ರಂಗದ ಮೇಲೆ ಮತ್ತೆ ‘ತುಘಲಕ್’ ನಾಟಕ
ಗಿರೀಶ್ ಕಾರ್ನಾಡ್ ಅವರ ತುಘಲಕ್ ನಾಟಕವನ್ನು ಸಿ.ಆರ್.ಸಿಂಹ ನಿರ್ದೇಶಿಸಿದ್ದರು. ತುಘಲಕ್ ಪಾತ್ರವನ್ನು ಅವರೇ ನಿರ್ವಹಿಸುತ್ತಿದ್ದರು. ಈ ನಾಟಕ ಹಿಂದೆ 500ಕ್ಕೂ ಅಧಿಕ ಪ್ರದರ್ಶನ ಕಂಡಿತ್ತು.
ಕನ್ನಡ ರಂಗಭೂಮಿಗೆ ನಾಟಕಗಳ ಮೂಲಕ ಮಹತ್ವದ ಕಾಣಿಕೆ ನೀಡಿದ್ದು ನಟ ಸಿ.ಆರ್. ಸಿಂಹ. ಅದು ತಮ್ಮ ವೇದಿಕೆ ಫೌಂಡೇಷನ್ ಮೂಲಕ. 1983ರಲ್ಲಿ ‘ಟಿಪಿಕಲ್ ಟಿ.ಪಿ.ಕೈಲಾಸಂ’ ನಾಟಕದ ಮೂಲಕ ಆರಂಭವಾದ ವೇದಿಕೆ ಸಂಸ್ಥೆಯು ರಾಜ್ಯವಲ್ಲದೆ ದೇಶ-ವಿದೇಶದಲ್ಲೂ ನಾಟಕಗಳ ಮೂಲಕ ಮಿಂಚಿತು. ಮುಖ್ಯವಾಗಿ ಸಿಂಹ ಅವರ ಪತ್ನಿ ಶಾರದಾ ಅವರೂ ಕಲಾವಿದರು. ಅವರೊಂದಿಗೆ ಆರಂಭಿಸಿದ ವೇದಿಕೆ ಮೂಲಕ ನೂರಾರು ಕಲಾವಿದರು ರೂಪುಗೊಂಡರು.
ಟಿಪಿಕಲ್ ಟಿ.ಪಿ.ಕೈಲಾಸಂ, ಭೈರವಿ, ರಸಋಷಿ ಕುವೆಂಪು, ಅಗ್ನಿ ಮತ್ತು ಮಳೆ, ಮ್ಯಾಕ್‌ಬೆತ್, ಡ್ರೀಂ, ಮದುವೆ ಮದುವೆ, ಹಾವು-ಏಣಿ, ಬಹದ್ದೂರ್ ಗಂಡ... ಹೀಗೆ ವೇದಿಕೆಯ ನಾಟಕಗಳು ಪ್ರಸಿದ್ಧವಾದವು. 1986ರಲ್ಲಿ ಅಮೆರಿಕ, ಕೆನಡಾ, ಇಂಗ್ಲೆಂಡ್ ದೇಶದಾದ್ಯಂತ ಮೊದಲ ಬಾರಿಗೆ ವೇದಿಕೆ ಮೂಲಕ ನಾಟಕಗಳು ಪ್ರದರ್ಶನಗೊಂಡವು. ನಂತರ 1993, 1994 ಹಾಗೂ 2003ರಲ್ಲೂ ಅಮೆರಿಕ, ಇಂಗ್ಲೆಂಡ್, ಸಿಂಗಾಪುರ ಹಾಗೂ ಗಲ್ಫ್ ದೇಶಗಳಲ್ಲಿ ನಾಟಕಗಳ ಪ್ರದರ್ಶನ ನೀಡಿದ ಹೆಗ್ಗಳಿಕೆ ವೇದಿಕೆಯದು. ಮುಖ್ಯವಾಗಿ 2001ರಲ್ಲಿ ವೇದಿಕೆ ರಂಗಮಾಲಿಕೆ ಎಂಬ ವಾರಾಂತ್ಯ ಪ್ರದರ್ಶನ ನೀಡುವ ಯೋಜನೆ ಕೈಗೆತ್ತಿಕೊಳ್ಳಲಾಯಿತು. ಸತತವಾಗಿ 25 ವಾರ ವಾರಾಂತ್ಯ ನಾಟಕಗಳನ್ನು ಪ್ರದರ್ಶಿಸುವ ಮೂಲಕ ವೇದಿಕೆ ತಂಡವು ದಾಖಲೆ ಬರೆಯಿತು. ಅಲ್ಲದೆ ವೇದಿಕೆ ಟೆರೇಸ್ ಥಿಯೇಟರ್ (ಮನೆ ತಾರಸಿಗಳಲ್ಲಿ ಪ್ರದರ್ಶನ), ವೇದಿಕೆ ಮಾತುಕತೆ (ಖ್ಯಾತ ಕಲಾವಿದರೊಂದಿಗೆ ಆಪ್ತ ಸಮಾಲೋಚನೆ), ವೇದಿಕೆ ಚಿತ್ರಕೂಟ (ಚಲನಚಿತ್ರ ವೀಕ್ಷಣೆ), ವೇದಿಕೆ ಶಿಬಿರಗಳು... ಹೀಗೆ ಹಲವಾರು ವಲಯಗಳಲ್ಲಿ ವೇದಿಕೆ ಕಾರ್ಯ ನಿರ್ವಹಿಸುತ್ತಿದೆ. ಇದನ್ನೆಲ್ಲ ಸಿ.ಆರ್.ಸಿಂಹ ಅವರಿದ್ದಾಗ ಕೈಗೊಂಡವು.
ಗಿರೀಶ್ ಕಾರ್ನಾಡ್ ಅವರ ತುಘಲಕ್ ನಾಟಕವನ್ನು ಸಿ.ಆರ್.ಸಿಂಹ ನಿರ್ದೇಶಿಸಿದ್ದರು. ತುಘಲಕ್ ಪಾತ್ರವನ್ನು ಅವರೇ ನಿರ್ವಹಿಸುತ್ತಿದ್ದರು. ಈ ನಾಟಕ 500ಕ್ಕೂ ಅಧಿಕ ಪ್ರದರ್ಶನ ಕಂಡಿತ್ತು. ಅವರೊಂದಿಗೆ ಶೇಕ್ ಇಮಾಮುದ್ದಿನ್ ಪಾತ್ರವನ್ನು ಅವರ ಪುತ್ರ ಋತ್ವಿಕ್ ಸಿಂಹ ನಿರ್ವಹಿಸುತ್ತಿದ್ದರು. ಮತ್ತೆ ಆರೇಳು ವರ್ಷಗಳ ಹಿಂದೆ ಬೆಂಗಳೂರಲ್ಲಿ ತುಘಲಕ್ ನಾಟಕ ಪ್ರದರ್ಶಿಸಲು ಆರಂಭಿಸಿದವರು ಋತ್ವಿಕ್. ಇದರಲ್ಲಿ ತುಘಲಕ್ ಪಾತ್ರಕ್ಕೆ ಋತ್ವಿಕ್ ಸಿಂಹ ಬಣ್ಣ ಹಚ್ಚುತ್ತಿದ್ದಾರೆ. ರೋಹಿತ್ ಶ್ರೀನಾಥ್ ಅವರು ಅಝೀಝ್ ಪಾತ್ರಧಾರಿಯಾಗಿದ್ದಾರೆ. ರೋಹಿತ್ ಅವರು ನಟ ಶ್ರೀನಾಥ್ ಅವರ ಪುತ್ರ. ಶ್ರೀನಾಥ್ ಅವರು ಸಿ.ಆರ್.ಸಿಂಹ ಅವರ ಸೋದರ. ಇವರು ಮೈಸೂರಿನವರು.
‘‘ತಂದೆಯವರು 2014ರಲ್ಲಿ ಕಾಲವಾದ ಮೇಲೆ ಅವರ ಕೆಲವು ನಾಟಕಗಳನ್ನು ಜೀವಂತವಾಗಿಡಲು ಪ್ರಯತ್ನಿಸಿದೆವು. ಅವರು ನಿರ್ದೇಶಿಸಿದ ಮಾಸ್ತಿಯವರ ಕಾಕನಕೋಟೆ, ತಂದೆಯವರೇ ರಚಿಸಿ, ನಿರ್ದೇಶಿಸಿದ್ದ ಭೈರವಿ, ಅವರು ಕೊನೆಗೆ ಬರೆದ ಜೈ ಹೋ ರತ್ನ ನಾಟಕವನ್ನು ಅವರೇ ನಿರ್ದೇಶಿಸುವಾಗ ನಿಧನರಾದರು. ಇದು ಜಿ.ಪಿ.ರಾಜರತ್ನಂ ಅವರ ರತ್ನನ ಪದಗಳು ಕೃತಿ ಆಧಾರಿತವಾದುದು. ಈ ನಾಟಕವನ್ನೂ ಪ್ರದರ್ಶಿಸಿದ್ದೇವೆ’’ ಎನ್ನುವ ಹೆಮ್ಮೆ ಋತ್ವಿಕ್ ಅವರದು.
‘‘ಸಿನೆಮಾ, ಸೀರಿಯಲ್ ದಾಖಲೆಯಾಗಿ ಉಳಿಯುತ್ತವೆ. ಆದರೆ ನಾಟಕ ಮತ್ತೆ ಮತ್ತೆ ಪ್ರದರ್ಶನಗೊಂಡರೆ ಮಾತ್ರ ಜೀವಂತವಾಗಿಡಲು ಸಾಧ್ಯ ಜೊತೆಗೆ ಪ್ರಸ್ತುತವಾಗಿರುವ ಕಾರಣ ಪ್ರದರ್ಶನಕ್ಕೆ ಮುಂದಾಗಿದ್ದೇವೆ. ಮೈಸೂರಿನ ನಟನದಲ್ಲಿ ಸೆಪ್ಟಂಬರ್ 27ರಂದು ರವಿವಾರ ಸಂಜೆ 6:30ಕ್ಕೆ ತುಘಲಕ್ ನಾಟಕ ಪ್ರದರ್ಶನಗೊಳ್ಳುತ್ತಿರುವುದು 20ನೆಯದು’’ ಎನ್ನುತ್ತಾರೆ ಋತ್ವಿಕ್. ಈ ನಾಟಕದ ನಿರ್ಮಾಣ, ವೇಷಭೂಷಣ, ಧ್ವನಿವಿನ್ಯಾಸ ಜಸ್ಲೀನ್ ಅವರದು. ಅವರು ಋತ್ವಿಕ್ ಪತ್ನಿ.
ಇದರೊಂದಿಗೆ ಪರ್ವತವಾಣಿ ಅವರ ‘ಬಹದ್ದೂರ್ ಗಂಡ’ ನಾಟಕವನ್ನು ಜಸ್ಲೀನ್ ನಿರ್ದೇಶಿಸಿದ್ದಾರೆ. ಇದು ಈಗಾಗಲೇ 25-30 ಪ್ರದರ್ಶನಗಳನ್ನು ಕಂಡಿದೆ. ಋತ್ವಿಕ್ ಅವರ ನಿರ್ದೇಶನದಲ್ಲಿ ಟಿ.ಎನ್.ಸೀತಾರಾಮ್ ಅವರ ಆಸ್ಫೋಟ, ಕೈಲಾಸಂ ಅವರ ನಂಕಂಪ್ನಿ ನಾಟಕಗಳು ಪ್ರದರ್ಶನಗೊಳ್ಳುತ್ತಲೇ ಇವೆ. ಈ ಹಿಂದೆ ಷೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್, ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಹೀಗೆ ಅವರ ವೇದಿಕೆ ತಂಡದ ಮೂಲಕ ಸುಮಾರು 35 ನಾಟಕಗಳು ಮೂರು ಸಾವಿರ ಪ್ರದರ್ಶನಗಳನ್ನು ಕಂಡಿವೆ.
ಕಳೆದ ಮೂರು ವರ್ಷಗಳಿಂದ ವೇದಿಕೆ ನಾಟಕ ಶಾಲೆ ಶುರುವಾಗಿದ್ದು, ರಂಗಭೂಮಿ ಕುರಿತು ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಿದ್ದಾರೆ. ಇದು ಎರಡು ವರ್ಷದ ಕೋರ್ಸ್. ಈಗಾಗಲೇ ಎರಡು ಬ್ಯಾಚಿನ ವಿದ್ಯಾರ್ಥಿಗಳು ಹೊರಬಂದಿದ್ದಾರೆ. ಇದು ಸಂಪೂರ್ಣ ಉಚಿತ. ‘‘ಹೊಸತ ಲೆಮಾರಿನವರು ರಂಗಭೂಮಿಗೆ ಬರಬೇಕು, ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಯಾವುದೇ ಶುಲ್ಕ ತೆಗೆದುಕೊಳ್ಳದೆ ರಂಗಭೂಮಿ ಕುರಿತು ತರಬೇತಿ ನೀಡುವುದರ ಜೊತೆಗೆ ನಾಟಕಗಳಲ್ಲೂ ಅವಕಾಶ ನೀಡುತ್ತೇವೆ. ಇಷ್ಟು ವರ್ಷಗಳವರೆಗೆ ವೇದಿಕೆ ಸಂಸ್ಥೆಯು ನಡೆದು ಬಂದುದಕ್ಕೆ ಕೊಟ್ಟ ಕಾಣಿಕೆ ಎನ್ನಬಹುದು. ಹಾಗೆಯೇ ಎಲ್ಲ ಯುವತಲೆಮಾರಿನವರಿಗೆ ಶುಲ್ಕ ಭರಿಸಿ ರಂಗಭೂಮಿ ತರಬೇತಿ ಪಡೆಯಲು ಸಾಧ್ಯವಾಗದು. ಅಂಥವರಿಗೂ ನೆರವಾಗಲಿ ಎನ್ನುವ ಉದ್ದೇಶವಿದೆ’’ ಎನ್ನುವ 51 ವರ್ಷ ವಯಸ್ಸಿನ ಋತ್ವಿಕ್ ಅವರು ಸಂಪೂರ್ಣವಾಗಿ ರಂಗಭೂಮಿಗೇ ತೊಡಗಿಸಿಕೊಂಡಿದ್ದಾರೆ. ಇದರೊಂದಿಗೆ ಇನ್ನು ಮುಂದೆ ವೇದಿಕೆ ತಂಡವನ್ನು ರೆಪರ್ಟರಿಯಾಗಿ ರೂಪಿಸಿ, ರಾಜ್ಯದಾದ್ಯಂತ ಸುತ್ತಾಟ ಮಾಡಲು ಸಿದ್ಧವಾಗುತ್ತಿದ್ದಾರೆ.
ಸಿ.ಅರ್.ಸಿಂಹ ಅವರ ತುಘಲಕ್, ರಸಋಷಿ ಕುವೆಂಪು ಅವರ ಪಾತ್ರಗಳನ್ನು ನೋಡಿದವರು ಮರೆಯಲಾಗದು. ಹಾಗೆಯೇ ಋತ್ವಿಕ್ ಕೂಡಾ ಗಟ್ಟಿ ಕಲಾವಿದರು. ಜೊತೆಗೆ ಬದ್ಧತೆಯಿಂದ ರಂಗಭೂಮಿಯಲ್ಲಿ ದುಡಿಯುತ್ತಿರುವವರು. ಅವರಿಗೆ ಸಾಥಿಯಾಗಿ ಅವರ ಪತ್ನಿ ಜಸ್ಲೀನ್ ಹಾಗೂ ರೋಹಿತ್ ಶ್ರೀನಾಥ್ ಇದ್ದಾರೆ.
(ಅಂಕಣಕಾರರು ಹಿರಿಯ ಪತ್ರಕರ್ತ, ರಂಗಕರ್ಮಿ)