ಬ್ರಿಕ್ಸ್ ಕಟ್ಟಿದ ಸೇತುವೆ; ಹನುಮಪ್ಪ ಸಾರಿದ ಸಂದೇಶ
ನಾಟಕ: ಬ್ರಿಕ್ಸ್ ಆಂಡ್ ಬಾಡಿಸ್
ತಂಡ: ಆಂಟಿಪೋಡ್ ಡಾನ್ಸ್ ಟಾಂಜ್
ಸಹಯೋಗ: ಅಟ್ಟಕಳರಿ ಇಂಡಿಯನ್ ಬೆನಿಯಲ್, ಸ್ವಿಟ್ಸರ್‌ಲ್ಯಾಂಡ್
ನಿರ್ದೇಶನ: ನಿಕೋಲ್ ಮೊರೆಲ್
ರಂಗದ ಮೇಲೆ: ಸ್ವಿಸ್‌ನ ನಿಕೋಲ್ ಮೊರೆಲ್, ಮೆಲನಿ ಗೊಬೆಟ್.
ಭಾರತೀಯ ಕಲಾವಿದರು: ಹೇಮಾಭಾರತಿ ಪಳನಿ, ಅಂಜಲಿ ದೇವನ್, ಹೆನ್ನಾ ರೈಸಿಂಗನಿ, ಎನ್.ಎಸ್. ಶಿವರಂಜನ್, ನಿತಿನ್ ಕನ್ನತ್, ಪಾತುಂ ಧರ್ಮರತ್ನ
ಅವರ ಕೈಯಲ್ಲಿ ಇಟ್ಟಿಗೆಗಳು ತಾಳಗಳಾದವು. ಅವರು ಇಟ್ಟಿಗೆಗಳಿಂದ ಶಬ್ದವಲ್ಲ; ಸಂಗೀತ ಹೊರಡಿಸಿದರು. ನಿಜ. ಇಟ್ಟಿಗೆಗಳನ್ನು ಜೋಡಿಸಿಡುವಾಗ ‘ಸೌಂಡ್’ ಮಾಡಿದರು. ಇದಕ್ಕೂ ಮುನ್ನ ಜೋಡಿಸಿಟ್ಟ ಇಟ್ಟಿಗೆಗಳನ್ನು ಒಂದೊಂದಾಗಿ ಹೊತ್ತು ಸಾಲಾಗಿ ಜೋಡಿಸಿದರು. ಎರಡರ ಮಧ್ಯೆ ಮತ್ತೆ ಇಟ್ಟಿಗೆಗಳನ್ನಿಟ್ಟರು. ಹೀಗೆ ಇಟ್ಟಿಗೆಗಳ ಮೂಲಕ ಗಗನಚುಂಬಿ ಕಟ್ಟಡಗಳಾದವು, ಮಹಿಳೆಯನ್ನು ಕೂಡಿ ಹಾಕಿದವುಗಳಾದವು, ಇಟ್ಟಿಗೆಗಳಿಂದ ಹೊಡೆಯುವ, ಕಟ್ಟುವ, ಕೆಡುಹುವ ಹಾಗೂ ಸೇತುವೆಯಾಗುವ ದೃಶ್ಯ ತೋರಿಸಿದರು.
ಶಿವರಾತ್ರಿ ದಿನ ಮೈಸೂರು ರಂಗಾಯಣದಲ್ಲೊಂದು ವಿಶಿಷ್ಟವಾದ ರಂಗ ಪ್ರಯೋಗವಾಯಿತು. ಅದು ‘ಬ್ರಿಕ್ಸ್ ಆಂಡ್ ಬಾಡೀಸ್’ ನೃತ್ಯನಾಟಕ ವಿಶಿಷ್ಟವಾಗಿತ್ತು. ಐವತ್ತು ನಿಮಿಷಗಳ ಈ ನೃತ್ಯನಾಟಕದಲ್ಲಿ ಒಂದೇ ಒಂದು ಸಂಭಾಷಣೆ ಇರಲಿಲ್ಲ. ಆದರೆ ಇಟ್ಟಿಗೆಯ ಮಹತ್ವ ಸಾರಿದರು. ಇಟ್ಟಿಗೆಗಳು ಪಾತ್ರಗಳೂ ಆದವು. ಪಕ್ಕಾ ವೃತ್ತಿಪರರಾದ ಅವರೆಲ್ಲ ಪ್ರಸ್ತುತಪಡಿಸಿದ್ದನ್ನು ಪ್ರೇಕ್ಷಕರು ಉಸಿರು ಬಿಗಿ ಹಿಡಿದು ನೋಡಿದರು.
***
ಗ್ರಾಮದ ಗುಡಿಯ ಹನುಮಪ್ಪ ದೇವರು ಏನೆಲ್ಲಾ ಘಟನೆಗಳಿಗೆ ಕಾರಣನಾಗುತ್ತಾನೆ ಎನ್ನುವ ವಸ್ತುವನ್ನಿರಿಸಿಕೊಂಡು ಹನುಮಂತ ಹಾಲಿಗೇರಿ ರಚಿಸಿದ ‘ಊರು ಸುಟ್ಟರೂ ಹನುಮಪ್ಪ ಹೊರಗ’ ನಾಟಕವನ್ನು ಕೆ.ಆರ್. ಸುಮತಿ ಅವರು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಕರ್ನಾಟಕ ನಾಟಕ ಅಕಾಡಮಿಯ ನೆರವಿನಿಂದ ಶಿಬಿರದಲ್ಲಿ ಸಿದ್ಧಗೊಂಡ ಈ ನಾಟಕವನ್ನು ಮೈಸೂರಿನ ಎಸ್‌ಬಿಆರ್ ಮಹಾಜನ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.
ಗುಡಿಯಿಂದ ಕಳವಾಗುವ ಹನುಮಪ್ಪನ ಮೂಲಕ ಗ್ರಾಮಗಳಲ್ಲಿ ಜಗಳ, ಕದನ, ಹೊಡೆದಾಟ ಕೊನೆಗೆ ಠಾಣೆ ಮೆಟ್ಟಿಲೇರಿದಾಗ, ಹನುಮಪ್ಪನೂ ಠಾಣೆಯಲ್ಲಿ ಠಿಕಾಣಿ ಹೂಡುತ್ತಾನೆ. ಇಲ್ಲಿಂದ ಕೋರ್ಟಿನಲ್ಲಿ ದಾವೆ ದಾಖಲಾಗಿ ಎರಡು ಗ್ರಾಮಗಳ ಜನರು ತಮ್ಮ ಚಿನ್ನಾಭರಣಗಳನ್ನು ಒತ್ತೆ ಇಟ್ಟಾದರೂ ಗೆಲ್ಲಲು ಛಲ ತೊಡುತ್ತಾರೆ. ಇದರಿಂದ ಗುಳೆ ಹೊರಡುತ್ತಾರೆ. ಕೊನೆಗೆ ಯಾರಿಗೂ ಬೇಡವಾಗುತ್ತಾನೆ ಹನುಮಪ್ಪ. ಇದನ್ನೇ ಆಧರಿಸಿ ಉತ್ತರ ಕರ್ನಾಟಕದಲ್ಲಿ ‘ಊರು ಸುಟ್ಟರೂ ಹನುಮಪ್ಪ ಹೊರಗ’ ಎನ್ನುವ ಗಾದೆ ಹುಟ್ಟಿಕೊಂಡಿದೆ.
ಉತ್ತರ ಕರ್ನಾಟಕದ ಪ್ರತಿಭಾವಂತ ಲೇಖಕ ಹನುಮಂತ ಹಾಲಿಗೇರಿ ಅವರ ಈ ನಾಟಕವನ್ನು ಸುಮತಿ ಅವರು ಕಾಲೇಜಿನ ವಿದ್ಯಾರ್ಥಿಗಳಿಗೆ ಶಿಬಿರದ ಮೂಲಕ ನಿರ್ದೇಶಿಸಿದ್ದಾರೆ. ವಿವಿಧ ಜಿಲ್ಲೆಯ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮೀರಿ ಅಭಿನಯಿಸಿದರು. ಆದರೆ ಅವರು ಪಕ್ಕಾ ಉತ್ತರ ಕರ್ನಾಟಕ ಸಂಭಾಷಣೆ ಬಳಸಲಿಲ್ಲ. ಅಲ್ಲಲ್ಲಿ ಮೈಸೂರು ಭಾಷೆ ಇಣುಕುತ್ತಿತ್ತು. ಇದು ಸಹಜ. ಅಲ್ಲದೆ ಸಹಜ ಅಭಿನಯವೂ ಬೇಕಿತ್ತು.
ಒಂದೂವರೆ ಗಂಟೆಯ ಈ ನಾಟಕವು ದೀರ್ಘವಾ ಯಿತೇನೋ? ಕೊನೆಗೆ ಕುತೂಹಲ ಮೂಡಿಸುತ್ತದೆ ಜೊತೆಗೆ ಗಂಭೀರತೆ ಪಡೆಯುತ್ತದೆ. ದೇವರ ಹೆಸರಲ್ಲಿ ಸುಲಿಗೆ, ಶೋಷಣೆ ಜೊತೆಗೆ ಮೌಢ್ಯಾಚರಣೆ ಮೂಲಕ ಜನರು ಬಡವರಾಗಿಯೇ ಉಳಿಯುವ ಅನಿವಾರ್ಯತೆಯನ್ನು ನಾಟಕ ತೆರೆದಿಟ್ಟಿತು. ಇನ್ನೊಂದಿಷ್ಟು ಪಾಲಿಶ್ ಮಾಡಿದರೆ ಚೆಂದದ ನಾಟಕವಾಗುತ್ತದೆ.
ನಾಟಕ: ಊರು ಸುಟ್ಟರೂ ಹನುಮಪ್ಪ ಹೊರಗ
ರಚನೆ: ಹನುಮಂತ ಹಾಲಿಗೇರಿ
ವಿನ್ಯಾಸ, ನಿರ್ದೇಶನ: ಕೆ.ಆರ್. ಸುಮತಿ
ಸಂಗೀತ: ಚಿಂತನ್ ವಿಕಾಸ್, ಜನಾರ್ದನ್ (ಜನ್ನಿ)
ಬೆಳಕು: ಮಧು ಮಳವಳ್ಳಿ
ಸಂಚಾಲಕರು: ಎ. ರಾಧೇಶ್
ಪ್ರಸ್ತುತಿ: ಸಾರಂತ ರಂಗ ತಂಡ, ಎಸ್‌ಬಿಆರ್ ಮಹಾಜನ ಪ್ರಥಮದರ್ಜೆ ಕಾಲೇಜು
ನೆರವು: ಕರ್ನಾಟಕ ನಾಟಕ ಅಕಾಡಮಿ
ವಸ್ತ್ರವಿನ್ಯಾಸ: ಕವಿತಾ ಮೋಹನ್
ಪಾತ್ರಗಳು: ವಿಕಾಸ್, ಹರ್ಷವರ್ಧನ್ ಎಸ್., ಅಭಿಷೇಕ್ ಎಸ್., ಪವನ್ ದೇವ್ ಎಂ., ಕೌಶಿಕ್ ಬಿ., ರವಿನಂದನ್, ಸಂಜಯಕುಮಾರ್, ಸೃಜನ್, ವರ್ಷ ಎಸ್.ಆರ್., ದಿಕ್ಷಾ ಟಿ., ಸಿಂಚನ ಪಿ.ಜೆ., ಚಂದ್ರಕಲಾ ವಿ.ಕೆ., ಮಾನಸ ಎಚ್.ಎಂ., ಲಕ್ಷ್ಮೀವರ್ಷಿಣಿ.
ಶಿಬಿರದ ಮೂಲಕ ನಾಟಕ ಕಟ್ಟಿದ್ದರಿಂದ ಸುಮತಿ ಅವರು ರಂಗಭೂಮಿಯ ಮಹತ್ವವನ್ನು ಮನಗಾಣಿಸಿ ದ್ದಾರೆ ವಿದ್ಯಾರ್ಥಿಗಳಿಗೆ. ಅವರಲ್ಲಿ ಕೆಲವರಾದರೂ ರಂಗಭೂಮಿಯಲ್ಲಿ ಸಕ್ರಿಯರಾಗಲಿ ಉಳಿದವರು ಪ್ರೇಕ್ಷಕ ರಾಗಿ ನಾಟಕಗಳನ್ನು ನೋಡುವಂತಾಗಲಿ. ಈಮೂಲಕ ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷ ನಾಗರಾಜಮೂರ್ತಿ ಅವರು ಕಾಲೇಜು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ, ಅವರನ್ನು ರಂಗಭೂಮಿಯತ್ತ ಸೆಳೆಯುವ ಕಾರ್ಯ ಕೈಗೊಂಡಿರುವುದು ಸ್ತುತ್ಯಾರ್ಹ. ಈ ಕುರಿತು ನಾಟಕದ ಆರಂಭಕ್ಕೆ ಜನ್ನಿ ಅವರು ತಮ್ಮ ಪ್ರಾಸ್ತಾವಿಕ ಮಾತು ಗಳಲ್ಲಿ ಹೇಳಿದರು ‘‘ವಿದ್ಯಾರ್ಥಿಗಳಿಗೆ ವಿಷವಿಕ್ಕುವ ಸಂದರ್ಭದಲ್ಲಿ ಸೌಹಾರ್ದ ಸಂಬಂಧ ಬೆಸೆಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾಲೇಜು ರಂಗಭೂಮಿ ತರಬೇತಿ ಶಿಬಿರ ಮಹತ್ವವಾದುದು’’ ಎಂದಿದ್ದು ಗಮನಾರ್ಹ.
ಕೊನೆಗೊಂದು ಮಾತು:
ಈ ನಾಟಕ ನೋಡಲು ನನ್ನ ಮುಂದಿನ ಸಾಲಿನಲ್ಲಿ ತಾಯಿ ಮತ್ತು ಮಗ ಕುಳಿತಿದ್ದರು. ನಾಟಕ ಆರಂಭವಾದ ತಕ್ಷಣ ತಮ್ಮ ಮೊಬೈಲ್ ಫೋನ್ ಮೂಲಕ ಆ ತಾಯಿ ವೀಡಿಯೊ ಚಿತ್ರೀಕರಣದಲ್ಲಿ ತೊಡಗಿದರು. ಐದು-ಹತ್ತು ನಿಮಿಷ ಸುಮ್ಮನಿದ್ದೆ. ಅದು ಮುಂದುವರಿದಾಗ ಅವರಿಗೆ ಹೇಳಿದೆ ‘‘ದಯವಿಟ್ಟು ಮುಂದಿನ ಸಾಲಿನಲ್ಲಿ ಕುಳಿತುಕೊಂಡು ಶೂಟ್ ಮಾಡಿ. ನನಗೆ ತೊಂದರೆಯಾಗಲ್ಲ. ನಾಟಕ ನೋಡುವಾಗ ನಿಮ್ಮ ಮೊಬೈಲ್ ಫೋನ್ ತೊಂದರೆ ಕೊಡುತ್ತಿದೆ’’ ಎಂದೆ. ಅವರು ಕ್ಯಾರೆ ಅನ್ನಲಿಲ್ಲ. ಮತ್ತೆ ಶೂಟ್ ಮಾಡುವುದನ್ನು ಮುಂದುವರಿಸಿದಾಗ ‘‘ನೀವೇ ಮುಂದೆ ಕುಳಿತುಕೊಳ್ಳಿ’’ ಎಂದು ಸಲಹೆ ನೀಡಿದರು! ಕೊನೆಗೆ ನಾಟಕ ಮುಗಿದ ಮೇಲೆ ಅವರು ‘‘ಮೊಬೈಲ್ ಫೋನ್ ಸೈಲೆಂಟ್ ಇಡಿ ಎಂದರಷ್ಟೇ. ಶೂಟ್ ಮಾಡಬೇಡಿ ಎಂದು ಹೇಳಿಲ್ಲ’’ ಎಂದರು. ‘‘ಹಾಗಲ್ಲ. ನೀವು ಶೂಟ್ ಮಾಡುವಾಗ ಉಳಿದ ಪ್ರೇಕ್ಷಕರಿಗೆ ತೊಂದರೆಯಾಗುತ್ತದೆ. ಇದರಿಂದ ನೀವು ಲಕ್ಷ್ಯ ಕೊಟ್ಟು ನಾಟಕ ನೋಡಲು ಆಗದು’’ ಎಂದೆ. ಇದಕ್ಕೆ ನಾಟಕ ಅಕಾಡಮಿ ಸದಸ್ಯೆ ಜಹಿದಾ ಧ್ವನಿಗೂಡಿಸಿದರು. ಆಗ ಆ ತಾಯಿ ‘‘ಅಯ್ಯೋ, ನೀವು ಇವರನ್ನು ಸಪೋರ್ಟ್ ಮಾಡ್ತಿದ್ದೀರಿ! ನಿಮಗೆ ಗೊತ್ತಿಲ್ಲವೆಂದು ಕಾಣುತ್ತೆ. ಶೂಟ್ ಮಾಡಿಕೊಳ್ಳಬಹುದು. ಹಾಗೆ ಮಾಡಬೇಡಿ ಎಂದು ಅನೌನ್ಸ್ ಮಾಡಲಿಲ್ಲ’’ ಎಂದು ವಾದ ಮಂಡಿಸಿದರು. ‘‘ಇಲ್ಲಿಗೆ ಮಾತು ನಿಲ್ಲಿಸೋಣ’’ ಎಂದು ಕೈ ಮುಗಿದೆ. ಅಷ್ಟರಲ್ಲಿ ಆ ತಾಯಿಯ ಮಗ ಬಂದು ಅವರನ್ನು ಕರೆದುಕೊಂಡು ಹೋದ.
ಇದು ಮೊದಲ ಸಲವೇನೂ ಅಲ್ಲ. ವಿದ್ಯಾರ್ಥಿಗಳ ನಾಟಕವೆಂದಾಗ ಅವರ ಹೆತ್ತವರು, ಪೋಷಕರು, ಅಣ್ಣತಮ್ಮಂದಿರು ಬರುವುದು ಸಹಜ. ಆದರೆ ಸುಮ್ಮನೆ ಕುಳಿತುಕೊಳ್ಳದೆ ಮೊಬೈಲ್ ಫೋನ್‌ನಲ್ಲಿ ಫೋಟೊ ತೆಗೆಯುತ್ತಾರೆ, ಚಿತ್ರೀಕರಿಸಲು ಮುಂದಾಗುತ್ತಾರೆ. ಅಂಥವರನ್ನು ಗಮನದಲ್ಲಿರಿಸಿಕೊಂಡು ಇನ್ನು ಮುಂದೆ ಫೋನ್ ಸೈಲೆಂಟಲ್ಲಿ ಇಡಿ ಇಲ್ಲವೇ ಸ್ವಿಚ್ ಆಫ್ ಮಾಡಿ, ಮಾತಾಡಬೇಡಿ ಎನ್ನುವುದರ ಜೊತೆಗೆ ಯಾರೂ ಫೋಟೋ ತೆಗೆದುಕೊಳ್ಳಬೇಡಿ, ಚಿತ್ರೀಕರಿಸಬೇಡಿ. ಸುಮ್ಮನೆ ಕುಳಿತು ನಾಟಕ ನೋಡಿ. ನಂತರ ನಾವೇ ಕೊಡ್ತೇವೆ. ನಾಟಕ ಮಾತ್ರ ನೋಡಿ ಎಂದು ಹೇಳಬೇಕಾದ ಅನಿವಾರ್ಯತೆ ಇದೆ. ಈಮೂಲಕ ನಾಟಕ ನೋಡುವ ಬಗೆ ಹೇಗೆ ಎನ್ನುವುದನ್ನು ಪ್ರೇಕ್ಷಕರಿಗೆ ಕಲಿಸುವ ಅಗತ್ಯವಿದೆ.