ಬದುಕಿನ ಮೌಲ್ಯಗಳನ್ನು ಸಾರುವ ‘ಚಾರು ವಸಂತ’
ನಾಡೋಜ ಹಂಪನಾ ವಿರಚಿತ ಕಾವ್ಯ ಕಥನ ‘ಚಾರು ವಸಂತ’ ಒಂದು ಅಮೋಘವಾದ ಕೃತಿ. 16 ಭಾಷೆಗಳಿಗೆ ಅನುವಾದಗೊಂಡಿರುವ ಈ ಕೃತಿಯ ಕಥಾ ವಸ್ತು ಎಲ್ಲ ಕಾಲಕ್ಕೂ ಸಲ್ಲುವಂತಹದ್ದು. ಈ ಮಹಾಕಾವ್ಯವನ್ನು ಡಾ. ನಾ. ದಾಮೋದರ ಶೆಟ್ಟಿ ಅವರು ನಾಟಕಕ್ಕೆ ರೂಪಾಂತರಿಸಿದ್ದಾರೆ. ಒಂದು ಬೃಹತ್ ಕೃತಿಯ ಕಥಾ ವಸ್ತುವನ್ನು ಎರಡು ಗಂಟೆಯ ಅವಧಿಯ ನಾಟಕಕ್ಕೆ ಅಳವಡಿಸುವುದು ಸವಾಲಿನ ಕೆಲಸವೇ ಸರಿ.
ಅಷ್ಟೈಶ್ವರ್ಯ ತುಂಬಿ ತುಳುಕುವ ವೈಶ್ಯ ಮನೆತನದಲ್ಲಿ ಜನ್ಮ ತಳೆದ ಚಾರುದತ್ತನೆಂಬ ಯುವಕನ ಜೀವನದಲ್ಲಿ ಇನ್ನಿಲ್ಲದಂತಹ ಆಟವಾಡುತ್ತದೆ ವಿಧಿ. ನಾಲ್ಕು ಆಶ್ರಮಗಳಾದ ಬ್ರಹ್ಮಚರ್ಯೆ, ಗೃಹಸ್ಥ, ವಾನಪ್ರಸ್ಥ ಹಾಗೂ ಸನ್ಯಾಸಗಳು ವಿಭಿನ್ನ ಗುರಿ ಮತ್ತು ಜವಾಬ್ದಾರಿಗಳನ್ನು ಸೂಚಿಸುತ್ತವೆ. ಆಯಾ ವಯೋಮಾನದಲ್ಲಿ ಇವುಗಳನ್ನು ಸರಿಯಾಗಿ ನಿಭಾಯಿಸದೆ ಹೋದಲ್ಲಿ ವೈಯಕ್ತಿಕ ಬದುಕಷ್ಟೇ ಅಲ್ಲ, ಕುಟುಂಬ, ಸಮಾಜದ ಮೇಲೂ ಅದು ಪರಿಣಾಮವನ್ನು ಬೀರುತ್ತವೆ. ಗೃಹಸ್ಥನಾದ ಚಾರುದತ್ತ ಗೃಹಸ್ಥ ಧರ್ಮವನ್ನು ಪಾಲಿಸದೆ ಕೇವಲ ಓದು, ಅಧ್ಯಯನಗಳಲ್ಲಿಯೇ ಮುಳುಗಿ ಹೋಗುತ್ತಾನೆ. ಸುಶೀಲೆ, ಸದ್ಗುಣ ಸಂಪನ್ನೆಯಾದ ಮಿತ್ರಾವತಿಯನ್ನು ವಿವಾಹವಾದರೂ ಅವಳ ಪತಿಯಿಂದ ಅವಳಿಗೆ ಯಾವ ಸ್ಪಂದನೆಯೂ ಸಿಗುವುದಿಲ್ಲ. ಸೊಸೆಯ ಮೌನ ರೋದನೆಯನ್ನು ತಿಳಿದ ಅತ್ತೆ ದೇವಿಲೆ ತನ್ನ ತಮ್ಮನ ಮೊರೆ ಹೋಗುತ್ತಾಳೆ. ಚಪಲ ಚನ್ನಿಗರಾಯನಾದ ದೇವಿಲೆಯ ತಮ್ಮ ರುದ್ರದತ್ತ ಚಾರುದತ್ತನನ್ನು ನಿಧಾನವಾಗಿ ತನ್ನ ಗಾರುಡಿಗೆ ಸೆಳೆದು ಅವನಿಗೆ ವಿಷಯಾಸಕ್ತಿ ಮೂಡಿಸಲು ಅನಾಮಿಕೆ ಎಂಬ ಧನದಾಹಿ ವೇಶ್ಯೆಯೊಬ್ಬಳ ಮನೆಗೆ ಕರೆದೊಯ್ಯುತ್ತಾನೆ. ಅನಾಮಿಕೆಯ ಏಕೈಕ ಪುತ್ರಿ ವಸಂತ ತಿಲಕೆಯ ಮೋಹ ಪಾಶದಲ್ಲಿ ಬಂಧಿತನಾಗುವ ಚಾರುದತ್ತ ತನ್ನ ಮನೆಯನ್ನೇ ಮರೆತು ವಸಂತ ತಿಲಕೆಯ ಮನೆಯಲ್ಲಿಯೇ ಬಿಡಾರ ಹೂಡುತ್ತಾನೆ. ಚಾರುದತ್ತನನ್ನು ಇನ್ನಿಲ್ಲದಂತೆ ಪ್ರೀತಿಸುವ ವಸಂತ ತಿಲಕೆ ಅವನೇ ತನ್ನ ಪತಿಯೆಂದು ಸತಿ ಧರ್ಮವನ್ನು ಪಾಲಿಸುತ್ತಾಳೆ. ಆಕೆಯ ತಾಯಿ ಇವರಿಬ್ಬರ ಅರಿವಿಗೆ ಬಾರದಂತೆ ಚಾರುದತ್ತನ ಮನೆಯಿಂದ ದಾರ್ಷ್ಟ್ಯತನದಿಂದ ಹೊನ್ನು, ಹಣವನ್ನು ತನ್ನದಾಗಿಸಿಕೊಳ್ಳುತ್ತ ಹೋಗುತ್ತಾಳೆ. ಮನೆತನದ ಗೌರವಕ್ಕೆ ಧಕ್ಕೆ ಬಂದಾಗ ಚಾರುದತ್ತನ ತಂದೆ ಎಲ್ಲವನ್ನು ತೊರೆದು ಸನ್ಯಾಸವನ್ನು ಸ್ವೀಕರಿಸುತ್ತಾನೆ. ಅತ್ತೆ-ಸೊಸೆ ಎಲ್ಲವನ್ನು ಕಳೆದುಕೊಂಡು ಬೀದಿಗೆ ಬೀಳುತ್ತಾರೆ. ಚಾರುದತ್ತನ ಮನೆಯಿಂದ ಇನ್ನೇನೂ ಸಿಗದು ಎಂದು ಅರಿತ ಅನಾಮಿಕೆ ಮಗಳ ಅರಿವಿಗೆ ಬಾರದಂತೆ ಚಾರುದತ್ತನನ್ನು ಹೊರ ಹಾಕುತ್ತಾಳೆ.
ಅದೃಷ್ಟವಶಾತ್ ತನ್ನ ತಾಯಿ ಮತ್ತು ಹೆಂಡತಿಯನ್ನು ಸೇರಿಕೊಂಡ ಚಾರುದತ್ತ ಪಶ್ಚಾತ್ತಾಪದಿಂದ ಬೇಯುತ್ತಾನೆ. ಚಾರುದತ್ತನಿಲ್ಲದ ಗರ್ಭಿಣಿ ವಸಂತ ತಿಲಕೆ ಪ್ರಲಾಪಿಸುತ್ತಾಳೆ. ಮಗಳ ಪರಿಸ್ಥಿತಿಯನ್ನು ಕಂಡು ಮರುಗುವ ಅನಾಮಿಕೆ ಬದಲಾಗುತ್ತಾಳೆ. ಚಾರುದತ್ತನ ಮನೆಯಿಂದ ಸೆಳೆದುಕೊಂಡ ಎಲ್ಲವನ್ನೂ ಅವನಿಗೆ ಮರಳಿಸಿ ಮಗಳ ಸಮೇತ ಚಾರುದತ್ತನ ಮನೆಗೆ ನಡೆಯುತ್ತಾಳೆ.
ಸಾಧ್ವಿಯಾದ ಮಿತ್ರಾವತಿ ವಸಂತ ತಿಲಕೆಯನ್ನು ಚಾರುದತ್ತನೊಂದಿಗೆ ಮದುವೆ ಮಾಡಿಸಿ ಅವಳಿಗೆ ಸಿಗಬೇಕಾದ ಸ್ಥಾನವನ್ನು ನೀಡುತ್ತಾಳೆ. ಇದು ಕತೆಯ ಒಂದು ಭಾಗವಾದರೆ ನಂತರದ ಭಾಗದಲ್ಲಿ ಚಾರುದತ್ತನಿಗೆ ಮೇಲಿಂದ ಮೇಲೆ ಎದುರಾಗುವ ಪರೀಕ್ಷೆಗಳು, ತನ್ನಲ್ಲಿರುವ ಮುಗ್ಧತೆ ಹಾಗೂ ಸತ್ಯಸಂಧತೆಗಳಿಂದ ಬಾರಿ ಬಾರಿಗೂ ಜನರಿಂದ ಮೋಸ ಹೋಗುತ್ತಾನೆ. ಗಳಿಸಿದ್ದನ್ನೆಲ್ಲವನ್ನೂ ಕಳೆದುಕೊಳ್ಳುತ್ತಾನೆ. ತಾನು ಮಾಡಿದ ಸತ್ಕಾರ್ಯಗಳಿಂದ ಎಲ್ಲವನ್ನೂ ಮರಳಿ ಪಡೆದರೂ ಜೀವನದ ಕುರಿತು ಜಿಗುಪ್ಸೆಗೊಂಡು ತಂದೆಯಂತೆ ಸನ್ಯಾಸದತ್ತ ಮುಖ ಮಾಡುತ್ತಾನೆ.
ಪ್ರಾಚೀನ ಭಾರತದ ಕಾವ್ಯವಾದ ‘ಮೃಚ್ಛಕಟಿಕ’ ಶೂದ್ರಕ ರಾಜನಿಂದ ರಚಿಸಲ್ಪಟ್ಟಿತು. ಈ ಗ್ರಂಥದಿಂದ ಪ್ರೇರಣೆಗೊಂಡು ಚಾರುದತ್ತ ಮತ್ತು ವಸಂತ ತಿಲಕೆಯರ ಪವಿತ್ರ ಪ್ರೀತಿ ಕಥೆ, ನಾಟಕ ಹಾಗೂ ಉತ್ಸವ ಎಂಬ ಚಲನಚಿತ್ರವಾಗಿಯೂ ಮರು ಸೃಷ್ಟಿಯಾಗಿದೆ. ಜೀವನ ಮೌಲ್ಯಗಳನ್ನು ಸಾರುವ, ಕೋಪ ದ್ವೇಷಗಳನ್ನು ಮರೆತು ಕೂಡಿ ಬಾಳುವಂತೆ ಸಂದೇಶ ನೀಡುವ, ಘಟಿಸಿ ಹೋದ ತಪ್ಪುಗಳನ್ನು ಕ್ಷಮಿಸಿ ತನ್ನನ್ನು ತಾನು ತಿದ್ದಿಕೊಳ್ಳಲು ಅವಕಾಶವನ್ನು ನೀಡುವ ನೀತಿ ಪಾಠವನ್ನು ಬೋಧಿಸುತ್ತದೆ ಈ ಕಥೆ. ತಾಯಿ-ಮಗನ ಉತ್ಕಟ ಪ್ರೀತಿ, ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಧೈರ್ಯ ಹಾಗೂ ಸತ್ಯ ಮಾರ್ಗದಲ್ಲಿ ನಡೆಯುವವನಿಗೆ ಕೊನೆಯಲ್ಲಿ ಒಳ್ಳೆಯ ಫಲವೇ ಲಭ್ಯವಾಗುವುದೆಂಬ ನೀತಿ ಪಾಠವನ್ನು ಹೇಳುತ್ತದೆ.
ಡಾ. ನಾ. ದಾಮೋದರ ಶೆಟ್ಟಿ ಅವರು ಅತ್ಯಂತ ಸುಂದರವಾಗಿ ನಾಡೋಜ ಹಂಪನಾ ಅವರ ಕೃತಿಯನ್ನು ನಾಟಕ ರೂಪಕ್ಕೆ ತಂದಿದ್ದಾರೆ. ಮೂಲ ಕೃತಿಯ ಆಶಯಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಎಚ್ಚರವಹಿಸಿದ್ದಾರೆ. ಹಲವಾರು ನಾಟಕಗಳನ್ನು ರಂಗದ ಮೇಲೆ ತಂದು ಸೈ ಎನಿಸಿಕೊಂಡಿರುವ ಜೀವನ ರಾಂ ಸುಳ್ಯ ಅವರು ಅತ್ಯಂತ ಶ್ರಮವಹಿಸಿ ಚಾರು ವಸಂತ ನಾಟಕವನ್ನು ನಿರ್ದೇಶಿಸಿದ್ದಾರೆ. ಎಲ್ಲ ಕಲಾವಿದರಿಂದ ಅಭಿನಯವನ್ನು ಹೆಕ್ಕಿ ತೆಗೆಯವುದಷ್ಟೇ ಅಲ್ಲ, ರಂಗದ ಮೇಲೊಂದು ಅದ್ಭುತ ಲೋಕವನ್ನೇ ಸೃಷ್ಟಿ ಮಾಡಬಲ್ಲರು ಜೀವನ ರಾಂ ಅವರು. ರಂಗಸಜ್ಜಿಕೆ, ಸಂಗೀತ, ಕಲಾವಿದರ ಚುರುಕುತನ ಎಲ್ಲವೂ ಈ ನಾಟಕದಲ್ಲಿ ಅದ್ಭುತವಾಗಿತ್ತು.
ಸಮುದಾಯಕ್ಕೆ 50 ತುಂಬಿದ ಹಿನ್ನೆಲೆಯಲ್ಲಿ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಚಾರು ವಸಂತ ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಮನಸೂರೆಗೊಂಡಿತು. ಶಿವಮೊಗ್ಗ ಸಮುದಾಯ ಈ ನಾಟಕವನ್ನು ಪ್ರಸ್ತುತ ಪಡಿಸಿತು.