×
Ad

ಸಿಂಧನೂರು | ಜ.11ರಂದು 'ಮತದಾರರ ವಿಶೇಷ ಪರಿಷ್ಕರಣೆ' ವಿರೋಧಿ ಸಂವಾದ

ಚಿಂತಕ ಶಿವಸುಂದರ್ ಭಾಗಿ

Update: 2026-01-10 12:16 IST

ಸಿಂಧನೂರು: ನಗರದ ಟೌನ್‍ಹಾಲ್‍ನಲ್ಲಿ ಜ.11ರ ಭಾನುವಾರ ಬೆಳಿಗ್ಗೆ 'ಮತದಾರರ ವಿಶೇಷ ಪರಿಷ್ಕರಣೆ' ವಿರೋಧಿ ಹೋರಾಟ ಸಮಿತಿಯಿಂದ ಬೃಹತ್ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಚಿಂತಕ ಶಿವಸುಂದರ್ ಅವರು ಈ ಸಂವಾದದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಎಡ ಪಕ್ಷಗಳು, ಪ್ರಗತಿಪರ ಸಂಘಟನೆಗಳ ಮುಖಂಡರು, ವಿದ್ಯಾರ್ಥಿಗಳು ಹಾಗೂ ಯುವಜನರು ಪಾಲ್ಗೊಳ್ಳಲಿದ್ದಾರೆ.

ಸಭೆಯಲ್ಲಿ ಮಾತನಾಡಿದ ಉಪನ್ಯಾಸಕ ಚಂದ್ರಶೇಖರ ಗೊರಬಾಳ, ಎಸ್‍ಐಆರ್ ನೆಪದಲ್ಲಿ ಅಗತ್ಯ ದಾಖಲೆಗಳಿಲ್ಲದ ಕಾರಣಕ್ಕೆ ದಲಿತ, ಹಿಂದುಳಿದ, ಆದಿವಾಸಿ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಜನರನ್ನು ಮತದಾರರ ಪಟ್ಟಿಯಿಂದ ವ್ಯವಸ್ಥಿತವಾಗಿ ಕೈಬಿಡಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಈಗಾಗಲೇ 2.89 ಕೋಟಿ ಜನರನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂಬ ವರದಿಯಿದೆ. ಇದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಿಪಿಐ(ಎಂಎಲ್) ರೆಡ್‍ಸ್ಟಾರ್‍ನ ಎಂ. ಗಂಗಾಧರ ಮಾತನಾಡಿ, ಚುನಾವಣಾ ಆಯೋಗವು ಸ್ವಾಯತ್ತತೆ ಕಳೆದುಕೊಂಡು ಸರ್ಕಾರದ ಕೈಗೊಂಬೆಯಾಗಿದೆ. ಬಿಹಾರ, ಪಶ್ಚಿಮ ಬಂಗಾಳ ಹಾಗೂ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಂವಿಧಾನ ವಿರೋಧಿ ಎಸ್‍ಐಆರ್ ನಡೆಸುವ ಮೂಲಕ ಶೋಷಿತ ವರ್ಗದ ಮತದಾನದ ಹಕ್ಕಿಗೆ ಸಂಚಕಾರ ತರಲಾಗುತ್ತಿದೆ ಎಂದು ಟೀಕಿಸಿದರು.

"ನಮ್ಮ ಮತ ನಮ್ಮ ಹಕ್ಕು, ಸಂವಿಧಾನ ನಮ್ಮ ಶಕ್ತಿ" ಎನ್ನುವ ಘೋಷವಾಕ್ಯದಡಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಿಪಿಐ ಮುಖಂಡ ಭಾಷುಮಿಯಾ ತಿಳಿಸಿದರು. ಜಮಾಅತೆ ಇಸ್ಲಾಮಿ ಹಿಂದ್ ತಾಲ್ಲೂಕು ಅಧ್ಯಕ್ಷ ಹುಸೇನ್‍ಸಾಬ್ ಮಾತನಾಡಿ, ನಾಗರಿಕರಿಗೆ ಮತದಾನದ ಹಕ್ಕು ನಿರಾಕರಿಸುವುದು ಪ್ಯಾಶಿಸ್ಟ್ ಧೋರಣೆಯಾಗಿದೆ ಎಂದು ಖಂಡಿಸಿದರು.

ಸಭೆಯಲ್ಲಿ ರೈತ ಮುಖಂಡರಾದ ಅಮೀನ್‍ಪಾಷಾ ದಿದ್ದಿಗಿ, ಬಸವರಾಜ ಗೋಡಿಹಾಳ, ವಕೀಲ ಬಾಬರ್‍ಪಾಷಾ, ಡಿ.ಎಚ್. ಕಂಬಳಿ, ಬಸವಂತರಾಯಗೌಡ ಕಲ್ಲೂರು, ದೇವೇಂದ್ರಗೌಡ, ಕರೇಗೌಡ ಕುರಕುಂದಿ, ಜಾಫರ್ ಜಾಗೀರದಾರ್, ಮಂಜುನಾಥ ಗಾಂಧಿನಗರ, ಕೃಷ್ಣಮೂರ್ತಿ ಧುಮತಿ, ಅಶೋಕ ನಂಜಲದಿನ್ನಿ, ಎಂ.ಗೋಪಾಲಕೃಷ್ಣ, ಜಿಲಾನಿಪಾಷಾ, ಎಚ್.ಎಫ್.ಮಸ್ಕಿ, ಬಿ.ಎನ್.ಯರದಿಹಾಳ, ಅಮೀನ್‍ಸಾಬ್ ನದಾಫ್, ಬಸವರಾಜ ಬಾದರ್ಲಿ, ಮೌನೇಶ ಜಾಲವಾಡಗಿ, ಜಗದೀಶ್ ಸುಕಾಲಪೇಟೆ, ಚಾಂದ್‍ಪಾಷಾ ಜಾಗೀರದಾರ, ದಾವಲ್‍ಸಾಬ್ ದೊಡ್ಮನಿ, ಅಬುಲೈಸ್ ನಾಯ್ಕ, ಬಸವರಾಜ ಹಸಮಕಲ್ ಸೇರಿದಂತೆ ವಿವಿಧ ಸಂಘಟನೆಗಳ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News