×
Ad

ರಾಯಚೂರು | ಶಿಸ್ತು-ಬದ್ಧತೆಯಿಂದ ಗುಣಮಟ್ಟದ ಸಂಶೋಧನೆ : ಕುಲಪತಿ ಡಾ.ಎಂ.ಹನುಮಂತಪ್ಪ

Update: 2025-09-23 18:55 IST

ರಾಯಚೂರು : ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಯ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಶಿಸ್ತು ಹಾಗೂ ಬದ್ಧತೆಯನ್ನು ರೂಢಿಸಿಕೊಂಡಲ್ಲಿ ಗುಣಮಟ್ಟದ ಸಂಶೋಧನೆಗಳು ನಡೆದು, ಅದರ ಫಲಿತಾಂಶಗಳಿಂದ ರೈತರ ಹಾಗೂ ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಹನುಮಂತಪ್ಪ ಹೇಳಿದರು.

ನಗರದ ಕೃಷಿ ವಿವಿಯ ಪ್ರೇಕ್ಷಾಗೃಹದಲ್ಲಿ ಮಂಗಳವಾರ ಸ್ನಾತಕೋತ್ತರ ನಿರ್ದೇಶನಾಲಯದ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ನಾತಕೋತ್ತರ ಸಂಶೋಧನಾ ಸಮ್ಮೇಳನ ಹಾಗೂ ಖ್ಯಾತ ಕೃಷಿ ವಿಜ್ಞಾನಿ ದಿವಂಗತ ಡಾ.ಎಸ್.ಎ.ಪಾಟೀಲ್ ಸ್ಮರಣಾರ್ಥ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಸಂಶೋಧನೆಗಳಿಂದ ಗಳಿಸಿದ ಜ್ಞಾನ ಹಾಗೂ ಕೌಶಲ್ಯಗಳನ್ನು ಹಂಚಿಕೊಳ್ಳುವ ಮೂಲಕ ಹೊಸ ಅರಿವನ್ನು ಸಂಪೂರ್ಣವಾಗಿ ಪಡೆಯಬೇಕು ಎಂದು ಅವರು ಸಲಹೆ ನೀಡಿದರು. ಸಂಶೋಧನೆಗೆ ವಿಶ್ವವಿದ್ಯಾಲಯವು ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದ್ದು, ವಿದ್ಯಾರ್ಥಿಗಳು ಅವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕೆಂದರು.

ಹವಾಮಾನ ವೈಪರಿತ್ಯ, ಸೆನ್ಸಾರ್ ಆಧಾರಿತ ನೀರಾವರಿ, ಕೃತಕ ಬುದ್ಧಿಮತ್ತೆ, ಭೌಗೋಳಿಕ ಸೂಚನೆ ಆಧಾರಿತ ತಂತ್ರಜ್ಞಾನ, ಇ-ಸ್ಯಾಪ್ ಮುಂತಾದ ನವೀನ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುವಂತೆ ಅವರು ವಿದ್ಯಾರ್ಥಿಗಳಿಗೆ ಪ್ರೇರೇಪಿಸಿದರು. ಪ್ರಬಂಧ ಮಂಡನೆ ಹಾಗೂ ಭಿತ್ತಿಚಿತ್ರಗಳ ಫಲಿತಾಂಶಗಳು ಏನೇ ಬಂದರೂ ಅವುಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಮುಂದಿನ ಸಂಶೋಧನೆಗೆ ಬಲವರ್ಧನೆ ಮಾಡಿಕೊಳ್ಳಬೇಕೆಂದರು.

ನಿವೃತ್ತ ಶಿಕ್ಷಣ ನಿರ್ದೇಶಕ ಡಾ.ಎಂ.ಜಿ.ಪಾಟೀಲ್ ಅವರು, ಗುಣಮಟ್ಟದ ಸಂಶೋಧನಾ ಫಲಿತಾಂಶಗಳನ್ನು ರೈತರ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳುವಂತೆ ಮಾಡುವುದೇ ವಿದ್ಯಾರ್ಥಿಗಳ ಮುಖ್ಯ ಗುರಿಯಾಗಿರಬೇಕು ಎಂದು ಹೇಳಿದರು. ರೈತರ ಜೊತೆ ನಿಕಟ ಸಂಪರ್ಕದಲ್ಲಿದ್ದು, ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಆಡಳಿತ ಮಂಡಳಿಯ ಗೌರವಾನ್ವಿತ ಸದಸ್ಯ ಮಲ್ಲಿಕಾರ್ಜುನ ಮಾತನಾಡಿ, ಡಾ. ಎಸ್.ಎ. ಪಾಟೀಲ್ ಅಭಿವೃದ್ಧಿಪಡಿಸಿದ ಹತ್ತಿಯ “ವರಲಕ್ಷ್ಮೀ” ತಳಿ ಇಂದಿಗೂ ರೈತರಿಗೆ ವರದಾನವಾಗಿದ್ದು, ಅವರ ಹೆಸರು ರೈತರ ಮನಸ್ಸಿನಲ್ಲಿ ಸದಾ ಅಜರಾಮರವಾಗಿರುತ್ತದೆ ಎಂದರು. ವಿಜ್ಞಾನಿಗಳು ಸಹ ಇದೇ ಆದರ್ಶದೊಂದಿಗೆ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಡಾ.ನಾರಾಯಣರಾವ್, ಡಾ.ಜಾಗೃತಿ ದೇಶಮಾನ್ಯ, ಡಾ.ಮಲ್ಲಿಕಾರ್ಜುನ, ಅಯ್ಯನಗೌಡರ, ಡೀನ್ (ಸ್ನಾತಕೋತ್ತರ) ಡಾ.ಗುರುರಾಜ ಸುಂಕದ, ಡಾ.ಮಹಾದೇವಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ.ಸುಮಾ ಕಾರ್ಯಕ್ರಮವನ್ನು ನಿರೂಪಿಸಿದರು.

ಸಮಾರಂಭದಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News