×
Ad

ಬಿಡದಿ ಬಾಲಕಿ ಸಾವು ಪ್ರಕರಣ | ಇದು ಕೊಲೆಯಲ್ಲ, ರೈಲು ಅಪಘಾತ: ರಾಮನಗರ ಎಸ್ಪಿ

Update: 2025-05-20 13:44 IST

ರಾಮನಗರ : ಮೇ 13ರಂದು ಜಿಲ್ಲೆಯ ಬಿಡದಿಯ ಸಮೀಪದಲ್ಲಿರುವ ಭದ್ರಾಪುರ ಬಳಿಯ ರೈಲ್ವೆ ಹಳಿ ಪಕ್ಕದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಇದು ಕೊಲೆಯಲ್ಲ ರೈಲು ಅಪಘಾತ ಎಂದು ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಈ ಕುರಿತು ರಾಮನಗರ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಇಂದು (ಮೇ 19) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ʼಬಾಲಕಿ ಖುಷಿಯ ಮೃತದೇಹದ ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರಿದ್ದು, ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ವರದಿಯಲ್ಲಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂದಿರುವ ಎಫ್‌ಎಸ್‌ಎಲ್‌ ವರದಿಯಲ್ಲಿ ಅತ್ಯಾಚಾರ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ’ ಎಂದು ಅವರು ತಿಳಿಸಿದ್ದಾರೆ.

ರೈಲ್ವೆ ಇಲಾಖೆಯ ಸಿಸಿ ಕ್ಯಾಮರಾದ ವಿಡಿಯೋ ಪಡೆದುಕೊಂಡಿದ್ದೇವೆ. ಎರಡು ಸಿಸಿ ಕ್ಯಾಮರಾದಲ್ಲಿ ಬಾಲಕಿಯ ಚಲನವಲನ ಕಂಡು ಬಂದಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡಿದಾಗ ರೈಲ್ವೆ ಅಪಘಾತ ಎಂಬುದು ಕಂಡುಬಂದಿದೆ. ‘ಬಾಲಕಿ ಸಂಜೆ ರೈಲು ಹಳಿ ಬಳಿ ಹೋಗಿದ್ದಾಗ 6 ಗಂಟೆ 7 ನಿಮಿಷಕ್ಕೆ ಅದೇ ಮಾರ್ಗವಾಗಿ ಸಂಚರಿಸಿದ ರೈಲು ಆಕೆಗೆ ಢಿಕ್ಕಿ ಹೊಡೆದಿದೆ. ರೈಲ್ವೆ ವಿಪತ್ತು ನಿರ್ವಹಣಾ ಸಂಸ್ಥೆಯ ಸಿಸಿಟಿವಿ ಕ್ಯಾಮರಾದಲ್ಲಿ ಬಾಲಕಿಯ ಚಲನವಲನ ಹಾಗೂ ರೈಲು ಢಿಕ್ಕಿ ಹೊಡೆಯುವ ದೃಶ್ಯ ಸೆರೆಯಾಗಿದೆ’ ಎಂದು ಹೇಳಿದರು.

ಢಿಕ್ಕಿ ಹೊಡೆದ ರೈಲನ್ನು ಪರಿಶೀಲನೆ ಮಾಡಿ ಸ್ಯಾಂಪಲ್ಸ್‌ ಸಂಗ್ರಹಿಸಿದ್ದೇವೆ, ಎಫ್‌ಎಸ್‌ಎಲ್‌ಗೆ ಕಳುಹಿಸುತ್ತೇವೆ. ವರದಿ ಬರುವ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡಿದ್ದರು. ಇದೆಲ್ಲವೂ ಸುಳ್ಳು, ಇನ್ನಷ್ಟು ಅನುಮಾನಗಳ ಬಗ್ಗೆಯೂ ತನಿಖೆ ಮಾಡುತ್ತೇವೆ. ಬಾಲಕಿಯ ಸಾವಿನ ಬಗ್ಗೆ ಇನ್ನೂ ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News