×
Ad

14 ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ | ಪೊಲೀಸರ ನಿರ್ಲಕ್ಷ್ಯ ಆರೋಪ : ಕುಟುಂಬಸ್ಥರ ಆಕ್ರೋಶ

Update: 2025-05-15 00:46 IST

ರಾಮನಗರ : ಜಿಲ್ಲೆಯ ಬಿಡದಿಯ ಸಮೀಪದಲ್ಲಿರುವ ಭದ್ರಾಪುರ ಬಳಿಯ ರೈಲ್ವೆ ಹಳಿ ಪಕ್ಕದಲ್ಲಿ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದ ಸ್ಥಿತಿಯಲ್ಲಿ 14 ವರ್ಷದ ಬಾಲಕಿಯ ಮೃತದೇಹವೊಂದು ಅರೆ ನಗ್ನಾವಸ್ಥೆಯಲ್ಲಿ ಪತ್ತೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೇ 11ರಂದು ಘಟನೆ ನಡೆದಿದ್ದು, ಮೇ 13ರಂದು ಮೃತದೇಹ ಪತ್ತೆಯಾಗಿದೆ.

ಬಾಲಕಿಯ ಬೆನ್ನು ಮೂಳೆ ಮುರಿದು ಕುತ್ತಿಗೆ ತಿರುಚಿ ಕೊಲೆಗೈಯ್ಯಲಾಗಿದೆ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಸ್ಥಳೀಯ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ನಾವು ಬೆಳಗ್ಗಿನ ವರೆಗೂ ಹುಡುಕಿದೆವು, ಆದ್ರೆ ನನ್ನ ಮಗಳು ಕಾಣಿಸಲಿಲ್ಲ :

ಈ ನಡುವೆ ಮೃತಪಟ್ಟ ಬಾಲಕಿಯ ತಾಯಿಯ ರೋಧನೆ ಮುಗಿಲು ಮುಟ್ಟಿದೆ, "ರವಿವಾರ ತಾಯಂದಿರ ದಿನದಂದು ನಾವು ಒಟ್ಟಿಗೆ ಕಾರ್ಯಕ್ರಮಕ್ಕೆ ಹೋಗಿದ್ದೆವು, ಆದರೆ ವಾಪಸ್ಸು ಬರುವಾಗ ನನ್ನ ತಮ್ಮನ ಮನೆಯ ಬೀದಿಯ ಬಳಿ ನನ್ನ ಮಗಳು ಆಟವಾಡಲು ಹೋದಳು. ನಾನು ನನ್ನ ಮನೆಗೆ ಹಿಂತಿರುಗಿ ನನ್ನ ಮತ್ತೊಬ್ಬ ಮಗಳು ಅವಳಿಗೂ ಮಾತು ಬರುವುದಿಲ್ಲ. ಅವಳಿಗೆ ಅಡುಗೆ ಮಾಡಿ ಕೊಟ್ಟೆ , ಅಷ್ಟೊತ್ತಿಗೆ ಎಂಟು ಗಂಟೆ ರಾತ್ರಿಯಾಗಿತ್ತು, ಮಗಳೂ ಇನ್ನೂ ಸಹ ಬಂದಿರಲಿಲ್ಲ. ನಂತರ ನನ್ನ ತಮ್ಮನ ಬಳಿ ಹೋಗಿ "ಮಗಳು ಬಂದಿಲ್ಲ ಹುಡುಕೋಣ ನಡಿ ಎಂದೆ", ಬೀದಿ ಬೀದಿ ಹುಡುಕಿದ್ವಿ. ಹನ್ನೆರಡು ಗಂಟೆ ಆದ್ರೂ ಕೂಡ ಮಗಳು ಸಿಕ್ಕಿಲ್ಲ, ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟೆವು. ಆದ್ರೆ ಪೊಲೀಸ್ ನವ್ರು ಹುಡುಗಿ ಫೋಟೋ ತೆಗೆದುಕೊಂಡರು ನಂತರ "ಅಮ್ಮ ಬೆಳಗ್ಗೆ ಬನ್ನಿ , ನಾವು ಕೂಡ ಬರ್ತೀವಿ, ರಾತ್ರಿನೇ ಪೊಲೀಸ್ ನವರನ್ನು ಕರಿಸ್ತೀನಿ" ಅಂದ್ರು. ಆದ್ರೆ ಅವ್ರು ಕಳ್ಸಿಲ್ಲ, ಪೊಲೀಸ್ ನವರು ಬಂದಿಲ್ಲ. ಆದ್ರೆ ನಾವು ಬೆಳಗ್ಗಿನ ವರೆಗೂ ಹುಡುಕಿದೆವು. ಆದ್ರೆ ನನ್ನ ಮಗಳು ಕಾಣಿಸಲಿಲ್ಲ. ಬೆಳಗ್ಗೆ ಏಳು ಗಂಟೆ ಹೊತ್ತಿಗೆ ಯಾರೋ ಬಂದು "ಯಾರೋ ಬಿದ್ದಿದ್ದಾರೆ ಅಮ್ಮ, ಬಂದು ನೋಡಿ ಅದು ನಿಮ್ಮ ಮಗಳಾ" ಎಂದು ಅಂದರು. ಹೋಗಿ ನೋಡಿದರೆ ಅಲ್ಲಿ ನನ್ನ ಮಗಳೇ ಕಂಡಳು, ಸರಿಯಾಗಿ ತಲೆ ಬುರುಡೆಗೆ ಹೊಡೆದು ಕಾಲು ಮುರಿದು, ಜಲ್ಲಿ ಕಲ್ಲಿನ ಮೇಲೆ ಎಳೆದುಕೊಂಡು ಹೋಗಿದ್ದಾರೆ. ಆಕೆ ನೋವು ತಡೆದುಕೊಳ್ಳಲಾರದೆ ಎಲೆಗಳನ್ನು ಕಿತ್ತಿದ್ದಾಳೆ ಎಂದು ಮೃತ ಬಾಲಕಿಯ ತಾಯಿ ದುಃಖಿಸಿದರು.

ಪೊಲೀಸ್‌ನವರು ಎಚ್ಚೆತ್ತುಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ :

"ಪೊಲೀಸ್‌ನವರು ನಮ್ಮ ದೂರು ತೆಗೆದುಕೊಂಡು ನಮ್ಮ ಜೊತೆ ರಾತ್ರಿಯೇ ಬಂದಿದ್ದರೆ, ಈ ರೀತಿಯ ಪರಿಸ್ಥಿತಿ ಆಗುತ್ತಿರಲಿಲ್ಲ, ನಮ್ಮ ಹುಡುಗಿ ನಮಗೆ ಸಿಗುತ್ತಿದ್ದಳು. ನಮ್ಮ ಜೊತೆಗೆ ಪೊಲೀಸ್ ನವರು ಬರಬೇಕಿತ್ತು, ಯಾಕ್ ಬಂದಿಲ್ಲ, ನಾವೇನು ನಿಮಗೆ ಅನ್ಯಾಯ ಮಾಡಿದ್ದೀವಾ, ನಾವು ಅತೀ ಬಡವರು, ನಮ್ಮ ಜೊತೆಗೆ ಪೊಲೀಸ್‌ನವರು ಬಂದಿದ್ದರೆ, ನಮ್ಮ ಹುಡುಗಿಯನ್ನು ಕರೆದುಕೊಂಡು ಬರುತ್ತಿದ್ದೆವು. ಆದ್ರೆ ನೀವು (ಪೊಲೀಸ್) ಬಂದಿಲ್ , ಪೊಲೀಸ್ ನವರು ಯಾಕೆ ನಮ್ಮನ್ನು ಬೆಳಗ್ಗೆ ಬನ್ನಿ ಎಂದು ವಾಪಾಸ್ ಕಳುಹಿಸಿದರು. ಬೆಳಗ್ಗೆ ಆಗೋ ಹೊತ್ತಿಗೆ ನಮ್ಮ ಹುಡುಗಿ ಮೃತದೇಹವಾಗಿ ಸಿಕ್ಕಿದ್ದಾಳೆ ಅದು ಚಿತ್ರ ಹಿಂಸೆ ಅನುಭವಿಸಿ, ಮೂಗಿ ಹುಡುಗಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲು ಮನಸ್ಸು ಹೇಗೆ ಬಂದಿದೆ . ಕೃತ್ಯ ಯಾರು ಮಾಡಿದ್ದಾರೆ ಎಂಬ ಗುರುತು ಸಿಗಬಾರದು ಎಂದು ಮೃತದೇಹವನ್ನು ತೊಳೆದು ಸುಟ್ಟಿದ್ದಾರೆ, ನಾವು ಬಡವರು ಅದರಲ್ಲೂ ಬಡ ಹೆಣ್ಣು ಮಕ್ಕಳು, ಈ ರೀತಿ ಪರಿಸ್ಥಿತಿ ಆದರೆ ನಮ್ಮ ಗತಿ ಏನು, ನಾವು ಎಲ್ಲಿಗೆ ಹೋಗಬೇಕು . ನಾವು ಕೂಲಿ ಮಾಡಿದರೆ ಮಾತ್ರ ಒಂದು ತುತ್ತು ಊಟ ಮಾಡುತ್ತೇವೆ. ಇಲ್ಲ ಎಂದರೆ ಹಸಿವು ಹೊಟ್ಟೆಯಲ್ಲಿಯೇ ಇರುತ್ತೀವಿ ನಮ್ಮಂತವರಿಗೆ ಈ ರೀತಿ ಆದ್ರೆ ಹೇಗೆ ನಾವು ಬದುಕುವುದು, ಕೂಲಿಗೆ ನಾವು ಒಬ್ಬರೇ ರಸ್ತೆಯಲ್ಲಿ ಹೋಗಬೇಕು ಅಂದರೆ ಭಯ ಆಗುತ್ತದೆ. ನಮಗೆ ಪೊಲೀಸ್ ನವರು ನ್ಯಾಯ ದೊರಕಿಸಿ ಕೊಡಬೇಕು, ಇಲ್ಲವೆಂದರೆ ನಾವು ಮೃತದೇಹ ಇಲ್ಲಿಂದ ತೆಗೆಯುವುದಿಲ್ಲ" ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಈ ಘಟನೆಯಿಂದ ಹೆಣ್ಣು ಹೆತ್ತವರಿಗೆ ಸಂಕಟ ಆಗುತ್ತದೆ :

"ಯಾವುದೋ ಒಂದು ದೇಶದಲ್ಲಿ ಅಥವಾ ರಾಜ್ಯದಲ್ಲಿ ಈ ರೀತಿಯ ಘಟನೆ ನಡೆದರೆ ಇಡೀ ರಾಜ್ಯ ಎದ್ದೇಳುವ , ಜಾಗೃತಿಯಾಗುವ ಕೆಲಸ ಮಾಡುತ್ತದೆ. ಅಲ್ಲಲ್ಲಿ ಕ್ಯಾಂಡಲ್, ಸಾಮಾಜಿಕ ಜಾಲತಾಣದಲ್ಲಿ, ಟಿವಿ ಮಾಧ್ಯಮದಲ್ಲಿ ಘಟನೆಗೆ ಧರ್ಮ ಬಳಿಯುವ ಕೆಲಸ ನಡೆಯುತ್ತದೆ. ಆದರೆ ಇವತ್ತು ಬಡ ಕುಗ್ರಾಮದಲ್ಲಿ, ಅತಿ ಹೆಚ್ಚು ಹಕ್ಕಿ ಪಿಕ್ಕಿ ಜನಾಂಗ ಇರುವಂತಹ ಗ್ರಾಮದಲ್ಲಿ , ಅದರಲ್ಲು ಹೆಣ್ಣು ಮಗಳು, ವಿಶೇಷಚೇತನ ಹೆಣ್ಣು ಮಗಳಿಗೆ ಹೀಗಾಗಿರುವುದು ಹೆಣ್ಣು ಹೆತ್ತವರಿಗೆ ಸಂಕಟ ಆಗುತ್ತದೆ. ಉಳ್ಳವರಿಗೆ ಒಂದು ಕಾನೂನು ಬಡವರಿಗೆ ಒಂದು ಕಾನೂನಾ, ಘಟನೆ ನಡೆದು ನಾಲ್ಕು ದಿನವಾಗಿದೆ, ಉಳ್ಳವರಿಗೆ ಆದರೆ ಘಟನೆ ನಡೆದ ಒಂದೇ ಗಂಟೆಯಲ್ಲಿ ವಿಶೇಷ ತಂಡ ನೇಮಕವಾಗುತ್ತಿತ್ತು. ಆರೋಪಿಗಳನ್ನು ಬೆನ್ನಟ್ಟಿ ವಶಪಡಿಸಿಕೊಳ್ಳುತ್ತಿದ್ದರು" ಎಂದು ರೈತ ಮತ್ತು ಕಾರ್ಮಿಕ ರಕ್ಷಣಾ ಇಲಾಖೆ ರಾಜ್ಯಾಧ್ಯಕ್ಷ ಮೇಲುಕೋಟೆ ಬೆಟ್ಟಸ್ವಾಮಿ ಗೌಡ ಆಕ್ರೋಶ ವ್ಯಕ್ತಪಡಿಸಿದರು .

ಪ್ರತಿಭಟನೆ: ಅತ್ಯಾಚಾರ, ಕೊಲೆ ಖಂಡಿಸಿ ಬಾಲಕಿಯ ಪೋಷಕರು ಹಾಗೂ ಗ್ರಾಮಸ್ಥರು ರಾಮನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ್ದು, ನಮ್ಮ ಮಗಳ ಮೇಲೆ ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ. ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News