×
Ad

ರಾಯಚೂರು | 9 ರಿಂದ 14 ವರ್ಷದ ಹೆಣ್ಣುಮಕ್ಕಳಿಗೆ ಉಚಿತ ಹೆಚ್‌ಪಿವಿ ಲಸಿಕೆಗೆ ಜಾಗೃತಿ ನೀಡಿ : ಡಾ.ಸುರೇಂದ್ರ ಬಾಬು

ಹೆಚ್‌ಪಿವಿ ಲಸಿಕೆ ಕುರಿತ ತರಬೇತಿ ಕಾರ್ಯಾಗಾರ

Update: 2026-01-10 11:33 IST

ರಾಯಚೂರು: ಹೆಣ್ಣುಮಕ್ಕಳ ಜೀವನದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ಗರ್ಭಕಂಠದ ಕ್ಯಾನ್ಸರ್ (Cervical Cancer) ತಡೆಗೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಜಿಲ್ಲೆಯ 9 ರಿಂದ 14 ವರ್ಷದೊಳಗಿನ ಶಾಲಾ ಹೆಣ್ಣುಮಕ್ಕಳಿಗೆ ಉಚಿತವಾಗಿ ಹ್ಯೂಮನ್ ಪ್ಯಾಪಿಲೋಮ ವೈರಸ್ ಲಸಿಕೆಯನ್ನು ಹಾಕುವ ಕುರಿತು ಇಂದಿನಿಂದಲೇ ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುರೇಂದ್ರ ಬಾಬು ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಇಲಾಖೆಯ ಕೃಷ್ಣ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಹೆಚ್‌ಪಿವಿ ಲಸಿಕೆ ಕುರಿತ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವೈಯಕ್ತಿಕ ಶುಚಿತ್ವದ ಕೊರತೆ ಹಾಗೂ ಲೈಂಗಿಕ ಸಂಪರ್ಕದಿಂದ ಹರಡುವ ಹೆಚ್‌ಪಿವಿ ಸೋಂಕು ನಿರಂತರವಾಗಿದ್ದರೆ, ಅದು ಕ್ರಮೇಣ ಗರ್ಭಕಂಠದ ಜೀವಕೋಶಗಳಲ್ಲಿ ಬದಲಾವಣೆ ತಂದು ಕ್ಯಾನ್ಸರ್ ಆಗಿ ಪರಿವರ್ತನೆಯಾಗುತ್ತದೆ. ಇದನ್ನು ಆರಂಭಿಕ ಹಂತದಲ್ಲೇ ತಡೆಯಲು ಲಸಿಕೆ ಅತ್ಯಗತ್ಯ ಎಂದು ಡಾ.ಸುರೇಂದ್ರ ಬಾಬು ವಿವರಿಸಿದರು.

ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ನಂದಿತಾ ಎಂ.ಎನ್. ಮಾತನಾಡಿ, ಧೂಮಪಾನ, ದುರ್ಬಲ ರೋಗನಿರೋಧಕ ಶಕ್ತಿ ಹಾಗೂ ಜನನಾಂಗದ ಸೋಂಕುಗಳು ಗರ್ಭಕಂಠದ ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಾಗಬಹುದು. ಸರ್ಕಾರದ ಮಾರ್ಗಸೂಚಿಯಂತೆ 9 ರಿಂದ 14 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಚುಚ್ಚುಮದ್ದಿನ ರೂಪದಲ್ಲಿ ಉಚಿತವಾಗಿ ಈ ಲಸಿಕೆ ನೀಡಲಾಗುವುದು. ಈ ಬಗ್ಗೆ ಶಾಲಾ ಮಟ್ಟದಲ್ಲಿ ಶಿಕ್ಷಕರಿಗೂ ಹಾಗೂ ಪಾಲಕರಿಗೂ ಸಮರ್ಪಕ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಗಣೇಶ ಕೆ., ಜಿಲ್ಲಾ ಎನ್‌ಫೋರ್ಸ್ಮೆಂಟ್ ಅಧಿಕಾರಿ ಡಾ. ಶಿವಕುಮಾರ ನಾರಾ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಪ್ರಜ್ವಲ್ ಕುಮಾರ, ಮನೋವೈದ್ಯ ಡಾ. ಮನೋಹರ್ ಪತ್ತಾರ, ಜಿಲ್ಲಾ ಆರೋಗ್ಯ ಶಿಕ್ಷಣಧಿಕಾರಿ ಈಶ್ವರ ಹೆಚ್.ದಾಸಪ್ಪವರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಆಪ್ತ ಸಹಾಯಕರಾದ ಲೇಪಾಕ್ಷಯ್ಯ, ಐಎಫ್‌ವಿ ಕೊಪ್ರೇಶ್, ರಾಘವೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲ ವೈದ್ಯಾಧಿಕಾರಿಗಳು, ತಾಲೂಕಾ ಮೇಲ್ವಿಚಾರಕರು, ಬಿಪಿಎಮ್, ಆಶಾ ಮೇಲ್ವಿಚಾರಕರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News