×
Ad

‘ಪ್ರಾಣ ಪದ್ಮಿನಿ’-ನಂಬಿಕೆಯೇ ದೈವ

Update: 2026-02-15 11:14 IST

ಸಾಗರ ಸೀಮೆಯ ಭಾಗ ಲಾಗಾಯ್ತಿನಿಂದಲೂ ಆಧುನಿಕ ರಂಗಭೂಮಿಯ ಪ್ರಯೋಗಶಾಲೆ. ಹೆಗ್ಗೋಡಿನ ನೀನಾಸಂ, ಕಿನ್ನರ ಮೇಳಗಳು, ಸಾಗರದ ಉದಯ ಕಲಾವಿದರ ಹಿರಿಯ ತಲೆಮಾರಿನ ಪರಂಪರೆ ಅಲ್ಲಿದೆ. ಅವುಗಳ ಮಧ್ಯೆಯೇ ಹುಟ್ಟಿಕೊಂಡ ‘ಸ್ಪಂದನ’ ಹವ್ಯಾಸಿ ರಂಗ ತಂಡ ಕೂಡ ವಿಭಿನ್ನವಾದ ರಂಗ ಚಟುವಟಿಕೆಗಳನ್ನು ನಡೆಸುತ್ತ, ಸುಮಾರು ಕಾಲು ಶತಮಾನ ಕಂಡಿದೆ. ಕೃಷಿಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು, ಅಧ್ಯಾಪಕರು ಹೀಗೆ ಬೇರೆ ಬೇರೆ ಹಿನ್ನೆಲೆಯ ರಂಗಾಸಕ್ತರನ್ನೊಳಗೊಂಡ ತಂಡ ಇದುವರೆಗೂ ರಂಗಕ್ಕೆ ತಂದ ನಾಟಕಗಳು ಅರವತ್ತೇಳಕ್ಕೂ ಹೆಚ್ಚು. ಈ ತಂಡದ ಹೊಸ ನಾಟಕ ‘ಪ್ರಾಣ ಪದ್ಮಿನಿ’

ಸುಮಾರು ಹದಿನೈದನೆಯ ಶತಮಾನದ ಕಾಲಮಾನದಲ್ಲಿ ಪೀಸಾದಲ್ಲಿ ನಡೆದ ಯದ್ಧದ ಹಿನ್ನೆಲೆಯಲ್ಲಿ ಕವಿ ಮಾರಿಸ್ ಮ್ಯಾಟರ್ ಲಿಂಕ್, ‘ಮೊನ್ನ ವನ್ನ’ ನಾಟಕ ರಚಿಸಿದ. ಕಮಾಂಡರ್ ಗಿಡೋನ ಪೀಸಾದ ಕೋಟೆಯ ಮೇಲೆ ದಾಳಿ ನಡೆದಿದೆ. ಶತ್ರು ಸೇನೆ ಕೋಟೆಯೊಡೆದು ಒಳಗೆ ಪ್ರವೇಶಿಸುವುದನ್ನು ತಡೆಯಬೇಕೆಂದರೆ ಕಮಾಂಡರ್‌ನ ಹೆಂಡತಿ ‘ಮೊನ್ನ ವನ್ನ’ ಒಂದು ರಾತ್ರಿ, ತೊಟ್ಟ ನಿಲುವಂಗಿಯ ಮೇಲೆ ಶತ್ರುಪಾಳಯಕ್ಕೆ ಹೋಗಬೇಕು.

ಇಂಥದೊಂದು ಎಳೆಯನ್ನಿಟ್ಟುಕೊಂಡು, ಎಸ್.ಜಿ. ಶಾಸ್ತ್ರಿಯವರ ಅನುವಾದದ ಆಧಾರದ ಮೇಲೆ, ಮಂಜುನಾಥ ಎಲ್. ಬಡಿಗೇರ್ ಈ ನಾಟಕ ಬರೆದಿದ್ದಾರೆ. ಈ ನಾಟಕ ಅಪ್ಪಟ ಕನ್ನಡ ನೆಲದ್ದೇ ಎನ್ನುವಷ್ಟು ತಾಜಾ ಆಗಿದೆ. ಇಂಥ ರೂಪಾಂತರಕ್ಕಾಗಿ ಅವರು ಒಂದು ಐತಿಹಾಸಿಕ ಸಂದರ್ಭದ ಮೊರೆ ಹೋಗಿದ್ದಾರೆ. ಅದು ಮೊಗಲರು ವಿಜಯನಗರದ ಮೇಲೆ ನಡೆಸಿದ ದಾಳಿಯ ಸಂದರ್ಭ. ಅವರೇ ಹೇಳಿಕೊಳ್ಳುವ ಹಾಗೆ ಇದು ಇತಿಹಾಸದ ಸತ್ಯ ಘಟನೆಯಲ್ಲ. ರಾಜ, ರಾಣಿ, ಘಟನೆಗಳನ್ನು ನಾಟಕದ ಸಂದರ್ಭಕ್ಕೆ ಹೊಂದಿಕೊಳ್ಳುವುದರಿಂದ ಮಾತ್ರ ಬಳಸಿಕೊಳ್ಳಲಾಗಿದೆ.

ಅಲ್ಲಾವುದ್ದೀನ್‌ನ ಸೇನಾಪತಿ ಅಜ್ಮಲ್ ಖಾನ್, ವಿಜಯನಗರದ ರಾಮರಾಯನ ಕೋಟೆಯ ಮೇಲೆ ದಾಳಿ ಮಾಡಿದ್ದಾನೆ. ವಾರದಿಂದಲೂ ಕೋಟೆಯಾಚೆ ಡೇರೆ ಹಾಕಿ ತಂಗಿದ್ದಾನೆ. ಇತ್ತ ನಿರಂತರ ಯುದ್ಧದಿಂದ ರಾಮರಾಯನ ರಾಜ್ಯ ಬರಿದಾಗಿಹೋಗಿದೆ. ಯುದ್ಧ ಸಾಮಗ್ರಿಗಳಿಲ್ಲ. ಆಹಾರವಿಲ್ಲ. ಜನ ಉಪವಾಸ ನರಳುತ್ತಿದ್ದಾರೆ. ಸೈನಿಕರು ಯುದ್ಧಮಾಡುವ ಸ್ಥಿತಿಯಲ್ಲಿಲ್ಲ. ರಾಜ್ಯದ ತುಂಬ ಹಾಹಾಕಾರ. ಇಂಥ ದುರಂತದ ಸ್ಥಿತಿಯಿಂದ ವಿಜಯನಗರವನ್ನು ಸ್ವತಃ ಅಜ್ಮಲ್ ಖಾನ್ ಮಾತ್ರ ಪಾರುಮಾಡಬಲ್ಲ. ಆತ ಮೊಗಲರನ್ನೇ ಎದುರು ಹಾಕಿಕೊಂಡು ವಿಜಯನಗರವನ್ನೂ ಪ್ರಜೆಗಳನ್ನೂ ಉಳಿಸಬಲ್ಲ. ಆದರೆ ಅದಕ್ಕೆ ಆತನ ಷರತ್ತೊಂದಿದೆ. ರಾಮರಾಯರ ಹೆಂಡತಿ ಪದ್ಮಿನಿ ಒಂದು ರಾತ್ರಿ ಉಟ್ಟ ಬಟ್ಟೆಯಲ್ಲೇ ಅಜ್ಮಲ್ ಖಾನ್‌ನಲ್ಲಿಗೆ ಬರಬೇಕು’. ರಾಜ್ಯದ ಪ್ರಜೆಗಳ ‘ಪ್ರಾಣ’ ಉಳಿಸಲು ‘ಪದ್ಮಿನಿ’ ಅಜ್ಮಲ್ ಖಾನ್‌ನಲ್ಲಿ ಹೋಗಲು ಸಿದ್ಧಳಾಗುತ್ತಾಳೆ. ಮುಂದಿನ ಭಾಗದಲ್ಲಿ ನಾಟಕ ಥಟ್ಟನೆ ತಿರುವು ಪಡೆದುಬಿಡುತ್ತದೆ.

ನಾಟಕ, ಯುದ್ಧದ ಸಂದರ್ಭದಲ್ಲಿ ರಾಜ್ಯದ ಪ್ರಜೆಗಳು ಪಡುವ ಸಂಕಟ, ನೋವುಗಳು, ಯುದ್ಧದ ಘೋರ ಪರಿಣಾಮಗಳ ಮೇಲೆ ಬೆಳಕು ಚೆಲ್ಲಿದರೆ, ಅಜ್ಮಲ್ ಖಾನ್‌ನ ಷರತ್ತಿನ ನಂತರದ ಘಟನಾವಳಿಗಳು, ರಾಜಧರ್ಮದ ಕುರಿತಂತೆ, ‘ಮಾನವೋ: ಪ್ರಾಣವೋ’ ಎನ್ನುವ ಸಂಗತಿಗಳ ನಡುವಿನ ಸಂಘರ್ಷದ ವಸ್ತುವಾಗುತ್ತದೆ. ಪ್ರಜೆಗಳ ಪ್ರಾಣ ಉಳಿಸಲು ತಾನೇ ಬಲಿಯಾಗಹೊರಟ ಪದ್ಮಿನಿ ಒಂದು ಹಂತದಲ್ಲಿ ರಾಮರಾಯನ ತಿರಸ್ಕಾರಕ್ಕೂ ಒಳಗಾಗಬೇಕಾಗುತ್ತದೆ. ಆದರೆ ರಾಜಕೀಯ, ಯುದ್ಧ, ಹಿಂಸೆ ಇವುಗಳನ್ನೆಲ್ಲ ಮೀರಿದ ಒಳ ಹರಿವೊಂದಿದೆ. ಅದು ಪ್ರೀತಿ. ಚಿಗುರು ಯೌವನದ ಪ್ರೀತಿ. ಅನಂತರಾಮ, ಪದ್ಮಿನಿಯರ ಪ್ರೀತಿ. ಅದೆಷ್ಟೋ ಕಾಲದಿಂದ ಈ ಪ್ರೀತಿಗಾಗಿ ಹಾತೊರೆಯುತ್ತಿದ್ದ, ಈಗ ಅಜ್ಮಲ್ ಖಾನ್ ಆಗಿರುವ ಅನಂತರಾಮ ಪ್ರೀತಿಗಾಗಿ ಎಂಥ ತ್ಯಾಗಕ್ಕೂ ಸಿದ್ಧನಾಗುತ್ತಾನೆ. ಪದ್ಮಿನಿಯೇ ಆತನ ‘ಪ್ರಾಣ’. ಹಾಗೇ ಪದ್ಮಿನಿಯೂ ಆತನಿಗಾಗಿ ಎಲ್ಲರನ್ನೂ ಎದುರು ಹಾಕಿಕೊಳ್ಳಲು ಸಿದ್ಧ. ಧರ್ಮವನ್ನೂ ಮೀರಿದ ಅವ್ಯಾಜ ಪ್ರೀತಿಯ ದರ್ಶನ ಮಾಡಿಸುತ್ತದೆ ಈ ನಾಟಕ.

ಆಶಯವನ್ನೂ, ನಿರೂಪಣೆಯನ್ನೂ ಹೊತ್ತ ಮೇಳ ಗೀತೆಗಳು, ದೃಶ್ಯ ನಿರ್ಮಿತಿಗಳನ್ನು ನಿರ್ದೇಶಕ ಮಂಜುನಾಥ್ ಎಲ್. ಬಡಿಗೇರ್ ಹದವಾಗಿ ಪೋಣಿಸುತ್ತ ಹೋಗುತ್ತಾರೆ. ಕುತೂಹಲಭರಿತವಾದ ನಾಟಕವೊಂದನ್ನು ಕಟ್ಟುತ್ತ ಹೋಗುತ್ತಾರೆ. ಹವ್ಯಾಸಿಗಳಿಗೆ ಹೊಂದುವಂತೆ ನಿಧಾನ ಗತಿಯಲ್ಲಿ ಕಥೆ ಹೇಳುತ್ತ ಹೋಗುವ ಶೈಲಿಯಿದು. ತೀರಾ ಕ್ಲಿಷ್ಟವಾದ ರಂಗಚಲನೆಗಳಿಲ್ಲ. ಆದರೆ ಕಥನ ಮಾತ್ರ ನೇರ, ಸರಳ, ಸ್ಪಷ್ಟ.ಹಾಗಾಗಿಯೇ ನಾಟಕ ಆರಾಮಾಗಿ ನೋಡಿಸಿಕೊಂಡು ಹೋಗುತ್ತದೆ. ನಾಟಕದುದ್ದಕ್ಕೂ ಅಲ್ಲಲ್ಲಿ ಸುಂದರವಾದ ದೃಶ್ಯ ನಿರ್ಮಿತಿಗಳಿವೆ.

ಸರಳವಾದ ರಂಗ ಸಜ್ಜಿಕೆ. ಸಮ ಪಾತಳಿ. ಸಾಕಷ್ಟು ರಂಗ ಚಲನೆಯ ಅವಕಾಶ. ಇಂಥದೊಂದು ರಂಗ ಸಜ್ಜಿಕೆಯ ಮೇಲೆ ನಾಟಕ ಬಿಚ್ಚಿಕೊಳ್ಳುತ್ತದೆ. ನಟರೆಲ್ಲ ಇಂಥ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಅಜ್ಮಲ್ ಖಾನ್‌ನ ಟೆಂಟ್‌ನ ವಿನ್ಯಾಸ ಚಂದವಿದೆ. ಟೆಂಟ್‌ನ ಚಿಕ್ಕ ಅವಕಾಶದಲ್ಲೇ ನಾಟಕದ ಮುಖ್ಯ ತಿರುವುಗಳೂ ಘರ್ಷಣೆಗಳೂ ನಡೆಯುತ್ತದೆ. ನಿರ್ದೇಶಕ ಮಂಜುನಾಥ್ ಇಲ್ಲಿಯ ಘಟನೆಗಳನ್ನು ಪ್ರಭಾವಶಾಲಿಯಾಗಿ ಕಟ್ಟಿಕೊಡುತ್ತಾರೆ.

ನಟ ನಟಿಯರಿಗೆ ನಾಟಕದ ಯಶಸ್ಸಿನ ಬಹುಪಾಲು ಸಲ್ಲುತ್ತದೆ. ಸಮಾಜದ ಬೇರೆ ಬೇರೆ ಕಡೆಗಳಿಂದ ಬಂದ ಇವರು ಸುಮಾರು ನಲವತ್ತೈದು ದಿನ ನಾಟಕದ ಸಿದ್ಧತೆಯಲ್ಲಿ ತೊಡಗಿಸಿಕೊಳ್ಳುವುದೆಂದರೆ ಸುಲಭವಲ್ಲ. ಅದಮ್ಯ ರಂಗಪ್ರೀತಿಯೊಂದೇ ಇದಕ್ಕೆ ಕಾರಣ. ಮತ್ತು ಅವರ ಕಲಿಕೆಯನ್ನು ಅಷ್ಟೇ ಪ್ರಭಾವಶಾಲಿಯಾಗಿ ರಂಗದ ಮೇಲೆ ತೆರೆದಿಡುತ್ತಾರೆ. ಅಭಿನಯ, ಮಾತುಗಳಲ್ಲಿ ಕಸಬುದಾರಿಕೆಯಿದೆ. ಮುಖ್ಯವಾಗಿ, ಯಾವುದೇ ರೆಪರ್ಟರಿಯ ನಟರಿಗೆ ಕಡಿಮೆಯಿಲ್ಲದಂತೆ ತಮ್ಮ ಅಭಿನಯ ಕೌಶಲವನ್ನು ಪ್ರದರ್ಶಿಸಿದ್ದಾರೆ. ವಿವೇಕ ನಾಯಕ, ಮಹಾಲಕ್ಷ್ಮಿ ಎಸ್., ನಂದಿನಿ ಎನ್., ಶಿವಕುಮಾರ ಉಳವಿ, ಭೂಮಿ, ಕಾರ್ತಿಕ್ ಕೆ., ವಿನಾಯಕ ಡಿ., ದೀಪಕ್ ಡೋಂಗ್ರೆ, ನಿಖಿಲ್ ಎನ್., ಪವನ ಎಸ್. ಮುಖ್ಯಪಾತ್ರಗಳಲ್ಲಿದ್ದಾರೆ. ಸಂಜೀವ್ ಕುಮಾರ್, ಪ್ರತಿಭಾ, ಅಶುತೋಶ್, ಕೀರ್ತಿರಾಜ್ ಮೇಳದಲ್ಲಿದ್ದಾರೆ.

ಭಾರ್ಗವ ಹೆಗ್ಗೋಡು, ಅರುಣ ಕುಮಾರ್, ಅಕ್ಷರ ಇಂದ್ರರ ಸಂಗೀತದ ಟೀಮ್ ರಂಗಪ್ರಯೋಗವನ್ನು ಕಳೆಗಟ್ಟಿಸಿದೆ. ಚಕ್ಕಡಿ ಗಾಡಿಗಳು ವಿಜಯನಗರವನ್ನು ಪ್ರವೇಶಿಸುವ ದೃಶ್ಯವನ್ನಂತೂ ಬರಿಯ ಸಂಗೀತ ವಾದ್ಯಗಳಲ್ಲೇ ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಡುತ್ತಾರೆ. ಹಿರಿಯ ಕಲಾವಿದ ಗುರುಮೂರ್ತಿ ವರದಾಮೂಲರ ವಸ್ತ್ರವಿನ್ಯಾಸ. ಪ್ರವೇಶದಲ್ಲಿ ವಿಜಯನಗರದ ಸ್ಥಿತಿಯನ್ನು ಸಂಕೇತಿಸುವಂತೆ ಕಪ್ಪು ಉಡುಗೆಯಲ್ಲಿ ಬರುವ ಪದ್ಮಿನಿಗೆ ಎರಡನೆಯ ಭಾಗದಲ್ಲಿ ಶುಭ್ರವಾದ ಪ್ರೀತಿಯನ್ನು ಸಂಕೇತಿಸುವಂತೆ ಅಚ್ಚ ಬಿಳಿಯ ಉಡುಗೆ ತೊಡಿಸಿರುವುದು ಗಮನಾರ್ಹವಾಗಿದೆ. ಜೀವನ್ ಕುಮಾರ್ ಹೆಗ್ಗೋಡು ಬೆಳಕಿನ ವಿನ್ಯಾಸ ಮಾಡಿದ್ದಾರೆ. ಪದ್ಮಿನಿ, ಅನಂತರಾಮರ ದೃಶ್ಯದಲ್ಲಿ ಬೆಳಕಿನ ವಿನ್ಯಾಸ ಚಂದವಾಗಿದೆ. ಪ್ರತಿಭಾ ಎಂ.ವಿ. ಸಂಯೋಜನೆಯ ಹೊಣೆ ಹೊತ್ತಿದ್ದಾರೆ.

ನಾಟಕದ ಕೊನೆಯ ದೃಶ್ಯದಲ್ಲಿ ಇನ್ನಷ್ಟು ಸ್ಪಷ್ಟತೆ ಬೇಕಿತ್ತೇನೋ ಎನಿಸದಿರದು.

ಕೊನೆಯಲ್ಲಿ ಪದ್ಮಿನಿ ಮತ್ತೆ ಮತ್ತೆ ಹೇಳುತ್ತಾಳೆ. ಆಕೆಗೆ ಹೇಳುವುದು ಅನಿವಾರ್ಯವಾಗಿದೆ ಕೂಡ.

‘‘ಆತ ನನ್ನ ಮೈ ಮುಟ್ಟಿಲ್ಲ’’

ಮೂವತ್ತು ಸಾವಿರ ಪ್ರಜೆಗಳ ಪ್ರಾಣ ಉಳಿಸಿದ ಮೇಲೂ ಪದ್ಮಿನಿಗೆ ತನ್ನ ಸ್ತ್ರೀತ್ವದ ಪುರಾವೆ ಕೊಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಕಿರಣ ಭಟ್, ಹೊನ್ನಾವರ

contributor

Similar News