×
Ad

ಚನ್ನಪಟ್ಟಣ | ಪತಿಯ ಹತ್ಯೆ ಪ್ರಕರಣ : ಗ್ರಾ. ಪಂ.ಸದಸ್ಯೆ ಸೇರಿ ಆರು ಮಂದಿಯ ಸೆರೆ

Update: 2025-07-26 18:18 IST

ಸಾಂದರ್ಭಿಕ ಚಿತ್ರ | PC : freepik

ಬೆಂಗಳೂರು : ಪತಿಯನ್ನು ಹತ್ಯೆಗೈದ ಆರೋಪ ಪ್ರಕರಣ ಸಂಬಂಧ ಮೃತನ ಪತ್ನಿ ಗ್ರಾಮ ಪಂಚಾಯಿತಿ ಸದಸ್ಯೆ ಆದ ಚಂದ್ರಕಲಾ ಸೇರಿದಂತೆ ಆರು ಮಂದಿಯನ್ನು ಚನ್ನಪಟ್ಟಣ ತಾಲೂಕಿನ ಎಂಕೆ ದೊಡ್ಡಿ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಚನ್ನಪಟ್ಟಣ ತಾಲೂಕಿನ ಮಾಕಳಿ ಗ್ರಾಮದ ಲೋಕೇಶ್(45) ಹತ್ಯೆ ಪ್ರಕರಣ ಸಂಬಂಧ ಮೃತ ಲೋಕೇಶ್ ಪತ್ನಿ ಗ್ರಾಮ ಪಂಚಾಯಿತಿ ಸದಸ್ಯೆ ಆಗಿರುವ ಚಂದ್ರಕಲಾ, ಯೋಗೇಶ್, ಶಾಂತರಾಜು, ಸೂರ್ಯಕುಮಾರ್, ಶಿವಲಿಂಗ, ಚಂದನ್ ಬಂಧಿತ ಆರೋಪಿಗಳಾಗಿದ್ದು, ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.

ಜೂ.24ರಂದು ಕೃಷ್ಣಾಪುರ ಗ್ರಾಮದ ಹೊರ ವಲಯದಲ್ಲಿ ತಮ್ಮ ಕಾರಿನ ಪಕ್ಕದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅನುಮಾನಸ್ಪದವಾಗಿ ಲೋಕೇಶ್ ಸಾವನ್ನಪ್ಪಿದ್ದರು. ಮೃತನ ಸಂಬಂಧಿ ಈ ಬಗ್ಗೆ ಶಂಕೆ ವ್ಯಕ್ತಪಡಿಸಿ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮೃತ ಲೋಕೇಶ್ ಪತ್ನಿ ಚಂದ್ರಕಲಾ ತನ್ನ ಗೆಳೆಯ ಯೋಗೇಶ್‍ಗೆ ಹಣ ನೀಡಿ ಹತ್ಯೆಗೆ ಸೂಚಿಸಿದ್ದಾಳೆ. ಅದರಂತೆ, ಯೋಗೇಶ್ ತನ್ನ ಸಹಚರರೊಂದಿಗೆ ಲೋಕೇಶ್ ಹಿಂಬಾಲಿಸಿ ಚನ್ನಪಟ್ಟಣ ರಾಮನಗರ ಗಡಿ ಗ್ರಾಮ ಕೃಷ್ಟಪುರದ ಬಳಿ ಕಾರು ಅಡ್ಡಗಟ್ಟಿ ಬಲವಂತವಾಗಿ ಲೋಕೇಶ್‍ಗೆ ವಿಷ ಕುಡಿಸಿ ಸಾಯಿಸಿ, ನಂತರ ಅತ್ಮಹತ್ಯೆ ಮಾಡಿಕೊಂಡಿರುವಂತೆ ಸನ್ನಿವೇಶ ಸೃಷ್ಟಿ ಮಾಡಿರುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಮೃತ ಲೋಕೇಶ್ ಅವರ ಮೊಬೈಲ್ ಕರೆಗಳನ್ನು ಪರಿಶೀಲನೆ ನಡೆಸಿದಾಗ ಚಂದ್ರಕಲಾ ಹಾಗೂ ಇತರೆ ಆರೋಪಿಗಳಿಗೆ ಸಂಪರ್ಕ ಇರುವುದು ಗೊತ್ತಾಗಿದೆ. ಆನಂತರ, ಎಂಕೆ ದೊಡ್ಡಿ ಠಾಣಾ ಪೊಲೀಸರು ಲೋಕೇಶ್ ಪತ್ನಿ ಗ್ರಾಮ ಪಂಚಾಯಿತಿ ಸದಸ್ಯೆ ಚಂದ್ರಕಲಾ ಅನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ. ತನಿಖೆ ವೇಳೆ ಆರೋಪಿ ಮಹಿಳೆ ಕೊಲೆಗೆ ಪತಿಯ ಕಿರುಕುಳ ಕಾರಣ ಎಂದು ಆರೋಪಿಸಿದ್ದಾರೆ ಎಂದು ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News