×
Ad

14 ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ | 48 ಗಂಟೆಗಳಾದರೂ ಸಿಗದ ಮರಣೋತ್ತರ ಪರೀಕ್ಷಾ ವರದಿ: ಕುಟುಂಬಸ್ಥರ ಆಕ್ರೋಶ

Update: 2025-05-14 18:05 IST

ಸಾಂದರ್ಭಿಕ ಚಿತ್ರ | PC : freepik.com

ಬೆಂಗಳೂರು : ರಾಮನಗರ ಜಿಲ್ಲೆಯ ಬಿಡದಿಯ ಸಮೀಪದಲ್ಲಿರುವ ಭದ್ರಾಪುರ ಬಳಿಯ ರೈಲ್ವೆ ಹಳಿ ಪಕ್ಕದಲ್ಲಿ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದ ಸ್ಥಿತಿಯಲ್ಲಿ 14 ವರ್ಷದ ಬಾಲಕಿಯ ಮೃತದೇಹವೊಂದು ಅರೆ ನಗ್ನಾವಸ್ಥೆಯಲ್ಲಿ ಪತ್ತೆಯಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೇ 11ರಂದು ಘಟನೆ ನಡೆದಿದ್ದು, ಮೇ 13ರಂದು ಮೃತದೇಹ ಪತ್ತೆಯಾಗಿದೆ.

ಬಾಲಕಿಯ ಬೆನ್ನು ಮೂಳೆ ಮುರಿದು ಕುತ್ತಿಗೆ ತಿರುಚಿ ಕೊಲೆಗೈಯ್ಯಲಾಗಿದೆ. ಈ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಸ್ಥಳೀಯ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಗುಂಪು ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಅನಂತರದಲ್ಲಿ ಕ್ರೂರವಾಗಿ ಕೊಲೆಗೈದಿರುವ ಕುರುಹುಗಳು ಕಣ್ಮುಂದೆ ಇದ್ದರೂ ಪೊಲೀಸರು ಇದನ್ನು ಅತ್ಯಾಚಾರ ಎಂದು ಪರಿಗಣಿಸುತ್ತಿಲ್ಲ. ಯಾವುದೇ ತನಿಖೆ ನಡೆಸಿಲ್ಲ. ಇನ್ನು ಮರಣೋತ್ತರ ಪರೀಕ್ಷೆ ನಡೆದು 48 ಗಂಟೆಗೂ ಅಧಿಕವಾದರೂ ಈವರೆಗೆ ವರದಿ ಸಿಕ್ಕಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಮಗಳಿಗೆ ಮಾತು ಬರುತ್ತಿರಲಿಲ್ಲ, ಕಿವಿ ಕೇಳಿಸುತ್ತಿರಲಿಲ್ಲ: ‘ಮಗಳಿಗೆ ಮಾತು ಬರುತ್ತಿರಲಿಲ್ಲ, ಕಿವಿಯೂ ಕೇಳಿಸುತ್ತಿರಲಿಲ್ಲ. ಮೇ 11ರ ರವಿವಾರದಂದು ಮನೆಯಿಂದ ನಾಪತ್ತೆಯಾಗಿ ಇದೀಗ ಅತ್ಯಾಚಾರಕ್ಕೊಳಪಟ್ಟು ಶವವಾಗಿ ಪತ್ತೆಯಾಗಿದ್ದಾಳೆ. ಆಕೆಯನ್ನು ಅಪಹರಿಸಿ ಕೃತ್ಯ ನಡೆಸಲಾಗಿದೆ. ಈ ಪ್ರಕರಣದಲ್ಲಿ ಹಂತಕರನ್ನು ಬಂಧಿಸಿ, ನ್ಯಾಯ ಸಿಗುವವರೆಗೂ ನಾವು ಶವಸಂಸ್ಕಾರ ಮಾಡುವುದಿಲ್ಲ ಎಂದು ಮನೆ ಮುಂದೆ ಮೃತದೇಹವನ್ನಿಟ್ಟುಕೊಂಡು ಪೋಷಕರು ಪಟ್ಟು ಹಿಡಿದಿದ್ದಾರೆ.

ಪ್ರತಿಭಟನೆ: ಅತ್ಯಾಚಾರ, ಕೊಲೆ ಖಂಡಿಸಿ ಬಾಲಕಿಯ ಪೋಷಕರು ಹಾಗೂ ಗ್ರಾಮಸ್ಥರು ರಾಮನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದ್ದು, ನಮ್ಮ ಮಗಳ ಮೇಲೆ ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ. ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅವರು, ಮೃತ ಬಾಲಕಿಯ ಮನೆಗೆ ಬುಧವಾರ ಭೇಟಿ ನೀಡಿದ್ದು, ಸಂತ್ರಸ್ಥ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. 

ನಾವು ಬೆಳಗ್ಗಿನ ವರೆಗೂ ಹುಡುಕಿದೆವು, ಆದ್ರೆ ನನ್ನ ಮಗಳು ಕಾಣಿಸಲಿಲ್ಲ :

ರವಿವಾರ ತಾಯಂದಿರ ದಿನದಂದು ನಾವು ಒಟ್ಟಿಗೆ ಕಾರ್ಯಕ್ರಮಕ್ಕೆ ಹೋಗಿದ್ದೆವು, ಆದರೆ ವಾಪಸ್ಸು ಬರುವಾಗ ನನ್ನ ತಮ್ಮನ ಮನೆಯ ಬೀದಿಯ ಬಳಿ ನನ್ನ ಮಗಳು ಆಟವಾಡಲು ಹೋದಳು. ನಾನು ನನ್ನ ಮನೆಗೆ ಹಿಂತಿರುಗಿ ನನ್ನ ಮತ್ತೊಬ್ಬ ಮಗಳು ಅವಳಿಗೂ ಮಾತು ಬರುವುದಿಲ್ಲ. ಅವಳಿಗೆ ಅಡುಗೆ ಮಾಡಿ ಕೊಟ್ಟೆ , ಅಷ್ಟೊತ್ತಿಗೆ ಎಂಟು ಗಂಟೆ ರಾತ್ರಿಯಾಗಿತ್ತು, ಮಗಳೂ ಇನ್ನೂ ಸಹ ಬಂದಿರಲಿಲ್ಲ. ನಂತರ ನನ್ನ ತಮ್ಮನ ಬಳಿ ಹೋಗಿ "ಮಗಳು ಬಂದಿಲ್ಲ ಹುಡುಕೋಣ ನಡಿ ಎಂದೆ", ಬೀದಿ ಬೀದಿ ಹುಡುಕಿದ್ವಿ. ಹನ್ನೆರಡು ಗಂಟೆ ಆದ್ರೂ ಕೂಡ ಮಗಳು ಸಿಕ್ಕಿಲ್ಲ, ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟೆವು. ಆದ್ರೆ ಪೊಲೀಸ್ ನವ್ರು ಹುಡುಗಿ ಫೋಟೋ ತೆಗೆದುಕೊಂಡರು ನಂತರ "ಅಮ್ಮ ಬೆಳಗ್ಗೆ ಬನ್ನಿ , ನಾವು ಕೂಡ ಬರ್ತೀವಿ, ರಾತ್ರಿನೇ ಪೊಲೀಸ್ ನವರನ್ನು ಕರಿಸ್ತೀನಿ" ಅಂದ್ರು. ಆದ್ರೆ ಅವ್ರು ಕಳ್ಸಿಲ್ಲ, ಪೊಲೀಸ್ ನವರು ಬಂದಿಲ್ಲ. ಆದ್ರೆ ನಾವು ಬೆಳಗ್ಗಿನ ವರೆಗೂ ಹುಡುಕಿದೆವು. ಆದ್ರೆ ನನ್ನ ಮಗಳು ಕಾಣಿಸಲಿಲ್ಲ. ಬೆಳಗ್ಗೆ ಏಳು ಗಂಟೆ ಹೊತ್ತಿಗೆ ಯಾರೋ ಬಂದು "ಯಾರೋ ಬಿದ್ದಿದ್ದಾರೆ ಅಮ್ಮ, ಬಂದು ನೋಡಿ ಅದು ನಿಮ್ಮ ಮಗಳಾ" ಎಂದು ಅಂದರು. ಹೋಗಿ ನೋಡಿದರೆ ಅಲ್ಲಿ ನನ್ನ ಮಗಳೇ ಕಂಡಳು, ಸರಿಯಾಗಿ ತಲೆ ಬುರುಡೆಗೆ ಹೊಡೆದು ಕಾಲು ಮುರಿದು, ಜಲ್ಲಿ ಕಲ್ಲಿನ ಮೇಲೆ ಎಳೆದುಕೊಂಡು ಹೋಗಿದ್ದಾರೆ. ಆಕೆ ನೋವು ತಡೆದುಕೊಳ್ಳಲಾರದೆ ಎಲೆಗಳನ್ನು ಕಿತ್ತಿದ್ದಾಳೆ ಎಂದು ಮೃತ ಬಾಲಕಿಯ ತಾಯಿ ದುಃಖಿಸಿದರು.

ನಮ್ಮ ಜೊತೆಗೆ ಪೊಲೀಸ್ ನವರು ಬರಬೇಕಿತ್ತು :

"ಪೊಲೀಸ್ ನವರು ನಮ್ಮ ದೂರು ತೆಗೆದುಕೊಂಡು ನಮ್ಮ ಜೊತೆ ರಾತ್ರಿಯೇ ಬಂದಿದ್ದರೆ, ಈ ರೀತಿಯ ಪರಿಸ್ಥಿತಿ ಆಗುತ್ತಿರಲಿಲ್ಲ, ನಮ್ಮ ಹುಡುಗಿ ನಮಗೆ ಸಿಗುತ್ತಿದ್ದಳು. ನಮ್ಮ ಜೊತೆಗೆ ಪೊಲೀಸ್ ನವರು ಬರಬೇಕಿತ್ತು, ಯಾಕ್ ಬಂದಿಲ್ಲ, ನಾವೇನು ನಿಮಗೆ ಅನ್ಯಾಯ ಮಾಡಿದ್ದೀವಾ , ನಾವು ಅತೀ ಬಡವರು, ನಮ್ಮ ಜೊತೆಗೆ ಪೊಲೀಸ್ ನವರು ಬಂದಿದ್ದರೆ ನಮ್ಮ ಹುಡುಗಿಯನ್ನು ಕರೆದುಕೊಂಡು ಬರುತ್ತಿದ್ದೆವು ಆದ್ರೆ ನೀವು (ಪೊಲೀಸ್) ಬಂದಿಲ್ಲ"  ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News