ರಾಯಚೂರು | ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿಯಿಂದ ವಿವಿಧ ಆಸ್ಪತ್ರೆಗಳಿಗೆ ದಿಢೀರ್ ಭೇಟಿ
ರಾಯಚೂರು : ರಾಯಚೂರು ಪ್ರವಾಸದಲ್ಲಿದ್ದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಸೆ.17ರಂದು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದ ಬಳಿಕ, ನಗರದ ವಿವಿಧ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿದರು.
ನಗರದ ಎಸ್‌ಎಸ್‌ಆರ್‌ಜಿ ಮಹಿಳಾ ವಿಶ್ವವಿದ್ಯಾಲಯದ ಆವರಣದಿಂದ ಹೊರಟ ಅಧ್ಯಕ್ಷೆ, ಮೊದಲು ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ತೆರಳಿ, ಮಹಿಳಾ ವಾರ್ಡ್‌ಗಳಲ್ಲಿ ರೋಗಿಗಳ ಆರೋಗ್ಯ ವಿಚಾರಿಸಿದರು.
ಆಸ್ಪತ್ರೆಯಲ್ಲಿ ಔಷಧಿ, ಉಪಚಾರ, ಊಟ, ಉಪಹಾರ ಎಲ್ಲವೂ ಸರಿಯಾಗಿ ಸಿಗುತ್ತಿವೆಯಾ?” ಎಂದು ಪ್ರಶ್ನಿಸಿದ ಅವರು, ರೋಗಿಗಳಿಂದ ನೇರವಾಗಿ ಮಾಹಿತಿ ಪಡೆದರು. ರೋಗಿಗಳು, “ಪ್ಯಾಡ್ ಸೌಲಭ್ಯವನ್ನೂ ಒದಗಿಸಬೇಕು” ಎಂದು ಮನವಿ ಮಾಡಿದರು.
ಸಖಿ ಒನ್‌ಸ್ಟಾಪ್ ಸೆಂಟರ್ ಪರಿಶೀಲನೆ :
ಮಧ್ಯಾಹ್ನ 2.30ಕ್ಕೆ ಸಖಿ ಒನ್‌ಸ್ಟಾಪ್ ಸೆಂಟರ್ಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದ ಅವರು, ಹೆಣ್ಣುಮಕ್ಕಳಿಗೆ ಏನಾದರೂ ದೌರ್ಜನ್ಯ ನಡೆದರೆ ನೇರವಾಗಿ ಸಖಿ ಸೆಂಟರ್‌ಗೆ ಬಂದು ಸಹಾಯ ಪಡೆಯಬೇಕು. ಇಲ್ಲಿ ಕಾನೂನು ಸಲಹೆ, ಸಮಾಲೋಚನೆ, ಪೊಲೀಸರ ಹಾಗೂ ವೈದ್ಯಕೀಯ ನೆರವು, ತಾತ್ಕಾಲಿಕ ವಸತಿ ಸೌಲಭ್ಯ ದೊರೆಯುತ್ತದೆ ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ನಂತರ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಔಷಧಿ ವಿಭಾಗದಲ್ಲಿದ್ದ ನರಸಪ್ಪ ಎಂಬುವವರ ಬಳಿ ಹೋಗಿ ಔಷಧಿ ಚೀಟಿಯನ್ನು ಪಡೆದು ಖುದ್ದಾಗಿ ಪರಿಶೀಲಿಸಿದರು. ನಮಗೆ ಸರಿಯಾಗಿ ಔಷಧಿ ಕೊಡುವುದಿಲ್ಲ ಎಂದು ನರಸಪ್ಪ ಅವರು ದೂರು ನೀಡಿದರು.
ಯಾದಗಿರಿಯ ಆಶಮ್ಮ ಸೇರಿದಂತೆ ಹಲವು ರೋಗಿಗಳೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿನ ಮಷಿನ್ ಕೆಟ್ಟು ನಿಂತಿರುವುದು, ಶೌಚಾಲಯಗಳಲ್ಲಿ ಗಲೀಜು, ಸಾರ್ವಜನಿಕ ಸ್ಥಳಗಳಲ್ಲಿ ಕೆಲಸ ಮಾಡದಿರುವುದು ಕಂಡು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗರ್ಭಿಣಿಯರು, ನವಜಾತ ಶಿಶುಗಳು ಈ ಗಲೀಜಿನಿಂದ ಕಾಯಿಲೆ ಹೊತ್ತುಕೊಂಡು ಮನೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ನಿಮಗೆ ರೋಗಿಗಳ ಬಗ್ಗೆ ಕಾಳಜಿ ಇಲ್ಲವೇ?” ಎಂದು ವೈದ್ಯಕೀಯ ಅಧೀಕ್ಷಕರಿಗೆ ತರಾಟೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ವೈದ್ಯಕೀಯ ಉಪ ಅಧೀಕ್ಷಕರಾದ ಡಾ.ಅರವಿಂದ ಸಂಗಾವಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಶಂಕರ, ಪ್ರಸೂತಿ ತಜ್ಞೆ ಡಾ. ರಾಧಾ ಸಂಗಾವಿ, ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ.ನಸೀಮಾಬಾನು ಹಾಗೂ ಇತರರು ಉಪಸ್ಥಿತರಿದ್ದರು.