ರಾಯಚೂರು | ನೇರಳೆ ಮೇಳ, ಉದ್ಯೋಗ ಮೇಳ ಕಾರ್ಯಕ್ರಮಕ್ಕೆ ಚಾಲನೆ
ವಿಕಲಚೇತನರು ಸರಕಾರದ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು : ಸಂಸದ ಜಿ.ಕುಮಾರ ನಾಯಕ
ರಾಯಚೂರು : ವಿಕಲಚೇತನರ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳ ಬಗ್ಗೆ ಫಲಾನುಭವಿಗಳಿಗೆ ಸರಿಯಾದ ಮಾಹಿತಿ ತಲುಪಬೇಕು. ವಿಕಲಚೇತನರು ಸರ್ಕಾರದ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಂಸದ ಜಿ.ಕುಮಾರ ನಾಯಕ ಹೇಳಿದರು.
ಅವರು ಗುರುವಾರ ನಗರದ ರಿಮ್ಸ್ ಕಾಲೇಜು ಸಭಾಂಗಣದಲ್ಲಿ ನಡೆದ ನೇರಳೆ ಮೇಳ, ಉದ್ಯೋಗ ಮೇಳ ಹಾಗೂ ವಿಕಲಚೇತನರ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
“ವೃತ್ತಿಪರ ತರಬೇತಿ, ಉದ್ಯೋಗ, ಶೈಕ್ಷಣಿಕ ಸೌಲಭ್ಯ, ಅವಶ್ಯಕ ಸಾಧನ-ಸಲಕರಣೆ ಪೂರೈಕೆ ಮೂಲಕ ವಿಕಲಚೇತನರಿಗೆ ಘನತೆ, ಗೌರವದ ಜೀವನ ನಡೆಸಲು ಸರ್ಕಾರ ಪೂರಕ ವಾತಾವರಣ ಕಲ್ಪಿಸಿದೆ. ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಮಾತ್ರ ನೇರಳೆ ಮೇಳ ನಡೆಯುತ್ತಿರುವುದು ಹೆಮ್ಮೆಯ ಸಂಗತಿ” ಎಂದು ಅವರು ಹೇಳಿದರು.
ರಿಮ್ಸ್ ಮನೋವೈದ್ಯ ಡಾ. ರಮೇಶ್ ಬಾಬು ಮಾತನಾಡಿ, “ನೊಂದವರ ಸೇವೆಯಲ್ಲಿಯೇ ದೇವರನ್ನು ಕಾಣಬೇಕು” ಎಂದು ಅಭಿಪ್ರಾಯಪಟ್ಟರು.
ಸಾಧನ ಸಲಕರಣೆಗಳ ಪ್ರದರ್ಶನ :
ರಾಯಚೂರು ವೈದ್ಯಕೀಯ ಕಾಲೇಜಿನ ಒಂದನೇ ಮಹಡಿಯಲ್ಲಿ ಸುಮಾರು 15 ಸಂಸ್ಥೆಗಳು ವಿಕಲಚೇತನರು ಮತ್ತು ಹಿರಿಯ ನಾಗರೀಕರಿಗೆ ಬೇಕಾಗುವ ಸಾಧನ-ಸಲಕರಣೆಗಳ ಪ್ರದರ್ಶನ ಹಮ್ಮಿಕೊಂಡಿದ್ದವು. 523 ಜನರು ಮೇಳದಲ್ಲಿ ನೋಂದಣಿಯಾಗಿದ್ದರು.
ಕಾರ್ಯಕ್ರಮದಲ್ಲಿ ಪವನ್ ಕಿಶೋರ್ ಪಾಟೀಲ್, ಜಯಂತರಾವ್ ಪತಂಗೆ, ಡಾ. ರಮೇಶ್ ಬಿ.ಹೆಚ್., ಅಧಿಕಾರಿ ಶ್ರೀದೇವಿ, ಡಾ. ರಾಹುಲ್ ಕೀರ್ತಿ, ಮಲ್ಲಿಕಾರ್ಜುನ್, ತಾಮರ ಸೆಲ್ವನ್, ಡಾ. ಕೌಶಿಕ್ ರೆಡ್ಡಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರೀಕರು ಉಪಸ್ಥಿತರಿದ್ದರು.