×
Ad

ರಾಯಚೂರು| ಆತ್ಮಬಂಧು ಕೃತಿ ಲೋಕಾರ್ಪಣೆಗೊಳಿಸಿದ ಸಚಿವ ಬೋಸರಾಜು

Update: 2026-01-10 20:30 IST

ರಾಯಚೂರು: ಜಿ.ಸುರೇಶ ಅವರು ಹಿಂದುಳಿದವರ ಶೋಷಿತರ ಪರವಾಗಿ ಹೋರಾಡಿದ್ದರು. ಪಕ್ಷದಲ್ಲಿಯೂ ಗುರುತಿಸಿಕೊಂಡು ಉತ್ಸಾಹದಿಂದ ಇದ್ದರು. ಅವರ ಅಗಲಿಕೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿ.ಸುರೇಶ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ವೀರಹನುಮಾನ ರಚಿತ ‘ಆತ್ಮಬಂಧು ಎರಡು ಜೀವ ಒಂದು ಕಥಾನಕ’ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಬೋಸರಾಜು, ಸಾಹಿತಿ ವೀರಹನುಮಾನ ಮತ್ತು ಜಿ.ಸುರೇಶ ಅವರು ಎರಡು ದೇಹ ಒಂದೇ ಆತ್ಮದಂತೆ ಇದ್ದವರಾಗಿದ್ದರು. ಜಿ.ಸುರೇಶ ಅವರನ್ನು ಸದಾ ಕಾಲ ನೆನೆಯುವಂತೆ ಕೃತಿಯನ್ನು ರಚಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಸುರೇಶ ಅವರ ಆತ್ಮವಿಚಾರಗಳಿಗೆ ಅಕ್ಷರ ರೂಪವನ್ನು ನೀಡಿ, ಸರಳವಾಗಿ ಕೃತಿ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಮಾಜಿ ಸಚಿವ ಕುಮಾರ ಬಂಗಾರಪ್ಪ ಅವರು ಮಾತನಾಡಿ, ತಂದೆ ಬಂಗಾರಪ್ಪ ಅವರಿಂದ ಜಿ.ಸುರೇಶ ಅವರು ಪರಿಚಯವಾಗಿತ್ತು. ಅಂದಿನಿಂದಲೂ ಜಿ.ಸುರೇಶ ನಮ್ಮ ಮನೆಯ ಬಂಧುವಾಗಿದ್ದರು. ಬಂಗಾರಪ್ಪ ಅವರನ್ನು ಮನೆಯ ಮಗನಂತೆ ಕಂಡಿದ್ದು ರಾಯಚೂರು ಜಿಲ್ಲೆಯಾಗಿದೆ. ಸುರೇಶ ಅವರ ಕುರಿತಾದ ಕೃತಿಯು 14 ಭಾಗಗಳನ್ನು ಒಳಗೊಂಡಿದ್ದು, ಬಾಲ್ಯದಿಂದ ಸುರೇಶ ಅವರ ಜೀವನವನ್ನು ಹಾಗೂ ಅವರೊಂದಿಗೆ ಕಳೆದ ಒಡನಾಟವನ್ನು ಕೃತಿಯಲ್ಲಿ ನೆನೆಯಲಾಗಿದೆ. ಸುರೇಶ ಅವರು ಹಿತಚಿಂತಕರಾಗಿ ಬೆನ್ನೆಲುಬಾಗಿ ನಿಂತಿದ್ದರು ಎಂದು ತಿಳಿಸಿದರು.

ಕನ್ನಡ ಸಾಹಿತ್ಯಕ್ಕೆ ಸುರೇಶ ಅವರ ಕೊಡುಗೆ ಅಪಾರವಾದದ್ದು, ಹಿಂದುಳಿದ ವರ್ಗಗಳ ಹಾಗೂ ದಲಿತರ ಮೇಲೆ ಅಪಾರವಾದ ಬಾಂದ್ಯವ್ಯವನ್ನು ಸುರೇಶ ಅವರು ಹೊಂದಿದ್ದರು. ಜಿಲ್ಲೆಯಲ್ಲಿರುವ ನೀರಾವರಿ ಸಮಸ್ಯೆಗಳು, ಬೆಲೆ ಏರಿಕೆ ಸೇರಿದಂತೆ ಅನೇಕ ಸಮಸ್ಯೆಗಳ ಕುರಿತು ನಿರಂತರವಾಗಿ ಹೋರಾಟ ಮಾಡುತ್ತಾ ಎಲ್ಲಾ ಕ್ಷೇತ್ರಗಳಲ್ಲಿ ಆವರಿಸಿಕೊಂಡಿದ್ದರು. ಇಂದಿಗೂ ಜಿಲ್ಲೆಯ ಪ್ರತಿಯೊಬ್ಬರ ಹೃದಯದಲ್ಲಿ ಜಿ.ಸುರೇಶ ನೆಲೆಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾರನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾರಸಮಲ್ ಸುಖಾಣಿ ಮಾತನಾಡಿ, ಜಿ.ಸುರೇಶ ಕ್ರಿಯಾಶೀಲತೆಯಿಂದ ಗುರುತಿಸಿಕೊಂಡವರು. ಜಿಲ್ಲೆಯ ಪ್ರಗತಿಗೆ ಎನ್.ಎಸ್.ಬೋಸರಾಜ ಇವರನ್ನು ಉಸ್ತುವಾರಿ ಸಚಿವರನ್ನಾಗಿಸುವುದು ಅಗತ್ಯವಾಗಿದೆ ಎಂದು ಹೇಳಿದರು.

ಈ ವೇಳೆ ಸಾಹಿತಿ ಮಹಾಂತೇಶ ಮಸ್ಕಿ, ಹನುಮಾನ ದೇವಸ್ಥಾನದ ಅರ್ಚಕ ಹನುಮೇಶಾಚಾರ್, ಮಾಹಿತಿ ಹಕ್ಕು ಆಯೋಗದ ಆಯುಕ್ತ ಬಿ.ವೆಂಕಟಸಿಂಗ್, ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ಸಾಹಿತಿ ರಾಮಣ್ಣ ಹವಳೆ, ಕೃತಿಕಾರ ವೀರಹನುಮಾನ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News