×
Ad

ರಾಯಚೂರು | ಹೆಣ್ಣು ಮಕ್ಕಳಿಗೆ ಯಾವುದೇ ಜಾತಿ ಇಲ್ಲ: ಡಾ.ನಾಗಲಕ್ಷ್ಮೀ ಚೌಧರಿ

Update: 2025-09-17 22:17 IST

ರಾಯಚೂರು : ಹೆಣ್ಣೇ ಜಾತಿ, ಹೆಣ್ಣೇ ಮತ, ಹೆಣ್ಣೇ ಧರ್ಮ. ನಾವೆಲ್ಲರೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಕ್ಕಳು. ಹೆಣ್ಣುಮಕ್ಕಳಿಗೆ ಯಾವುದೇ ಜಾತಿ ಇರುವುದಿಲ್ಲ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.

ನಗರದ ಎಸ್‌ಎಸ್‌ಆರ್‌ಜಿ ಮಹಿಳಾ ವಿಶ್ವವಿದ್ಯಾಲಯದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಪೊಲೀಸ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಸೆ.17ರಂದು ನಡೆದ ಕಾರ್ಯಕ್ರಮದಲ್ಲಿ ಪಿಯುಸಿ ಮತ್ತು ಪದವಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಅವರು, ವಿದ್ಯಾರ್ಥಿನಿಯರಿಗೆ ಹಲವು ಸಲಹೆಗಳನ್ನು ನೀಡಿದರು.

ವಿದ್ಯಾರ್ಥಿ ಜೀವನವನ್ನು ಎಚ್ಚರಿಕೆಯಿಂದ ಕಳೆಯಬೇಕು. ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯಿಂದ ಬಳಸಬೇಕು. ಓದುವ ಸಮಯದಲ್ಲಿ ಪ್ರೇಮ–ಪ್ರೇಮದ ಗೊಡವೆಗೆ ಒಳಗಾಗಬಾರದು. ತಪ್ಪು ಮಾಡುವುದು ಸಹಜ, ಆದರೆ ತಿದ್ದಿಕೊಳ್ಳುವುದು ಮುಖ್ಯ. ಗೊತ್ತಿಲ್ಲದವರ ಜೊತೆ ಮಾತನಾಡಬಾರದು, ಚಾಟ್ ಮಾಡಬಾರದು. ಬ್ಲಾಕ್‌ಮೇಲ್ ಮಾಡುವವರ ಕೈಗೆ ಸಿಕ್ಕರೆ ಬದುಕು ಸಂಕಷ್ಟವಾಗಬಹುದು ಎಂದು ಎಚ್ಚರಿಕೆ ನೀಡಿದರು.

ಯಾವುದೇ ತಪ್ಪು ನಡೆದರೂ ಪೋಷಕರಿಗೆ ತಿಳಿಸಬೇಕು. ಅಗತ್ಯವಿದ್ದರೆ ಪೊಲೀಸರ ನೆರವು ಪಡೆಯಬೇಕು. ಸರ್ಕಾರ ನೀಡಿರುವ ಸಹಾಯವಾಣಿಗಳನ್ನು ಬಳಸಬೇಕು. ಧೈರ್ಯದಿಂದ ಮಾತನಾಡಿದರೆ ಯಾವ ಸಮಸ್ಯೆಯನ್ನೂ ಎದುರಿಸಬಹುದು ಎಂದರು.

ಯಾವುದೇ ಕಡೆ ಹೆಣ್ಣುಮಕ್ಕಳು ಆರೋಗ್ಯ, ಶಿಕ್ಷಣ, ಆರ್ಥಿಕವಾಗಿ ಸಬಲವಾಗಿಲ್ಲದಿದ್ದರೆ ಅದು ಅಭಿವೃದ್ಧಿಯಲ್ಲ. ಹೆಣ್ಣುಮಕ್ಕಳು ಆರೋಗ್ಯವಾಗಿದ್ದಾಗ, ವಿದ್ಯಾಭ್ಯಾಸ ಮಾಡಿ ಆರ್ಥಿಕವಾಗಿ ಬಲಿಷ್ಠರಾದಾಗ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂದು ಡಾ. ಅಂಬೇಡ್ಕರ್ ಅವರ ಚಿಂತನೆಗಳನ್ನು ನೆನಪಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರೊಂದಿಗೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಂವಾದ ನಡೆಸಿದ ಅಧ್ಯಕ್ಷೆ, ಕೊನೆಯಲ್ಲಿ ವೇದಿಕೆಯಿಂದಲೇ ಸೆಲ್ಫಿ ತೆಗೆದುಕೊಂಡರು. ನಂತರ ವಿದ್ಯಾರ್ಥಿನಿಯರು ಅವರ ಬಳಿ ಬಂದು ನಿರಂತರವಾಗಿ ಸೆಲ್ಫಿ ಪಡೆದು ಸಂತಸ ಹಂಚಿಕೊಂಡರು. ವಾಹನ ಏರುವ ತನಕ ವಿದ್ಯಾರ್ಥಿನಿಯರು ಸೆಲ್ಫಿ ಪಡೆಯಲು ಮುಂದಾದರು.

ಈ ಸಂದರ್ಭದಲ್ಲಿ ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಕಾಲೇಜಿನ ಕಾರ್ಯದರ್ಶಿ ವಕೀಲ ಗಿರೀಜಾ, ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಈರಮ್ಮ ಗುಂಜಳ್ಳಿ, ಪ್ರಾಚಾರ್ಯ ಡಾ. ಸಂಜಯ ಪವಾರ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ರಾಜೇಶ್ವರಿ, ಮುಖಂಡರಾದ ಶ್ರೀದೇವಿ ನಾಯಕ, ಮಂಜುಳಾ ಅಮರೇಶ, ವಂದನಾ ಶಿವಕುಮಾರ, ಪ್ರತಿಭಾ ರೆಡ್ಡಿ, ಲಕ್ಷ್ಮೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ನವೀವಕುಮಾರ ಯು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗಿರಿಜವ್ವ ನಿರೂಪಿಸಿದರು.

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News