ರಾಯಚೂರು ಉತ್ಸವ-2026 : ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಲಾತಂಡಗಳಿಂದ ಅರ್ಜಿ ಆಹ್ವಾನ
Update: 2026-01-09 23:37 IST
ರಾಯಚೂರು: ಜಿಲ್ಲೆಯ ಹೆಮ್ಮೆಯ 'ಎಡೆದೊರೆ ನಾಡು ರಾಯಚೂರು ಉತ್ಸವ-2026' ಜ.29, 30 ಮತ್ತು 31ರಂದು ಅತ್ಯಂತ ವೈಭವಯುತವಾಗಿ ಜರುಗಲಿದೆ. ಈ ಉತ್ಸವವನ್ನು ವಿಶಿಷ್ಟ ಹಾಗೂ ಆಕರ್ಷಣೀಯವಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲೆಯ ಅತ್ಯುತ್ತಮ ಕಲಾತಂಡಗಳನ್ನು ಆಯ್ಕೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.
ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ರಾಯಚೂರು ಜಿಲ್ಲೆಯ ವೇದಿಕೆ ಕಲಾತಂಡಗಳು ಹಾಗೂ ಜಾನಪದ ಕಲಾತಂಡಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಕಲಾವಿದರು ಮತ್ತು ತಂಡಗಳು ತಮ್ಮ ಸ್ವವಿವರದ ಮಾಹಿತಿಯನ್ನು ಒಳಗೊಂಡ ಅರ್ಜಿಯನ್ನು ಜನವರಿ 12ರ ಒಳಗಾಗಿ ಇ-ಕಚೇರಿಗೆ ಸಲ್ಲಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.