×
Ad

Maski | ಬಳಗಾನೂರು ಪಟ್ಟಣ ಪಂಚಾಯತ್‌, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತ ದಾಳಿ

Update: 2026-01-08 18:03 IST

ಮಸ್ಕಿ : ಬಳಗಾನೂರು ಪಟ್ಟಣ ಪಂಚಾಯತ್‌ ಹಾಗೂ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತ ಅಧಿಕಾರಿಗಳು ದಿಢೀರನೆ ಭೇಟಿ ನೀಡಿ, ಬೆಳಗ್ಗೆ 9.30ರಿಂದ ರಾತ್ರಿ 9.00 ಗಂಟೆಯವರೆಗೆ ಮಹತ್ವದ ದಾಖಲಾತಿಗಳನ್ನು ಪರಿಶೀಲಿಸಿದರು.

ಲೋಕಾಯುಕ್ತ ಅಧಿಕಾರಿಗಳಾದ ಕರುಣೇಶ್ ಗೌಡ ಹಾಗೂ ಶ್ರೀಕಾಂತ್ ಉಪ ನಿರೀಕ್ಷಕರ ನೇತೃತ್ವದ ತಂಡ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವಿಭಾಗವಾರು ಪರಿಶೀಲನೆ ನಡೆಸಿತು. ಸಾರ್ವಜನಿಕ ಆರೋಗ್ಯ ಸೌಲಭ್ಯಗಳು, ಸಿಬ್ಬಂದಿ ಹಾಗೂ ಅಧಿಕಾರಿಗಳ ಮಾಹಿತಿ, ಔಷಧೋಪಚಾರದ ಲಭ್ಯತೆ ಕುರಿತು ವಿವರಗಳನ್ನು ಪಡೆದುಕೊಂಡರು.

ನಂತರ ಸಾರ್ವಜನಿಕರಿಂದ ಬಂದಿದ್ದ ಹಲವು ದೂರುಗಳ ಆಧಾರದ ಮೇಲೆ ಬಳಗಾನೂರು ಪಟ್ಟಣ ಪಂಚಾಯತ್‌ ಕಚೇರಿಗೆ ದಾಳಿ ನಡೆಸಿ, ಆಸ್ತಿ ನೋಂದಣಿ, ತೆರಿಗೆ ಸಂಗ್ರಹ, ತಾಂತ್ರಿಕ ವಿಭಾಗ ಸೇರಿದಂತೆ ಪ್ರತಿ ಸಿಬ್ಬಂದಿಯಿಂದ ನಿತ್ಯ ಕಾರ್ಯಚಟುವಟಿಕೆಗಳ ಮಾಹಿತಿ ಹಾಗೂ ಬಾಕಿ ಉಳಿದ ಕಡತಗಳ ವಿವರಗಳನ್ನು ಪರಿಶೀಲಿಸಿದರು.

ಇ-ಖಾತಾ, ಮ್ಯುಟೇಷನ್, ಕುಡಿಯುವ ನೀರಿನ ಸಂಪರ್ಕ ಸೇರಿದಂತೆ ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳ ವಿಲೇವಾರಿ ಕುರಿತು ಮಾಹಿತಿ ಪಡೆದು, ಅರ್ಜಿಗಳಿಗೆ ಸಂಖ್ಯೆ ನೀಡದೇ ಇದ್ದರೆ ವಿಲೇವಾರಿ ಸ್ಥಿತಿ ಸಾರ್ವಜನಿಕರಿಗೆ ಹೇಗೆ ತಿಳಿಯುತ್ತದೆ? ಎಂದು ಪಟ್ಟಣ ಪಂಚಾಯತ್‌ ಸಿಬ್ಬಂದಿ ತಿರುಪತ್ತಿ (ಎಸ್‌ಡಿಎ) ಅವರಿಗೆ ಲೋಕಾಯುಕ್ತ ಅಧಿಕಾರಿಗಳು ಪ್ರಶ್ನಿಸಿದರು.

ಕುಡಿಯುವ ನೀರು ಸರಬರಾಜು, ಬೀದಿ ದೀಪಗಳ ನಿರ್ವಹಣೆ ಹಾಗೂ ಕಂದಾಯ ಸಂಗ್ರಹ ಕುರಿತಂತೆ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಕೆಲ ಸಿಬ್ಬಂದಿ ಅಸಮರ್ಪಕ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಹಾಗೂ ಲೋಪಗಳು ಕಂಡುಬಂದಲ್ಲಿ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಲೋಕಾಯುಕ್ತ ಅಧಿಕಾರಿಗಳು ಎಚ್ಚರಿಕೆ ನೀಡಿದರು. ಪರಿಶೀಲನೆ ವೇಳೆ ಕೆಲ ಸಿಬ್ಬಂದಿಗಳು ಗೊಂದಲಕ್ಕೀಡಾಗಿ ಉತ್ತರ ನೀಡಲು ತಡವರಿಸಿದರು.

ಈ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳಾದ ಅಜಿತ್, ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News