ಹಿರಿಯ ರಂಗಕರ್ಮಿ ಬಿ. ಸುರೇಶ ಅವರ ಹೊಸ ಕೃತಿ ಸಡಗರಕೆ ಸಾವಿಲ್ಲ. ಇದು ರಂಗಭೂಮಿ ಕುರಿತ ಲೇಖನಗಳ ಸಂಕಲನ. ಸುಂದರ ಮುದ್ರಣದೊಂದಿಗೆ ಪ್ರಕಟಗೊಂಡ ಈ ಕೃತಿ ರಂಗಭೂಮಿ ಕುರಿತು ದಾಖಲಿಸುತ್ತದೆ. ಇದಕ್ಕಾಗಿ ಬಿ.ಸುರೇಶ ಅವರನ್ನು ಅಭಿನಂದಿಸುವೆ.

ಕೃತಿಯ ಆರಂಭದಲ್ಲಿ ಅವರು ‘ಸಡಗರಕೆ ಸಾವಿಲ್ಲ’ ಎಂದು ಯಾಕೆ ಶೀರ್ಷಿಕೆ ಕೊಟ್ಟೆ ಎನ್ನುವುದನ್ನು ಹೀಗೆ ವಿವರಿಸಿದ್ದಾರೆ; ‘ಅದು ರಂಗಭೂಮಿಯ ಸಂದರ್ಭದಲ್ಲಿ ಸದಾ ಸತ್ಯ ಎನಿಸುವ ಮಾತು. ಇಲ್ಲಿ ಪ್ರತೀ ಪ್ರದರ್ಶನ, ಪ್ರತೀ ಪ್ರಯೋಗಕ್ಕೆ ಮಾಡುವ ಸಿದ್ಧತೆಗಳು ಸಡಗರದಿಂದಲೇ ಆಗುತ್ತವೆ. ಪ್ರದರ್ಶನ ಮಂದಿರಗಳು ಪ್ರತೀ ಸಂಜೆ ಸಡಗರಕ್ಕೆ ಸಿದ್ಧವಾಗುತ್ತವೆ. ಪ್ರತೀ ಕಲಾವಿದ ತನ್ನೆಲ್ಲ ಸಂಕಟಗಳನ್ನು, ಸವಾಲುಗಳನ್ನು ಮರೆತು ತನ್ನ ಸಂಪೂರ್ಣ ಶಕ್ತಿಯನ್ನು ಪಾತ್ರಕ್ಕೆ ಧಾರೆಯೆರೆದು ಸಡಗರದಿಂದ ಸಿದ್ಧವಾಗುತ್ತಾನೆ. ನೋಡಲು ಬರುವ ಪ್ರೇಕ್ಷಕರು ಕೂಡ ಸಹಪ್ರೇಕ್ಷಕರನ್ನು ಕಂಡು ಮುಖದ ತುಂಬ ನಗು ತುಂಬಿಕೊಂಡು ಮಾತಾಡುತ್ತಾ, ಸಡಗರದಿಂದಲೇ ಅಂಗಳಕ್ಕೆ ಬರುತ್ತಾರೆ. ಈ ಎಲ್ಲರ ಸಡಗರದ ಜೊತೆಗೆ ಆಯಾದಿನದ ಆಟವೂ ಸಡಗರವನ್ನು ತನ್ನ ಕಥನದ ಮೂಲಕ ಹಂಚುತ್ತದೆ. ಇವೆಲ್ಲಾ ಸಡಗರದ ಮೂಲಕವೇ ನಾಟಕ ಮಾಡುವವರಲ್ಲಿ ಮತ್ತು ನೋಡುಗರಲ್ಲಿ ಏಕಕಾಲಕ್ಕೆ ಹಲವು ಹೊಸ ಅನುಭವ, ಅನುಭಾವಗಳನ್ನು ಬಿತ್ತುವ ರಂಗಭೂಮಿಯು ಎಂದೆಂದಿಗೂ ಚಿರಂಜೀವ ಆಗಿರುತ್ತದೆ. ಹಾಗಾಗಿ ‘ಸಡಗರಕೆ ಸಾವಿಲ್ಲ’ ಎಂಬ ನುಡಿಗಟ್ಟು ಕೇವಲ ಈ ಪುಸ್ತಕಕ್ಕೆ ಮಾತ್ರವಲ್ಲ, ಒಟ್ಟು ರಂಗಭೂಮಿಯ ಹಿನ್ನೆಲೆಯಲ್ಲಿ ಸದಾಕಾಲವೂ ಜೀವಂತವಾಗಿರುವಂತಹ ಮಾತು’

ಈ ಕೃತಿಯಲ್ಲಿ ರಂಗಚಿಂತನೆ, ರಂಗವಿಮರ್ಶೆ, ಮುನ್ನುಡಿ-ಹಿನ್ನುಡಿ, ವ್ಯಕ್ತಿಚಿತ್ರ, ಪ್ರಶ್ನೋತ್ತರ, ದಿನಚರಿ ಎಂಬ ಐದು ಭಾಗಗಳಿವೆ. ಮೊದಲ ಭಾಗದಲ್ಲಿರುವ ಮೊದಲ ಲೇಖನ ‘ಆರೋಗ್ಯಕರ ಸಮಾಜ ದೃಷ್ಟಿಯಲ್ಲಿ ರಂಗ ಸಂಘಟನೆಯ ಪಾತ್ರ’ ಗಮನಾರ್ಹ. ಮಕ್ಕಳ ರಂಗಭೂಮಿಯಲ್ಲಿ, ಬಡಾವಣೆ ರಂಗಭೂಮಿಯಲ್ಲಿ, ರೆಪರ್ಟರಿ ಮತ್ತು ವೃತ್ತಿಪರ ರಂಗತಂಡಗಳಲ್ಲಿ ಹೇಗೆ ಸಂಘಟನೆ ಇದೆ ಎಂಬುದನ್ನು ವಿವರಿಸಿದ್ದಾರೆ. ‘ಆದರೆ ಆ ಬಗೆಯ ವಿಷಯಗಳನ್ನು ಕಲಿಸಲು ನಮ್ಮಲ್ಲಿರುವ ರಂಗಶಾಲೆಗಳಲ್ಲಿ ಅಗತ್ಯ ಪಠ್ಯ ಮತ್ತು ಬೋಧಕರು ಇದ್ದಾರೆಯೇ ಎಂಬುದು ಮತ್ತೊಂದು ಮುಖ್ಯಪ್ರಶ್ನೆ. ಈ ಬಗೆಯ ಪ್ರಶ್ನೆಗಳನ್ನು ಮತ್ತೆ ಮತ್ತೆ ನಾವೇ ಹಾಕಿಕೊಳ್ಳುತ್ತಾ, ಅವುಗಳಿಗೆ ಉತ್ತರ ಹುಡುಕುತ್ತಾ ರಂಗಚಳವಳಿಯನ್ನು ಚೇತೋಹಾರಿಯಾಗಿ ಉಳಿಸಿಕೊಳ್ಳೋಣ’ ಎನ್ನುವ ಅವರ ಸಲಹೆ ಗಮನಿಸಬೇಕು.

ಎರಡನೆಯ ಲೇಖನ ‘ಓ! ನಾ ಕಂಡೆನಲ್ಲಾ? ಹಾಗಾಗಿ’ ಇದು ರಂಗಭೂಮಿಗಾಗಿ ಬರೆಯುವವರನ್ನು ಉದ್ದೇಶಿಸಿದೆಯಾದರೂ ಕಿರುತೆರೆ ಹಾಗೂ ಹಿರಿತೆರೆಗಾಗಿ ಬರೆಯುವವರಿಗೂ ಉಪಯುಕ್ತವಾಗುವುದು. ನಾಟಕಕಾರ ಎಂದರೆ? ನಾಟಕಕಾರನ ದೃಷ್ಟಿಯಲ್ಲಿ ನಟ ಎಂದರೆ? ನಾಟಕಕಾರ ಮತ್ತು ನೋಡುಗನ ಸಂಬಂಧ? ನಿರ್ದೇಶಕನ ಕೆಲಸವೇನು? ಏನು ಬರೆಯಬೇಕು ಮೊದಲಿಗೆ? ಮೂರರ ಆಟ, ರೆ ಎಂಬ ಮೊದಲ ಹೆಜ್ಜೆ, ರೆ ನಂತರದ ಪಯಣ, ಕಥನ-ಅನುಕ್ರಮಣಿಕೆ, ಮಾಹಿತಿ ಬಿಡುಗಡೆ ಎಂಬ ಜಾದು, ಅವಧಿ ಎಂಬ ಮಾಯಕ, ಮಾತು ಎಂಬ ಅಚ್ಚರಿ, ಆಯ್ಕೆ ಎಂಬ ಹಳವಂಡ, ವಂದರಿಯಾಟ, ರಂಗಭಾಷೆ ಎಂಬ ಬೃಹತ್ ಸಾಗರ, ನಾಟಕವನ್ನು ಆರಂಭಿಸುವುದು ಹೇಗೆ? ಸ್ಫೋಟವೆಂದು ಗುರುತಿಸಲಾಗುವ ತಿರುವುಗಳು, ಲಯಗಳ ನಡುವೆ, ವಿಮಾನ ನೆಲ ಮುಟ್ಟಿಸುವುದು ಹೇಗೆಂಬ ಸಂಕಟ, ಆಯ್ಕೆಗಳ ರಾಜಕೀಯ ಮತ್ತು ನಾಟಕಕಾರನ ನಿಲುವು ಎನ್ನುವ ಉಪಶೀರ್ಷಿಕೆಗಳ ಮೂಲಕ ಅನೇಕ ಹೊಳಹುಗಳನ್ನು ದಾಖಲಿಸಿದ್ದಾರೆ. ನಂತರ ದೃಶ್ಯಮಾಧ್ಯಮದಲ್ಲಿ ನಿರಂಜನರ ಕೃತಿಗಳು, ನನ್ನ ನೆನಪಿನಲ್ಲಿ ಸಮುದಾಯದ ನಾಲ್ಕು ದಶಕ, ಮೂವತ್ತಾದರೂ ಮುಪ್ಪಾಗದ ರಂಗಪ್ರಯೋಗಗಳು, ಕನ್ನಡ ರಂಗಭೂಮಿ ಮತ್ತು ಕನ್ನಡ ಪತ್ರಿಕೋದ್ಯಮ, ಟೆಲಿವಿಷನ್ ಎಂಬ ದೈತ್ಯನು ಮತ್ತು ರಂಗಭೂಮಿ ಎಂಬ ಚಿರಂಜೀವನು, ಎಚ್ಚೆಸ್ವಿ ನಾಟಕ ಲೋಕ, ಘನತೆಯ ಬದುಕು ಸೃಷ್ಟಿಸಲು ಸಾಂಸ್ಕೃತಿಕ ಮಧ್ಯಪ್ರವೇಶ ಸಾಕೆ? ಲೇಖನಗಳಿವೆ.

ಇವುಗಳಲ್ಲಿ ಕನ್ನಡ ರಂಗಭೂಮಿ ಮತ್ತು ಕನ್ನಡ ಪತ್ರಿಕೋದ್ಯಮ ಲೇಖನದ ಕೊನೆಗೆ ‘ಆಧುನಿಕ ರಂಗಭೂಮಿಯು ಹುಟ್ಟಿದ ಅವಧಿಯಲ್ಲಿಯೇ ಉಚ್ಛ್ರಾಯಕ್ಕೆ ಬಂದ ಪತ್ರಿಕೋದ್ಯಮವು ತನ್ನ ಸೋದರನಂತೆ ರಂಗಭೂಮಿಯನ್ನು ಪೋಷಿಸುವ ಪ್ರಯತ್ನ ಮಾಡಿದ್ದು ಹೌದಾದರೂ ಇಂದು ಪತ್ರಿಕೋದ್ಯಮವೇ (ಮುದ್ರಣ ಮಾಧ್ಯಮ) ಸ್ವತಃ ದೊಡ್ಡ ಸ್ಪರ್ಧೆಯನ್ನು ಎದುರಿಸುತ್ತಾ ಇರುವುದರ ಹಿನ್ನೆಲೆಯಲ್ಲಿ ರಂಗಭೂಮಿ ಎದುರಿಸುತ್ತಾ ಇರುವುದಕ್ಕಿಂತ ದೊಡ್ಡ ಸಂಕಷ್ಟಗಳಿಗೆ ಸ್ವತಃ ಪತ್ರಿಕೋದ್ಯಮ ಸಿದ್ಧವಾಗಬೇಕಾದ ಅಗತ್ಯವಿದೆ. ಎಲ್ಲಾ ಹೊಸ ಸ್ಪರ್ಧೆಗಳ ನಡುವೆ ಈ ಎರಡೂ ಮಾಧ್ಯಮಗಳು ಕನ್ನಡಿಗರ ಬದುಕನ್ನು ವರ್ಣರಂಜಿತಗೊಳಿಸುವ ಪ್ರಯತ್ನವನ್ನಂತೂ ಸದಾ ಚಾಲ್ತಿಯಲ್ಲಿಟ್ಟಿವೆ’ ಎನ್ನುವ ವಾಸ್ತವವನ್ನು ಹಿಡಿದಿಟ್ಟಿದ್ದಾರೆ.

ನಂತರದ ಭಾಗದಲ್ಲಿ ನಾಟಕಗಳ ಕುರಿತು ಅವಲೋಕನವಿದೆ. ವ್ಯಕ್ತಿಚಿತ್ರಣಗಳಿವೆ. ಕೊನೆಗೆ ಬ್ರಿಟಿಷ್ ಕೌನ್ಸಿಲ್ ಸಂಸ್ಥೆಯವರು ನಡೆಸುವ ಎಡಿನ್ಬರಾ ಉತ್ಸವದಲ್ಲಿ ಪಾಲ್ಗೊಂಡ ಬಳಿಕ ಬರೆದ ‘ಎಡಿನ್ಬರಾ ದಿನಚರಿ’ ವಿಶಿಷ್ಟ ಲೇಖನ. ಇದು ಕೇವಲ ದಿನಚರಿಯಲ್ಲ. ನಾಟಕ ನೋಡಿದ, ಒಡನಾಡಿದ ಕುರಿತು ಕುತೂಹಲಕಾರಿಯಾಗಿ ಸುರೇಶ ಅವರು ಬರೆದಿದ್ದಾರೆ.

ರಂಗಭೂಮಿ ಕುರಿತು ಬರೆಯುವರು, ಬರೆದುದನ್ನು ದಾಖಲಿಸುವವರು ಕಡಿಮೆ. ಇಂಥ ಅಪರೂಪರಲ್ಲಿ ಸುರೇಶ ಕೂಡಾ ಒಬ್ಬರು. ಅವರ ಈ ಕೃತಿಯು ರಂಗಾಸಕ್ತರಿಗೆ, ರಂಗಕರ್ಮಿಗಳಿಗೆ ಮುಖ್ಯವಾಗಿ ರಂಗಭ್ಯಾಸಿಗಳಿಗೆ ಅದರಲ್ಲೂ ಹೊಸ ತಲೆಮಾರಿನವರಿಗೆ ಉಪಯುಕ್ತವಾಗಲಿದೆ.

(ಅಂಕಣಕಾರರು ಹಿರಿಯ ಪತ್ರಕರ್ತ, ರಂಗಕರ್ಮಿ)

ಪುಸ್ತಕ: ಸಡಗರಕೆ ಸಾವಿಲ್ಲ

ಲೇಖಕ: ಬಿ.ಸುರೇಶ

ಪ್ರಕಾಶನ: ಕಾನ್ಕೇವ್ ಮಾಧ್ಯಮ ಮತ್ತು ಪ್ರಕಾಶನ

ಬೆಲೆ: ರೂ.480

ಪುಟಗಳು: 388

ಮೊದಲ ಮುದ್ರಣ: 2026

ಸಂಪರ್ಕ ಸಂಖ್ಯೆ:

ನಂದೀಶ್- 9902590303

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಗಣೇಶ ಅಮೀನಗಡ

contributor