×
Ad

ರಾಯಚೂರು | ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಭೆ

Update: 2026-07-03 20:01 IST

ರಾಯಚೂರು : ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆಯಾಗದಂತೆ ದಾಸ್ತಾನು ಮಾಡಿಕೊಳ್ಳಬೇಕು. ರೈತರ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರವನ್ನು ಕಾಲಕಾಲಕ್ಕೆ ‌ರೈತರಿಗೆ ವಿತರಣೆ ಮಾಡಬೇಕು. ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ರಾಯಚೂರು ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಆಗಿರುವ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಅವರು ಹೇಳಿದರು.

ಜುಲೈ 3ರ ಶುಕ್ರವಾರದಂದು ನಗರದ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ರಾಯಚೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳು, ಮುಂಗಾರು ಹಂಗಾಮಿನ ಬಿತ್ತನೆ ಮತ್ತು ರಸಗೊಬ್ಬರ ಬೇಡಿಕೆಗಳು ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಖಾಸಗಿ ಅಂಗಡಿಗಳಲ್ಲಿ ಇರುವ ದಾಸ್ತಾನುಗಳ ಬಗ್ಗೆ ಫಲಕ ಪ್ರದರ್ಶನ ಮಾಡಬೇಕು. ರೈತರಿಂದ ಹೆಚ್ಚುವರಿ ಹಣವನ್ನು ಸ್ವೀಕರಿಸದಂತೆ ನೋಡಿಕೊಳ್ಳಬೇಕು. ಕೃಷಿ ಇಲಾಖೆಯ ಅಧಿಕಾರಿಗಳು ಆಗಾಗ ರಸಗೊಬ್ಬರ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಕಳ್ಳಸಂತೆಯಲ್ಲಿ ಮಾರಾಟ ಮಾಡಿದಲ್ಲಿ ಅಂತಹ ಅಂಗಡಿಗಳನ್ನು ‌ಬ್ಲಾಕ್ ಲಿಸ್ಟ್ ಪಟ್ಟಿಗೆ ಸೇರಿಸಬೇಕು. ಜಿಲ್ಲೆಯಲ್ಲಿ ಇನ್ನೂ ಬಿತ್ತನೆಗೆ ಸಮಯವಿದ್ದು, ಬಿತ್ತನೆ ಬೀಜಗಳ ವಿತರಣೆ ಅಗತ್ಯ ಕ್ರಮವಹಿಸಬೇಕೆಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಜಿಲ್ಲೆಯಲ್ಲಿ ರೈತರಿಂದ ಬೆಳೆ ವಿಮೆಗೆ ಮಾಡಿಸಲು ಅಗತ್ಯ ಪ್ರಚಾರ ಕೈಗೊಳ್ಳಬೇಕು. ತಾಲೂಕು ಮಟ್ಟದ ಅಧಿಕಾರಿಗಳು ರೈತರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. 75 ಸಾವಿರ ರೈತರ ಪೈಕಿ 75 ಸಾವಿರ ರೈತರು ಬೆಳೆ ವಿಮೆಯಲ್ಲಿ ನೋಂದಣಿಯಾಗಬೇಕು. ಜಿಲ್ಲೆಯಲ್ಲಿ 2026ನೇ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಜಿಲ್ಲೆಯ 83 ಪಂಚಾಯತಗಳ ಪೈಕಿ 202 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಿಸಬಹುದಾಗಿದೆ ಎಂದು ಅಂದಾಜಿಸಲಾಗಿದೆ. ‌ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್‌ ಸಮಿತಿಯ ಸಭೆ ಮಾಡಿ, ನೀರಿನ ಸಮಸ್ಯೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಳೆ ಆಗದೇ ಇರುವ ಕಾರಣಕ್ಕೆ ಖಾಸಗಿ ಬೋರವೆಲ್ ನಿಂದ ಕುಡಿಯುವ ನೀರಿನ ಕಾಮಗಾರಿಯನ್ನು ‌ಮುಂದುವರಿಸಬೇಕು. ಕಾಲಕಾಲಕ್ಕೆ ಅನುದಾನವನ್ನು ಸಂಬಂಧಿಸಿದ ಮಾಲೀಕರಿಗೆ ಪಾವತಿಸಬೇಕು. ನಿರ್ಲಕ್ಷ್ಯ ತೋರಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಜಿಲ್ಲೆಯ 38 ಕೆರೆಯಲ್ಲಿ ಶೇ.76 ರಿಂದ ಶೇ.100ರಷ್ಟು ಕೆರೆಗಳನ್ನು ಮಾತ್ರ ತುಂಬಿಸಲಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೆರೆಗಳನ್ನು ತುಂಬಿಸಬೇಕೆಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ‌ನೀಡಿದರು.

ನೀರಿನ ಸಮಸ್ಯೆ ಕುರಿತು ಜಿಲ್ಲೆಯಲ್ಲಿ ನೋಡಲ್ ಅಧಿಕಾರಿಗಳನ್ನು ‌ನೇಮಿಸಿಲಾಗಿದೆ.‌ ನೋಡಲ್ ಅಧಿಕಾರಿಗಳು ತಮ್ಮ ತಮ್ಮ‌ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ನೀರು ಬಿಟ್ಟಾಗ ಶೇ.100ರಷ್ಟು ನೀರು ತುಂಬಲು ಬೇಕಾಗುವ ‌ವ್ಯವಸ್ಥೆಗೆ ಸಂಬಂಧಿಸಿದ ಅಧಿಕಾರಿಗಳಿಂದ ಕೂಡಲೇ ವರದಿ ಸಲ್ಲಿಸಬೇಕು. ರಾಯಚೂರು ನಗರಕ್ಕೆ ‌ನೀರಿನ ಸಮಸ್ಯೆಯಾಗದಂತೆ ‌ಮುಂಜಾಗ್ರತೆ ವಹಿಸಬೇಕು. ಕೃಷ್ಣ ನದಿಯಿಂದ ನೀರನ್ನು ಲಿಪ್ಟ್ ಮಾಡಿ, ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಕಾಲುವೆಗಳ ನಾಲೆಗಳನ್ನು ಸ್ವಚ್ಛಗೊಳಿಸಬೇಕು. ನರೇಗಾ ಯೋಜನೆಯಡಿ ಕಾಲುವೆ ಹಾಗೂ ಕೆರೆಗಳ ಹುಳ ತೆಗೆಯಲು ವ್ಯವಸ್ಥೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರು ಆಗಿರುವ ಮಸ್ಕಿ ಕ್ಷೇತ್ರದ ಶಾಸಕರಾದ ಆರ್.ಬಸನಗೌಡ ತುರ್ವಿಹಾಳ, ರಾಯಚೂರು ಲೋಕಸಭಾ ಸದಸ್ಯರಾದ ಜಿ.ಕುಮಾರ ನಾಯಕ, ಮಾನವಿ ಕ್ಷೇತ್ರದ ಶಾಸಕರಾದ ಜಿ.ಹಂಪಯ್ಯ ವಿಧಾನ ಪರಿಷತ್ ಶಾಸಕರಾದ ಎ.ವಸಂತಕುಮಾರ, ಬಸನಗೌಡ ಬಾದರ್ಲಿ, ಜಿಲ್ಲಾಧಿಕಾರಿಗಳಾದ ಪೂವಿತಾ ಎಸ್., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಈಶ್ವರ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಗ್ಷು ಗಿರಿ., ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಅಪರ ಜಿಲ್ಲಾಧಿಕಾರಿ ಶಿವಾನಂದ, ರಾಯಚೂರು ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್, ಜಿಲ್ಲಾ ಪಂಚಾಯತ ಉಪ‌ ಕಾರ್ಯದರ್ಶಿ ಹಾಲಸಿದ್ದಪ್ಪ ಪೂಜಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಸಭೆಯಲ್ಲಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News