ಮನಸೂರೆಗೊಳಿಸಿದ ‘ಜೋಕುಮಾರ ಸ್ವಾಮಿ’
ಚಂದ್ರಶೇಖರ ಕಂಬಾರರ ನಾಟಕಗಳೆಂದರೆ ಅವು ಅಪ್ಪಟ ಗ್ರಾಮೀಣ ಸೊಗಡಿನ ಕಥೆ ಹೇಳುವಂತಹವು. ಹಳ್ಳಿಯ ಮಣ್ಣಿನಲ್ಲಿ ಅರಳುವ ಪ್ರೇಮ-ಕಾಮ, ಗಂಡು-ಹೆಣ್ಣಿನ ಮನದ ತಾಕಲಾಟಗಳು, ಇಲ್ಲದವರ ಮೇಲೆ ಉಳ್ಳವರ ಅಟ್ಟಹಾಸಗಳೇ ಕಂಬಾರರ ವಿಷಯ ವಸ್ತುಗಳಾಗಿರುತ್ತವೆ. ಅದರ ಜೊತೆಗೆ ಉತ್ತರ ಕರ್ನಾಟಕದ ಗಟ್ಟಿ ಭಾಷೆ, ಸಂಗೀತಗಳಿಂದ ಒಡಗೂಡಿ ನೋಡುಗರ ಮನತಣಿಸುತ್ತವೆ.
ಕಂಬಾರರ ‘ಜೋಕುಮಾರ ಸ್ವಾಮಿ’ ನಾಟಕ ಎಲ್ಲ ಆಯಾಮಗಳಿಂದಲೂ ಒಂದು ಉತ್ತಮ ನಾಟಕವೆನ್ನಿಸಿದೆ. ಅತ್ತ ನಾಟಕಕ್ಕೂ ಸೈ, ಇತ್ತ ಬಯಲಾಟಕ್ಕೂ ಸೈ ಎನ್ನುವಂತಿದೆ. ಕಾರಣ ನಾಟಕದ ಜೀವಾಳವೇ ಸಂಗೀತವಾಗಿದೆ. ಇದರಲ್ಲಿನ ಜಾನಪದ ಶೈಲಿಯಲ್ಲಿನ ಹಾಡುಗಳನ್ನು ನೃತ್ಯಕ್ಕೆ ಅಳವಡಿಸಿದಾಗ ನೋಡುಗನನ್ನು ನಾಟಕ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ.
ಹೆಣ್ಣು, ಹೊನ್ನು, ಮಣ್ಣು ಎಲ್ಲವೂ ತನ್ನ ಕಾಲಡಿಯಲ್ಲಿಯೇ ಬಿದ್ದಿರಬೇಕೆಂದು ಬಯಸುವ ಊರ ಗೌಡನಿಗೆ, ತನ್ನಲ್ಲಿರುವ ಲೈಂಗಿಕ ನ್ಯೂನತೆಯನ್ನು ಮರೆಮಾಚಲು ವೇಶ್ಯೆಯರೂ ಸೇರಿದಂತೆ ಚೆಂದದ ಹೆಣ್ಣುಗಳನ್ನು ತನ್ನ ಕೈವಶ ಮಾಡಿಕೊಳ್ಳಬೇಕೆಂಬ ಹಪಾಹಪಿ. ಆ ಹೆಣ್ಣುಗಳನ್ನು ಸಂತುಷ್ಟಪಡಿಸಲು ತನ್ನಿಂದ ಅಸಾಧ್ಯವಾದರೂ ಊರವರ ಕಣ್ಣಲ್ಲಿ ಮಹಾರಸಿಕನೆನ್ನಿಸಿಕೊಳ್ಳುವ ಹಂಬಲ ಹೊಂದಿರುವಂತಹವನು ಗೌಡ. ಹತ್ತು ವರ್ಷಗಳು ಕಳೆದರೂ ಹೆಂಡತಿಯ ಮಡಿಲು ತುಂಬದಿದ್ದರೂ ಗೌಡತಿಯ ಮೇಲಿನ ದರ್ಪ, ದಬ್ಬಾಳಿಕೆಗೆ ಎಣೆ ಇಲ್ಲ. ಬಡವರ ಭೂಮಿಯನ್ನು ಮೋಸದಿಂದ ಕಬಳಿಸುವ ಗೌಡನ ವಿರುದ್ಧ ಧ್ವನಿ ಎತ್ತುವ ಒಬ್ಬನೇ ಒಬ್ಬ ಆಳು ಬಸಣ್ಯಾ. ತನ್ನ ಮಡಿಲಲ್ಲಿ ಗಿಳಿ ಮರಿಯಂತಹ ಒಂದು ಮಗುವಾಡಲೆಂದು ಜೋಕುಮಾರ ಸ್ವಾಮಿಗೆ ಹರಕೆ ಕಟ್ಟಿಕೊಳ್ಳುವ ಗೌಡತಿ, ಅದಕ್ಕೆ ಸಹಕರಿಸದ ಗೌಡ. ತನ್ನ ತಂದೆಯನ್ನು ಕೊಲ್ಲಿಸಿದ್ದಲ್ಲದೇ ತನ್ನ ಭೂಮಿಯನ್ನು ವಶಪಡಿಸಿಕೊಳ್ಳಲು ನಾನಾ ರೀತಿ ಕಿರುಕುಳ ನೀಡುವ ಗೌಡನನ್ನು ಮಣಿಸಲು ಗೌಡತಿಯನ್ನೇ ತನ್ನವಳನ್ನಾಗಿ ಮಾಡಿಕೊಂಡು ಅವಳ ಬರಿದಾದ ಮಡಿಲನ್ನು ತುಂಬುವ ಬಸಣ್ಯಾ, ಈ ನಡೆ ಸಹ್ಯವೆನಿಸದಿದ್ದರೂ ಗೌಡತಿಯ ದೃಷ್ಟಿಕೋನದಲ್ಲಿ ಅದು ನ್ಯಾಯವೆಂದೆನಿಸಿಕೊಳ್ಳುತ್ತದೆ. ಕೊನೆಗೂ ಗೌಡನ ಅಟ್ಟಹಾಸಕ್ಕೆ ಬಸಣ್ಯಾ ಬಲಿಯಾದಾಗ ವ್ಯವಸ್ಥೆಯ ಕರಾಳ ಮುಖದ ಅರಿವಾಗುತ್ತದೆ.
ನಾಟಕದುದ್ದಕ್ಕೂ ಲೇಖಕರು ಗಿಳಿ, ಕೋಳಿ, ಬಂದೂಕು ಇತ್ಯಾದಿ ಪದಗಳನ್ನು ಉಪಮೆಗಳಾಗಿ ಬಳಸಿ ಸೂಚ್ಯವಾಗಿ ಹೇಳಬೇಕಾದುದನ್ನು ಹೇಳುತ್ತಾರೆ.
ಗೌಡನ ಪಾತ್ರಧಾರಿ ರಜನೀಶ್ ನಾವುಡಾ ಅವರ ಗತ್ತು ನಾಟಕಕ್ಕೆ ಮೆರುಗು ನೀಡಿತು. ಬಸಣ್ಯಾನ ಪಾತ್ರಧಾರಿ ಅರ್ಜುನ ಬಿಸಿ ರಕ್ತದ ಯುವಕನಾಗಿ ಅನ್ಯಾಯವನ್ನು ಮೆಟ್ಟಿ ನಿಲ್ಲುವ ಅವರ ಅಭಿನಯ ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಗೌಡತಿಯಾಗಿ ತ್ರಿಷಾ, ನಿಂಗಿಯಾಗಿ ರಕ್ಷಿತಾ, ಗುರ್ಯಾ ಪಾತ್ರಧಾರಿ ನರೇಶ್ ಕಾಮತ್, ಶಾರಿಯಾಗಿ ಕವಿತಾ ಮಿಂಚಿದರು. ಹಿಮ್ಮೇಳದಲ್ಲಿ ಹಾಡುಗಾರರು ಹಾಗೂ ನೃತ್ಯಗಾರರು ನಾಟಕ ಗೆಲ್ಲುವಲ್ಲಿ ವಿಶೇಷ ಕೊಡುಗೆ ನೀಡಿದರು. ಈ ನಾಟಕವನ್ನು ಅಚ್ಚುಕಟ್ಟಾಗಿ ನಿರ್ದೇಶಿಸಿದ ಸಹ್ಯಾದ್ರಿ ಕಲಾ ತಂಡದ ಲವಕುಮಾರ ಅವರು ಒಬ್ಬ ಉತ್ತಮ ನಿರ್ದೇಶಕ ಎನ್ನುವುದನ್ನು ಸಾಬೀತು ಪಡಿಸಿದರು. ಶಿವಮೊಗ್ಗೆಯ ರಂಗ ದಸರಾ ಪ್ರಯುಕ್ತ ಪ್ರಯೋಗಗೊಂಡ ನಾಟಕ ಜೋಕುಮಾರ ಸ್ವಾಮಿ ಕಲಾ ರಸಿಕರ ಮನವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.