ರಾಯಚೂರು | ಜಾತಿ ಸಮೀಕ್ಷೆಯಲ್ಲಿ ‘ಹೆಳವ’ ಎಂದು ನಮೂದಿಸಬೇಕು : ವೈ.ಶ್ರೀನಿವಾಸ್ ಪೋತಗಲ್
ರಾಯಚೂರು: ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ ರಾಜ್ಯದಾದ್ಯಂತ ಆರಂಭವಾಗಿದ್ದು, ಹೆಳವ ಸಮಾಜದವರು ಸಮೀಕ್ಷೆಯಲ್ಲಿ ಕಲಂ 9ರಲ್ಲಿ ‘ಹೆಳವ’ ಹಾಗೂ ಕಾಲಂ 30ರಲ್ಲಿ ‘ವೃತ್ತಿ ವಂಶಾವಳಿ ಹೇಳುವುದು’ ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದು ಅಖಿಲ ಕರ್ನಾಟಕ ಹೆಳವ ಸಮಾಜದ ಹಿರಿಯ ಮುಖಂಡ ವೈ.ಶ್ರೀನಿವಾಸ್ ಪೋತಗಲ್ ತಿಳಿಸಿದ್ದಾರೆ.
ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದಂತೆ, ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಸುತ್ತಿರುವ ಈ ಸಮೀಕ್ಷೆಯಲ್ಲಿ ಅಧಿಕಾರಿಗಳು ಮನೆ ಮನೆಗೆ ಬರುವಾಗ ಅಗತ್ಯ ದಾಖಲೆಗಳನ್ನು ತೋರಿಸಿ, ಧರ್ಮ ಮತ್ತು ಜಾತಿ ಕುರಿತು ಕೇಳಿದಾಗ ‘ಹಿಂದೂ ಧರ್ಮ – ಹೆಳವ ಜಾತಿ’ ಎಂದು ಬರೆಯಿಸಬೇಕು ಎಂದು ಹೇಳಿದ್ದಾರೆ.
ಸಮೀಕ್ಷೆಯ ದಿನ ಅಧಿಕಾರಿಗಳು ಬಂದಾಗ ಊರಿನಲ್ಲಿ ಯಾರಾದರೂ ಹಾಜರಿರದಿದ್ದರೆ, ಅವರನ್ನು ಫೋನ್ ಮೂಲಕ ಕರೆಸಿ ಸಮೀಕ್ಷೆ ಮಾಡಿಸಬೇಕು. ಕಾಲಂ 8ರಲ್ಲಿ ಹಿಂದೂ, ಕಲಂ 9ರಲ್ಲಿ ಹೆಳವ (ಕೋಡ್ ಸಂಖ್ಯೆ ಎ-0476), ಕಲಂ 30ರಲ್ಲಿ ವೃತ್ತಿ ವಂಶಾವಳಿ ಹೇಳುವುದು (ಕೋಡ್ ಸಂಖ್ಯೆ 26), ಮತ್ತು ವಂಶಾವಳಿ ವೃತ್ತಿ ಮುಂದುವರೆದಿದೆಯೇ ಎಂಬಲ್ಲಿ ‘ಹೌದು’ ಎಂದು ನಮೂದಿಸಬೇಕು. ಜಿಲ್ಲೆಯ ಎಲ್ಲಾ ಹೆಳವ ಬಾಂಧವರು ತಪ್ಪದೇ ಹೆಳವ ಎಂದು ಬರೆಸಿಸಬೇಕು ಎಂದು ಹೇಳಿದರು.