆಲಸ ಜನರಿಗೆ ತಲುಪಲು ವಿಳಂಬವಾಗುತ್ತಿದೆ ಎಂದು ಹೇಳಿದರು.
“ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗುತ್ತದೆ ಎಂದು ಬಿಜೆಪಿ ಅಪಪ್ರಚಾರ ಮಾಡಿದರೂ ಇಂದು ಸಿದ್ದರಾಮಯ್ಯ ಸರ್ಕಾರದ ದಿಟ್ಟ ಹೆಜ್ಜೆಯಿಂದ ರಾಜ್ಯದ ತಲಾ ಆದಾಯ ನಂ.1, ಜಿಡಿಪಿ ವೃದ್ಧಿಯಲ್ಲಿ ದೇಶದಲ್ಲಿ ಮೂರನೇ ಸ್ಥಾನ ಗಳಿಸಿದೆ. ಈ ಸಾಧನೆಗೆ ಸರ್ಕಾರ ಕಾರಣ” ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳಲ್ಲಿ ಸಣ್ಣ ಲೋಪಗಳಿದ್ದರೆ ಸರಿಪಡಿಸಲಾಗುತ್ತದೆ. ಬಿಜೆಪಿ ಅಪಪ್ರಚಾರಕ್ಕೆ ಕಾಂಗ್ರೆಸ್ ಹೆದರದು ಎಂದು ಸೊರಕೆ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎ. ವಸಂತಕುಮಾರ, ಪ್ರಚಾರ ಸಮಿತಿ ಸಂಯೋಜಕ ಭೀಮಣ್ಣ ಮೇಟಿ, ಆದರ್ಶ ಯಲ್ಲಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಪಾಟೀಲ ಇಟಗಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಯದ್ದಲದಿನ್ನಿ, ಮುಖಂಡರಾದ ಕೆ. ಶಾಂತಪ್ಪ, ಎನ್. ಶ್ರೀನಿವಾಸರೆಡ್ಡಿ, ಪಾಮಯ್ಯ ಮುರಾರಿ, ಅಸ್ಲಾಂ ಪಾಷಾ, ಸುಧೀಂದ್ರ ಜಾಗಿರದಾರ್, ಮಹಿಳಾ ಘಟಕ ಮುಖಂಡರಾದ ಶ್ರೀದೇವಿ ನಾಯಕ, ಶಶಿಕಲಾ ಭೀಮರಾಯ ಸೇರಿದಂತೆ ಅನೇಕರಿದ್ದರು.