ರಾಯಚೂರು | ಟಿಪ್ಪರ್‌ ಲಾರಿ-ಟ್ಯಾಂಕರ್‌ ನಡುವೆ ಭೀಕರ ಅಪಘಾತ

Update: 2026-07-25 20:21 IST

ರಾಯಚೂರು, ಜು. 25: ನಗರದ ಯರಮರಸ್ ಬೈಪಾಸ್‌ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅತಿವೇಗದಲ್ಲಿ ಬಂದ ಟಿಪ್ಪರ್ ಲಾರಿ ಟ್ಯಾಂಕರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಟ್ಯಾಂಕರ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದ ತೀವ್ರತೆಗೆ ಟ್ಯಾಂಕರ್ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಚಾಲಕ ವಾಹನದಲ್ಲೇ ಸಿಲುಕಿಕೊಂಡಿದ್ದರು. ಸ್ಥಳೀಯರು ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುವನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಅಪಘಾತದ ಬಳಿಕ ಟಿಪ್ಪರ್ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. 

ಘಟನೆಯಲ್ಲಿ ಭಾಗಿಯಾದ ಟಿಪ್ಪರ್ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಅತಿವೇಗ ಹಾಗೂ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.

ನಗರದ ಸಂಚಾರಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News