×
Ad

ಚಳಿಗೆ ನಡುಗಿದ ಬಿಸಿಲುನಾಡು: ರಾಯಚೂರಿನಲ್ಲಿ ದಾಖಲೆಯ ಕನಿಷ್ಠ ತಾಪಮಾನ, ಜನಜೀವನ ತತ್ತರ

Update: 2025-12-14 15:12 IST

ರಾಯಚೂರು: ಬಿಸಿಲುನಾಡು ರಾಯಚೂರು ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕನಿಷ್ಠ ತಾಪಮಾನ ದಾಖಲಾಗುತ್ತಿದ್ದು ಚಳಿಗೆ ನಡುಗುತ್ತಿರುವ ಜನರು ಬೆಳಗಿನ ಜಾವ ಹಾಗೂ ಸಂಜೆಯ ನಂತರ ಹೊರಗೆ ಬಾರಲು ಭಯ ಪಡುವಂತಾಗಿದೆ.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಆವರಣದಲ್ಲಿ ಶುಕ್ರವಾರ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಒಂದು ವಾರದಿಂದ ಜಿಲ್ಲೆಯಲ್ಲಿ ಶೀತಗಾಳಿ ಬೀಸುತ್ತಿದೆ. ರಾತ್ರಿ ಕನಿಷ್ಠ ತಾಪಮಾನ 14ರಿಂದ 11ರ ವರೆಗೂ ಕುಸಿಯುತ್ತಿದೆ. ಡಿಸೆಂಬರ್ 10ರಂದು ಸಹ ಕನಿಷ್ಠ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಈಗಲೂ ಸಂಜೆ 5.30ರ ವೇಳೆಗೆ ಚಳಿ ಆವರಿಸತೊಡಗಿದೆ.

ರಾತ್ರಿ ಹಾಗೂ ಬೆಳಗಿನ ಜಾವ ಆವರಿಸಿಕೊಳ್ಳುತ್ತಿರುವ ಚಳಿಗೆ ಜನ, ಜಾನುವಾರು ಹಾಗೂ ಬೆಳೆಗಳಿಗೂ ಸಂಕಷ್ಟ ತಂದೊಡ್ಡಿದೆ. ಜಾನುವಾರುಗಳು ಮೇಯಲು ಹಾಗೂ ರೈತರು ಹೊಲಗಳಿಗೆ ಹೋಗುವುದು ಕಷ್ಟವಾಗುತ್ತಿದೆ. ಅಲ್ಲದೇ ಕೂಲಿ ಕಾರ್ಮಿಕರು, ಹಾಲು,ಪೇಪರ್ ಹಾಕುವ ಹುಡುಗರು, ಬೀದಿ ವ್ಯಾಪಾ

ರಿಗಳು ತತ್ತರಿಸಿದ್ದಾರೆ. ಚಳಿಗೆ ಹೆದರಿ ಅನೇಕರು ಬೆಳಗಿನ ಜಾವ ವಾಯು ವಿಹಾರಕ್ಕೆ ಹೋಗುವುದನ್ನು ಕೈಬಿಟ್ಟಿದ್ದಾರೆ. ಚಳಿಗೆ ಅನೇಕರು ನೆಗಡಿ,ಕೆಮ್ಮಿನಿಂದ ಬಳಲುತ್ತಿದ್ದಾರೆ. ಚಿಕ್ಕ ಮಕ್ಕಳು,ವಯೋವೃದ್ಧರು ಹೆಚ್ಚು ಹೊರಗೆ ತಿರುಗಾಡದಂತೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ಚಳಿಗೆ ತತ್ತರಿಸಿದ ರಾಯಚೂರಿನ ಜನ ಕಸ,ಚಿಕ್ಕ ಗಾತ್ರದ ಕಟ್ಟಿಗೆಗಳಿಗೆ ಬೆಂಕಿ ಹಚ್ಚಿ ಮೈ ಬೆಚ್ಚಗೆ ಮಾಡಿಕೊಳ್ಳುವ ದೃಶ್ಯಗಳು ಅಲ್ಲಲ್ಲಿಕಾಣಿಸುತ್ತಿದೆ.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯ ಗ್ರಾಮೀಣ ಹವಾಮಾನ ಸೇವಾ ಘಟಕದ ಅಧಿಕಾರಿಗಳ ಪ್ರಕಾರ ಮುಂದಿನ ಐದು ದಿನಗಳವರೆಗೆ ರಾತ್ರಿಯ ತಾವಾನದಲ್ಲಿ ಸಾಮಾನ್ಯ ತಾಪಮಾನಕ್ಕಿಂತ 3-4 ಡಿಗ್ರಿ ಸೆಲ್ಸಿಯಸ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಆದ್ದರಿಂದ ಶೀತದಿಂದ ಬೆಳೆಗಳನ್ನು ರಕ್ಷಿಸಲು ಸಂಜೆಯ ಸಮಯದಲ್ಲಿ ಲಘುವಾಗಿ ಆಗಾಗ ನೀರು ಹಾಯಿಸಬೇಕು.

ಎಳೆಯ ಹಣ್ಣಿನ ಗಿಡಗಳನ್ನು ಒಣ ಹುಲ್ಲಿನ ಅಥವಾ ಪಾಲಿಥಿನ್ ಹಾಳೆಗಳು ಅಥವಾ ಗೋಣಿ ಚೀಲಗಳಿಂದ ರಕ್ಷಿಸಬೆಕು. ಹೂವು ಮತ್ತು ಕಾಯಿ ಉದುರುವುದನ್ನು ತಡೆಯಲು 0.25 ಮಿ.ಲೀ ನ್ಯಾಪ್ತಲಿನ್ ಎಸಿಟಿಕ್ ಎಸಿಡ್ (ಪ್ಲಾನೊಫಿಕ್ಸ್) ಮತ್ತು ಶೇಕಡ 1% ರಷ್ಟು 19:19:19 (10 ಗ್ರಾಂ. ಪ್ರತಿ ಲೀಟರ್ ನೀರಿಗೆ) ಬೆರಸಿ ಸಿಂಪಡಿಸಬೆಕು ಎಂದು ಸಲಹೆ ನೀಡಿದ್ದಾರೆ.

ರಾತ್ರಿ ತಾಪಮಾನ ಇಳಿಕೆಯಾಗುತ್ತಿರುವ ಕಾರಣ ಜಾನುವಾರುಗಳನ್ನು ಬೆಚ್ಚಗಿನ ಕೊಟ್ಟಿಗೆಯಲ್ಲಿ ಕಟ್ಟಬೇಕು. ದನಗಳಿಗೆ ಕಾಲು, ಬಾಯಿ ರೋಗ ಬರುವ ಸಾಧ್ಯತೆ ಇರುವುದರಿಂದ ಚುಚ್ಚುಮದ್ದು ಹಾಕಿಸಬೇಕು. ಒಣಮೇವನ್ನು ಬಿಸಿಲಲ್ಲಿ ಚೆನ್ನಾಗಿ ಒಣಗಿಸಿ ಚೀಲದಲ್ಲಿ ತುಂಬಿಡಬೇಕು. ಬೆಳಗಿನ ವೇಳೆಯಲ್ಲಿ ದನಗಳನ್ನು ಮೇಯಲು ಬಿಡಬಾರದು ಎಂದು ಪಶು ವೈದ್ಯರು ಸಲಹೆ ನೀಡಿದ್ದಾರೆ.

ಬೆಳಗಿನ ಸಮಯದಲ್ಲಿ ಮಂಜು ಬೀಳುವುದರಿಂದ ಬೆಳೆಯಲ್ಲಿ ರೋಗಗಳ ಬಾಧೆ ಹೆಚ್ಚಾಗಿ ಕಂಡು ಬರುವ ಸಾಧ್ಯತೆ ಇದೆ. ರೈತರು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳ ಬೇಕು. ಶೀತ ವಾತಾವರಣದಲ್ಲಿ ಕಳಪೆ ಬೇರಿನ ಚಟುವಟಿಕೆಯಿಂದಾಗಿ ಸಸ್ಯವು ಪೋಷ ಕಾಂಶಗಳನ್ನು ಹೀರಿಕೊಳ್ಳುವುದಿಲ್ಲ. ಆದ್ದರಿಂದ ಪೋಷಕಾಂಶಗಳನ್ನು ಸಿಂಪಡಣೆಯ ಮೂಲಕ ಕೊಡಬೇಕು.

- ತಿಮ್ಮಣ್ಣ ನಾಯಕ, ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ.

ಚಳಿಗೆ ಹೊರಗೆ ಬಾರಲು ಆಗುತ್ತಿಲ್ಲ, ಬೆಳಗ್ಗೆ 6 ಗಂಟೆಗೆ ಏಳುತ್ತಿದ್ದೆ. ಈಗ 8 ಗಂಟೆಗೆ ಏಳುವಂತಾಗಿದೆ, ಮಧ್ಯಾಹ್ನ ಬಿಸಿಲು ಇದ್ದರೂ ಗಾಳಿ ಬೀಸುತ್ತಿದ್ದು ಶೀತವಾಗುತ್ತಿದೆ.

-ಮಲ್ಲಪ್ಪ, ರಾಯಚೂರು ನಿವಾಸಿ

Tags:    

Writer - ಬಾವಸಲಿ,ರಾಯಚೂರು

contributor

Editor - ಬಾವಸಲಿ,ರಾಯಚೂರು

contributor

Byline - ವಾರ್ತಾಭಾರತಿ

contributor

Similar News