ಸಿಂಧನೂರು | 125 ಭತ್ತ ಚೀಲಗಳ ಕಳವು ಪ್ರಕರಣ | ಆರೋಪಿಗಳ ಬಂಧನ
ಸಿಂಧನೂರು : ನಗರದ ಎಪಿಎಂಸಿ ಶೆಡ್‍ನಲ್ಲಿ ನಿಲ್ಲಿಸಿದ್ದ ಭತ್ತದ ಚೀಲಗಳನ್ನು ತುಂಬಿದ್ದ ಲಾರಿಯನ್ನು ಕದ್ದೊಯ್ದು ಮೂರನೇ ಮೈಲ್ ಕ್ಯಾಂಪ್ ಹತ್ತಿರ ಲಾರಿ ನಿಲ್ಲಿಸಿ 125 ಭತ್ತ ಚೀಲಗಳನ್ನು ಕಳ್ಳತನ ಮಾಡಿದ್ದ ಕಳ್ಳರನ್ನು ಬಂಧಿಸುವಲ್ಲಿ ನಗರ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳಾದ ಹುಸೇನ್ ಭಾಷಾ ಮಹಮ್ಮದ್ ರಫಿ, ಪರಶುರಾಮ ಮೀರ ಪಟೇಲ್, ರವಿಕುಮಾರ್ ನನ್ನು ಬಂಧಿಸಲಾಗಿದೆ. ಫೆ.4 ರಂದು ಮಸ್ಕಿಯಿಂದ 349 ಭತ್ತದ ಚೀಲಗಳನ್ನು ತುಂಬಿದ ಲಾರಿಯನ್ನು ಚಾಲಕ ಸೈಯದ್ ಹುಸೇನ್ ನಗರದ ಎಪಿಎಂಸಿಯ ಶೆಡ್‍ನಲ್ಲಿ ನಿಲ್ಲಿಸಿದ್ದರು. ಮರುದಿನ ದಿನ ನೋಡಿದಾಗ ಲಾರಿ ಮಾಯವಾಗಿತ್ತು. ನಂತರ ಮೂರು ಮೈಲ್ ಕ್ಯಾಂಪ್ ಹತ್ತಿರ ಲಾರಿ ಪ್ರತ್ಯಕ್ಷವಾಗಿತ್ತು. ಲಾರಿಯಲ್ಲಿದ್ದ ಭತ್ತದ ಚೀಲಗಳ ಪೈಕಿ 125 ಚೀಲಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ಗಂಭೀರವಾಗಿ ತೆಗೆದುಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ನಗರ ಪೊಲೀಸ್ ಠಾಣೆಯ ಪಿಐ ದುರುಗಪ್ಪ ನೇತೃತ್ವದಲ್ಲಿ ಎಎಸ್‍ಐ ಶಿವರಾಜ, ಶರಣಪ್ಪ ರಡ್ಡಿ, ಆದಯ್ಯ, ಖಲೀಲ್, ಸಿದ್ದಪ್ಪ, ಶರಣಬಸವ ಮತ್ತು ಅಜಿಮ್ ಪಾಷಾ ಒಳಗೊಂಡ ವಿಶೇಷ ತಂಡ ರಚನೆ ಮಾಡಿದ್ದರು. ಭತ್ತದ ಚೀಲಗಳನ್ನು ಕದ್ದ ಕಳ್ಳರ ಪತ್ತೆಗೆ ಜಾಲ ಬೀಸಲಾಗಿತ್ತು. ಫೆ.22 ರಂದು ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರೆ.
ಬಂಧಿತರಿಂದ ಸಿಂಧನೂರು ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾದ 125 ಚೀಲ ಭತ್ತ ಹಾಗೂ ಸಿರಗುಪ್ಪಾ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ 32 ಚೀಲ ಭತ್ತ ಒಟ್ಟು 2.98 ಲಕ್ಷ ರೂ. ಮೌಲ್ಯದ ಹಾಗೂ ಕಳ್ಳತನಕ್ಕೆ ಬಳಸಿದ 10 ಲಕ್ಷ ರೂ.ಗಳ ಮೌಲ್ಯದ ಎರಡು ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಸಿಂಧನೂರು ಪೊಲೀಸರ ಕಾರ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.