ಮೂವರು ಹಿರಿಯ ರಂಗಕರ್ಮಿಗಳ ನೆನಪು...
ಪಿ. ಗಂಗಾಧರಸ್ವಾಮಿ, ಇಂದಿರಾ ನಾಯರ್ ಮತ್ತು ಚಿದಂಬರ ರಾವ್ ಜಂಬೆ
ಈಚೆಗೆ ಕನ್ನಡದ ಮೂವರು ಹಿರಿಯ ರಂಗಕರ್ಮಿಗಳು ಅಗಲಿದರು. ಅದು ರಂಗಭೂಮಿಗೆ ಆದ ನಷ್ಟ. ಮೂವರೂ ಎಪ್ಪತ್ತು ದಾಟಿದ್ದರು. ತಮ್ಮದೇ ಕೊಡುಗೆ ಮೂಲಕ ಕನ್ನಡದ ಪ್ರೇಕ್ಷಕರ ಮನಸ್ಸಲ್ಲಿ ಉಳಿದವರು. ಹೀಗಾಗಿ ಅಳಿದರೂ ಉಳಿಯುವವರು. ಅವರ ಕೊಡುಗೆ ಕುರಿತು ಇಲ್ಲಿ ಸ್ಮರಿಸಿರುವೆ.
ಪಿ.ಗಂಗಾಧರಸ್ವಾಮಿ
ಮೈಸೂರಿನ ಹಿರಿಯ ರಂಗಕರ್ಮಿ ಪಿ.ಗಂಗಾಧರಸ್ವಾಮಿ (76) ಅವರು ಆಗಸ್ಟ್ 29ರಂದು ಹೃದಯಾಘಾತದಿಂದ ನಿಧನರಾದರು.
2017-18ನೇ ಸಾಲಿನಲ್ಲಿ ನಾನು ನಾಟಕ ಅಕಾಡಮಿ ಸದಸ್ಯನಾಗಿದ್ದ ಅವಧಿಯಲ್ಲಿ ಗಂಗಾಧರ ಸ್ವಾಮಿ ಅವರು ಕರ್ನಾಟಕ ನಾಟಕ ಅಕಾಡಮಿಯ ಗೌರವ ಪ್ರಶಸ್ತಿ ಪುರಸ್ಕೃತರಾಗಿದ್ದರು. ನೀನಾಸಂನಲ್ಲಿ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿದ್ದರು. ಅಲ್ಲದೆ ಬೆಂಗಳೂರಿನ ಆದರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಅಧ್ಯಾಪಕರಾಗಿದ್ದರು.
ಮೈಸೂರು ರಂಗಾಯಣದ ನೇಪಥ್ಯದ ಪ್ರಶಿಕ್ಷಕರೆಂದು ಕಾರ್ಯ ನಿರ್ವಹಿಸಿದ್ದರು. ಬಳಿಕ ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದರು.
ಇದಕ್ಕೂ ಮೊದಲು ಸಮುದಾಯ ಸಾಂಸ್ಕೃತಿಕ ಸಂಘಟನೆಯ ಆರಂಭಿಕ ಸದಸ್ಯರಾಗಿದ್ದ ಅವರು, ಸಮುದಾಯ ರಾಜ್ಯ ಸಮಿತಿಯ ಉಪಾಧ್ಯಕ್ಷರಾಗಿ ನಂತರ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯದಾದ್ಯಂತ ಸುತ್ತಿ ಘಟಕಗಳನ್ನು ಆರಂಭಿಸಿದರು. ಅಲ್ಲದೆ ರಂಗ ಶಿಬಿರಗಳನ್ನು ನಡೆಸಿದರು. ಸಮುದಾಯ ಸಂಘಟಿಸಿದ ರಾಜ್ಯಮಟ್ಟದ ಜಾಥಾಗಳಲ್ಲಿ ಸಂಘಟಕರಾಗಿ, ನಾಟಕ ನಿರ್ದೇಶಕರಾಗಿ ದುಡಿದರು.
ಜಾನಪದ ಪ್ರದರ್ಶನ ಕಲೆಯಾದ ದೊಡ್ಡಾಟವನ್ನು ಪುನರುಜ್ಜೀವನಗೊಳಿಸಲು ಕೊಂಡಜ್ಜಿಯಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ ನಡೆಸಿ ‘ಸುಂದೋಪಸುಂದ’ ದೊಡ್ಡಾಟವನ್ನು ಹತ್ತು ಹಲವು ಕಡೆ ಪ್ರದರ್ಶಿಸಿದರು.
ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಹುಲಸೋಗಿಯ ದೊಡ್ಡಾಟ ಟ್ರಸ್ಟ್ ಆಶ್ರಯದಲ್ಲಿ ಏಳುಕೊಳದ ಎಲ್ಲಮ್ಮ, ಕಿತ್ತೂರು ಚೆನ್ನಮ್ಮ ದೊಡ್ಡಾಟ ಪ್ರಸಂಗಗಳನ್ನು ಸಿದ್ಧಪಡಿಸಿ ‘ದೊಡ್ಡಾಟಗಳ ಅಡ್ಡಾಟ’ ಕಾರ್ಯಕ್ರಮದಡಿ ರಾಜ್ಯದಾದ್ಯಂತ ನೂರಾರು ಪ್ರದರ್ಶನಗಳಾಗುವಂತೆ ಸಂಘಟಿಸಿ ಯಶಸ್ವಿಯಾಗಿದ್ದರು. ನಂತರ ಅನೇಕ ರಂಗಶಿಬಿರಗಳಲ್ಲದೆ ನಾಟಕಗಳನ್ನು ನಿರ್ದೇಶಿಸಿದ್ದರು. ಅನೇಕ ಶಿಬಿರಗಳ ಮೂಲಕ ನಾಟಕಗಳನ್ನು ನಿರ್ದೇಶಿಸಿದ ಅವರು, ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿದರು. ಮುಖ್ಯವಾಗಿ ರಂಗಭೂಮಿಗೆ ಅನೇಕ ರಂಗಕರ್ಮಿಗಳನ್ನು ಕೊಡುಗೆಯಾಗಿ ನೀಡಿದರು.
ಗದಗ ಜಿಲ್ಲೆಯ ಮುಂಡರಗಿಯ ಅವರು ಮಠದ ಸ್ವಾಮಿಗಳಾಗಬೇಕಿತ್ತು. ಆದರೆ ರಂಗಜಂಗಮರಾದರು. ಅವರಿಗೆ ಶರಣು.
***
ಇಂದಿರಾ ನಾಯರ್
ಕನ್ನಡ ರಂಗಭೂಮಿಯ ಹಿರಿಯ ಕಲಾವಿದರಾದ ಮೈಸೂರಿನ ಇಂದಿರಾ ನಾಯರ್ ಆಗಸ್ಟ್ 28 ಹೃದಯಾಘಾತದಿಂದ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು.
ವೃತ್ತಿಯಿಂದ ಮೈಸೂರಿನಲ್ಲಿ ವಾಕ್ ಮತ್ತು ಶ್ರವಣ ತಜ್ಞರಾಗಿದ್ದ ಅವರು ರಂಗಭೂಮಿ, ಚಲನಚಿತ್ರ ಮತ್ತು ಕಿರುಚಿತ್ರಗಳಲ್ಲಿ ನಟಿಸಿದ್ದರು.
ಕಾಲೇಜು ದಿನಗಳಲ್ಲಿಯೇ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ಅಭಿನಯದ ಮೂಲಕ ರಂಗಪಯಣ ಆರಂಭಿಸಿದ ಅವರು, ಉಳ್ಳಾಲ್ ಶೀಲ್ಡ್ ಸೇರಿದಂತೆ ಹಲವು ರಾಜ್ಯಮಟ್ಟದ ನಾಟಕೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದರು.
ವಿದ್ಯಾಭ್ಯಾಸದ ನಂತರ ‘ಸಮತೆಂತೋ’ ರಂಗತಂಡದ ಪ್ರಮುಖ ನಾಟಕಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ವಿವಾಹದ ನಂತರ ಕೌಟುಂಬಿಕ ಜವಾಬ್ದಾರಿಗಳಿಂದಾಗಿ ಸುಮಾರು 35 ವರ್ಷಗಳ ಕಾಲ ರಂಗಭೂಮಿಯಿಂದ ದೂರವಿದ್ದರೂ ರಂಗಭೂಮಿಯ ಮೇಲಿದ್ದ ಅಪಾರ ಪ್ರೀತಿ ಹಾಗೂ ಬದ್ಧತೆಯಿಂದಾಗಿ 2010ರಲ್ಲಿ ಮೈಸೂರು ರಂಗಭೂಮಿಗೆ ಪ್ರವೇಶಿಸಿದರು.
ಕಳೆದ 15 ವರ್ಷಗಳಿಂದ ನಿರಂತರವಾಗಿ ಮೈಸೂರಿನ ರಂಗಕ್ಷೇತ್ರದಲ್ಲಿ ಮುಖ್ಯನಟಿಯಾಗಿ, ಸಂಘಟಕಿಯಾಗಿ ಮತ್ತು ಕಾರ್ಯಕರ್ತೆಯಾಗಿ ಶ್ರಮಿಸಿದರು. ಯಾವುದೇ ಪಾತ್ರ ನೀಡಿದರೂ ಅದರ ಪ್ರತಿಯೊಂದು ಸೂಕ್ಷ್ಮತೆಯನ್ನು ಗ್ರಹಿಸಿ ಜೀವ ತುಂಬುವ ಅಭಿನಯ ಅವರದ್ದು. ಅವರು ಅಭಿನಯಿಸಿ ಮೆಚ್ಚುಗೆ ಪಡೆದ ಕೆಲವು ಪ್ರಮುಖ ನಾಟಕಗಳು: ನೀರ್ಮಾದಳದ ಹೂವಿನೊಂದಿಗೆ... (ಲೇಖಕಿ ಕಮಲಾದಾಸ್ ಅವರ ಜೀವನವನ್ನಾಧರಿಸಿದ ಏಕವ್ಯಕ್ತಿ ಪ್ರದರ್ಶನ), ಭೂತಗಳು, ಹುಲಿಯ ನೆರಳು, ಅಂಧಗಾಂಧಾರ, ಪುರುಷಾರ್ಥ, ಬೇರಿಲ್ಲದವರು, ಕಾಕ್ಟೈಲ್ ಪಾರ್ಟಿ, ರುಡಾಲಿ, ಸೊನಾಟ, ಕದಡಿದ ನೀರು, ಮಾದ್ರಿಯ ಚಿತೆ, ಸ್ತ್ರೀ ಸಂಭ್ರಮ.
ಕನ್ನಡ ಮತ್ತು ಮಲಯಾಳಂ ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಹಾಗೂ ವಿಮರ್ಶಕರ ಮೆಚ್ಚುಗೆ ಗಳಿಸಿದ್ದಾರೆ.
* ಕಿರುಚಿತ್ರಗಳು: ‘ಕಾಕಪೂ’, ‘ಕಡಲಾಸಪೂ’ ಮತ್ತು ‘ಏಕಾಂತತ’. (ಇದರಲ್ಲಿ ‘ಕಾಕಪೂ’ ಮತ್ತು ‘ಕಡಲಾಸಪೂ’ ಕಿರುಚಿತ್ರಗಳ ನಿರ್ಮಾಣದ ಜವಾಬ್ದಾರಿಯನ್ನೂ ಅವರೇ ವಹಿಸಿಕೊಂಡಿದ್ದರು).
ಪ್ರಶಸ್ತಿ ಮತ್ತು ಪುರಸ್ಕಾರಗಳು:
* ಉತ್ತಮ ಪೋಷಕ ನಟಿ ಪ್ರಶಸ್ತಿ: ಕನ್ನಡದ ‘ಅವಲಕ್ಕಿ ಪವಲಕ್ಕಿ’ ಚಲನಚಿತ್ರದ ನಟನೆಗಾಗಿ.
* ಉತ್ತಮ ನಟಿ ಪ್ರಶಸ್ತಿ: ’ಕಡಲಾಸಪೂ’ ಕಿರುಚಿತ್ರದ ಅದ್ಭುತ ಅಭಿನಯಕ್ಕಾಗಿ. (ಈ ಚಿತ್ರ ಹಾಗೂ ‘ಕಾಕಪೂ’ ಕಿರುಚಿತ್ರಗಳು ಹಲವು ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಸಾಲು ಸಾಲು ಪ್ರಶಸ್ತಿಗಳನ್ನು ಬಾಚಿಕೊಂಡಿವೆ).
* ರಂಗ ಪ್ರಶಸ್ತಿಗಳು: ಕಾಲೇಜು ದಿನಗಳಲ್ಲೇ ’ಉಳ್ಳಾಲ್ ಶೀಲ್ಡ್’ ಸೇರಿದಂತೆ ವಿವಿಧ ನಾಟಕೋತ್ಸವಗಳಲ್ಲಿ ಅತ್ಯುತ್ತಮ ಅಭಿನಯಕ್ಕಾಗಿ ಪ್ರಶಸ್ತಿಗಳು.
ಅವರು ಮೈಸೂರಿನ ಸಮತೆಂತೊ ತಂಡದ ಸಕ್ರಿಯ ಸದಸ್ಯರಾಗಿದ್ದರು.
***
ಚಿದಂಬರ ರಾವ್ ಜಂಬೆ
ಇದೇ ಸೆಪ್ಟಂಬರ್ 12ರಂದು ಹಿರಿಯ ರಂಗಕರ್ಮಿ ಚಿದಂಬರ ರಾವ್ ಜಂಬೆ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ರೋಗಕ್ಕೆ ತುತ್ತಾದ 3-4 ತಿಂಗಳಲ್ಲೇ ತೀರಿಕೊಂಡರು.
ಸದಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಅವರು ಎನ್‌ಎಸ್‌ಡಿ ಪದವೀಧರರು. ಬಳಿಕ ಹೆಗ್ಗೋಡಿನ ನೀನಾಸಂ ಪ್ರಾಂಶುಪಾಲರಾಗಿ, ಕ್ಲಾಸಿಕ್ ನಾಟಕಗಳನ್ನು ನಿರ್ದೇಶಿಸುವುದರ ಜೊತೆಗೆ ನೂರಾರು ವಿದ್ಯಾರ್ಥಿಗಳಿಗೆ ರಂಗಭೂಮಿ ಕುರಿತು ಪಾಠ ಮಾಡಿ ರಂಗ ಕುಸುಮಗಳಾಗಿ ಅರಳುವಂತೆ ಶ್ರಮಿಸಿದರು. ನೀನಾಸಂ ನಂತರ ಮೈಸೂರು ರಂಗಾಯಣದ ನಿರ್ದೇಶಕರಾದರು. ಆನಂತರ ಸಾಣೇಹಳ್ಳಿ ಶಿವಕುಮಾರ ರಂಗಶಾಲೆಗೆ ಪ್ರಾಂಶುಪಾಲರಾಗಿ, ಬೆಂಗಳೂರಿನ ಎನ್‌ಎಸ್‌ಡಿ ನಿರ್ದೇಶಕರಾಗಿದ್ದರು. ಆಮೇಲೆ ನಾಟಕಗಳನ್ನು ನಿರ್ದೇಶಿಸುತ್ತ ಸಂಚರಿಸಿದರು.
ನಮ್ಮೊಳಗೇ ಗಾಂಧಿ ಮೌಲ್ಯಗಳು ಇರದಿದ್ದರೆ ಗಾಂಧೀಜಿ ಕಾಣುವುದಾದರೂ ಹೇಗೆ ಎಂದು ಪ್ರಶ್ನಿಸಿಕೊಂಡು ಶಿವಮೊಗ್ಗ ರಂಗಾಯಣಕ್ಕೆ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ ನಿರ್ದೇಶಿಸಿದರು.
ಅವರು ಪ್ರಸ್ತುತ ರಂಗಭೂಮಿ ಕುರಿತು ಮಾತಾಡಿದ್ದು ರಂಗಕಾಳಜಿಗೆ ಹಿಡಿದ ಕನ್ನಡಿ. ಅವರ ಮಾತುಗಳೊಂದಿಗೆ ಈ ಲೇಖನ ಮುಗಿಸುವೆ.
‘‘ನಮ್ಮ ಕರ್ನಾಟಕ ರಾಜ್ಯದಲ್ಲಿ ರಂಗಶಿಕ್ಷಣಕ್ಕಾಗಿ ಕೆಲವೇ, ಬೆರಳೆಣಿಕೆಯಷ್ಟು ರಂಗಶಾಲೆಗಳಿವೆ. ಕೆಲವು ರಂಗಶಾಲೆಗಳ ಪ್ರವೇಶಕ್ಕೆ ಪದವಿ ವಿದ್ಯಾರ್ಹತೆಯಾಗಿದ್ದರೆ ಅಪೇಕ್ಷಣೀಯ ಕೂಡ. ಕೆಲವು ರಂಗಶಾಲೆಗಳಿಗೆ ಪಿಯುಸಿ, ಎಸೆಸೆಲ್ಸಿ ವಿದ್ಯಾರ್ಹತೆಯಾಗಿದೆ. ಎಸೆಸೆಲ್ಸಿ ವಿದ್ಯಾರ್ಹತೆಯಾಗಿರುವ ರಂಗಶಾಲೆಗಳು ಸಣ್ಣಪುಟ್ಟ ಹಳ್ಳಿಗಳಿಂದ ಬರುವ ಪ್ರತಿಭೆಗಳಿಗೆ ಒಂದು ದೊಡ್ಡ ಅವಕಾಶವಾಗಿತ್ತು.
ಹಿಂದೆ ಸಮಾಜದ ಬೇರೆ ಬೇರೆ ಸ್ತರ, ವರ್ಗ, ಜಾತಿ, ಲಿಂಗಭೇದವಿಲ್ಲದೆ ಮತ್ತು ಆರ್ಥಿಕ ದುರ್ಬಲರೂ ರಂಗಶಿಕ್ಷಣ ಪಡೆಯುವಂತಹ ವಾತಾವರಣವಿತ್ತು. ಈಗೀಗ ರಂಗಶಾಲೆಗಳ ಪ್ರವೇಶ ಪೇಮೆಂಟ್ ಸೀಟುಗಳಾಗಿರುವುದರಿಂದ, ಗ್ರಾಮೀಣ ಪ್ರತಿಭೆಗಳು ಅವಕಾಶ ವಂಚಿತರಾಗುತ್ತಿದ್ದು, ನಿಜ ಕಲಾವಿದರಿಗೆ ರಂಗಶಿಕ್ಷಣ ಗಗನಕುಸುಮವಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ದಿಲ್ಲಿ ರಾಷ್ಟ್ರೀಯ ನಾಟಕ ಶಾಲೆಯಲ್ಲಿಯೂ ಉಚಿತ ಸೌಲಭ್ಯ ಕೊಡಬಾರದು ಎನ್ನುವ ಒಂದು ವಾದ ನಡೆಯುತ್ತಿದೆ.
ಹಾಗೊಮ್ಮೆ ಆರ್ಥಿಕ ಸೌಲಭ್ಯವಿಲ್ಲದೇ ಇದ್ದಿದ್ದರೆ ನನ್ನಂತಹ ಬಹಳ ಜನರಿಗೆ ರಾಷ್ಟ್ರೀಯ ನಾಟಕಶಾಲೆಯ ಪ್ರವೇಶ ಕನಸಾಗಿಯೇ ಉಳಿಯುತ್ತಿತ್ತು.
ಈ ದೇಶದ ಮೂಲೆ ಮೂಲೆಗೂ ರಾಷ್ಟ್ರೀಯ ನಾಟಕಶಾಲೆ ತಲುಪಿದ್ದರಿಂದಾಗಿ, ರಾಷ್ಟ್ರೀಯ ನಾಟಕ ಶಾಲೆ ಕೆಲವೇ ಜನ ಹಣವುಳ್ಳವರ ಮತ್ತು ನಗರಪ್ರದೇಶದವರ ಸೊತ್ತಾಗದೇ ಉಳಿದಿದ್ದು. ಹಾಗೆಯೇ ಉಳಿಯಲಿ ಎಂದು ಹಾರೈಸುತ್ತೇನೆ.
ಒಂದು ಕಾಲದಲ್ಲಿ ಹಳ್ಳಿಗಾಡಿನ ಜನಸಾಮಾನ್ಯರೂ ಹವ್ಯಾಸಿ ರಂಗಭೂಮಿಯಲ್ಲಿ ಕೆಲಸ ಮಾಡಿ ಅನುಭವ ಹೊಂದಿದ ಪ್ರತಿಭಾವಂತರು, ಪ್ರವೇಶ ಪಡೆಯುತಿದ್ದರು.
ನನ್ನ ಕಣ್ಣಮುಂದೆ ಎಷ್ಟೋ ಜನ ಕಲಾವಿದರು ಬೆಳೆದಿದ್ದಾರೆ, ರಂಗಭೂಮಿ ಕ್ಷೇತ್ರವನ್ನೂ ಬೆಳಗುತ್ತಿದ್ದಾರೆ.
ಈಗೀಗ ಹಳ್ಳಿಗಾಡಿನ ಕಲಾವಿದರಿಗೆ ಮೊದಲಿನ ಹಾಗೆ ಹವ್ಯಾಸಿ ರಂಗಚಟುವಟಿಕೆ ಅನುಭವ ಇಲ್ಲದಿರುವುದು ಒಂದು ಕೊರತೆಯಾಗಿದೆ.
ನಿಜ ಪ್ರತಿಭೆಗಳಿಗೆಗೆ ಪ್ರವೇಶಾವಕಾಶಗಳು ದುರ್ಲಭವಾಗುತ್ತಿವೆ. ಆರ್ಥಿಕ ಶಕ್ತಿ ಉಳ್ಳವರು ಮತ್ತು ಸಾಫ್ಟ್‌ವೇರ್ ಮತ್ತಿತರ ಪದವೀಧರರು ಆ ಜಾಗಕ್ಕೆ ಪ್ರವೇಶಿಸುವಂತಾಗಿ, ಹಣಬಲವಿಲ್ಲದ, ಹೆಚ್ಚಿನ ವ್ಯಾಸಂಗವಿಲ್ಲದ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಡಿಮೆಯಾಗುತ್ತಿದೆ.’’
(ಅಂಕಣಕಾರರು ಹಿರಿಯ ಪತ್ರಕರ್ತ, ರಂಗಕರ್ಮಿ)