‘ಭಗವಂತನ ಮರಣ’ದಲ್ಲಿ ಕೋಮುವಾದದ ಸಾವು
ಮತೀಯವಾದದ ಲೋಕದಲ್ಲಿ ಕೊಲ್ಲುವವರು ಮತ್ತು ಕೊಲ್ಲಲ್ಪಡುವವರು ಹಿಂದುಳಿದ ಬಡವರೇ ಯಾಕಿರುತ್ತಾರೆ? ಈ ಪ್ರಶ್ನೆಗೆ ಉತ್ತರ ದೊರೆಯಬೇಕಾದರೆ ಸಮುದಾಯ ಬೆಂಗಳೂರು ಪ್ರಸ್ತುತಪಡಿಸಿದ, ಡಾ ಸ್ಯಾಮ್ ಕುಟ್ಟಿ ಪಟ್ಟಂಕರಿ ನಿರ್ದೇಶನದ ‘ಭಗವಂತನ ಮರಣ’ ನಾಟಕವನ್ನು ನೋಡಬೇಕು.
ಮಲಯಾಳಂ ಸಾಹಿತಿ ಆರ್. ಮೀರಾ ಬರೆದ ಕತೆಯನ್ನು ಡಾ. ಸ್ಯಾಮ್ ಕುಟ್ಟಿ ಪಟ್ಟಂಕರಿ ಅವರು ಮಲಯಾಳಂನಲ್ಲಿ ಈಗಾಗಲೇ ರಂಗರೂಪಕ್ಕೆ ತಂದು ಯಶಸ್ವಿಯಾಗಿದ್ದು, ಇದೀಗ ಕನ್ನಡದಲ್ಲೂ ‘ಸಮುದಾಯ ಬೆಂಗಳೂರು’ಗಾಗಿ ನಿರ್ದೇಶನ ಮಾಡಿದ್ದಾರೆ. ಮಲಯಾಳಂ ಕತೆಯನ್ನು ಕೆ. ಪ್ರಭಾಕರನ್ ಕನ್ನಡಕ್ಕೆ ಅನುವಾದಿಸಿದ್ದು, ರಂಗಕರ್ಮಿ ಪದ್ಮಾ ಶಿವಮೊಗ್ಗ ಸಹನಿರ್ದೇಶನ ಮಾಡಿದ್ದಾರೆ. ನಾಟಕದ ಶೀರ್ಷಿಕೆಯು ಭಗವಂತನ ನಿರಾಕರಣೆ ಸಂದೇಶ ಹೊಂದಿದೆ ಎಂಬಂತೆ ಕಂಡರೂ, ವಾಸ್ತವದಲ್ಲಿ ದೇವರ ಹೆಸರಿನಲ್ಲಿ ನಡೆಸುವ ಕೋಮುರಾಜಕಾರಣವನ್ನು ಬಯಲು ಮಾಡುವ ಅಂಶಗಳನ್ನಷ್ಟೇ ಒಳಗೊಂಡಿದೆ. ಈ ನಾಟಕವು ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆ, ಗುಂಪು ಹಲ್ಲೆಗಳು ಮತ್ತು ದ್ವೇಷ ಪ್ರಚೋದನೆಗಳ ವಿಷಯಗಳನ್ನು ಕೇಂದ್ರವನ್ನಾಗಿಸಿಕೊಂಡಿದೆ.
ನಾಟಕದ ಬಗ್ಗೆ ತೀರಾ ಸರಳವಾಗಿ ಹೇಳುವುದಾದರೆ; ಕೊಲ್ಲಲು ಬಂದ ಧರ್ಮ ರಕ್ಷಕ ಆರೋಪಿಗಳು ಪ್ರೊ. ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಅವರ ಮನೆಯಲ್ಲೇ ಒಂದು ವಾರ ಬದುಕಿದರೆ ಹೇಗಿರಬಹುದಿತ್ತು? ಅಥವಾ ಕೊಲ್ಲಲು ಬಂದವರು ಗೌರಿ ಜೊತೆಯೋ, ಕಲಬುರ್ಗಿಯವರ ಜೊತೆಯೋ ಒಂದೆರಡು ಗಂಟೆ ಕೂತು ಮಾತಾಡಿದ್ದರೆ ಕೊಲ್ಲಲು ಮನಸ್ಸು ಮಾಡುತ್ತಿದ್ದರೇ? ಅವರ ಮಧ್ಯೆ ಏನೆಲ್ಲಾ ಸಂಭಾಷಣೆ ನಡೆಯುತ್ತಿದ್ದವು? ಎಂಬ ಅಂಶಗಳನ್ನೇ ಪರಿಣಾಮಕಾರಿಯಾಗಿ ‘ಭಗವಂತನ ಮರಣ’ ನಾಟಕದಲ್ಲಿ ಪ್ರಸ್ತುತಪಡಿಸಲಾಗಿದೆ.
ಕೋಮುವಾದಿಗಳಿಂದ ಹಿಂದೂ ವಿರೋಧಿ ಎಂದು ಘೋಷಿಸಲ್ಪಟ್ಟ ಪ್ರೊಫೆಸರ್‌ರನ್ನು ಕೊಲೆ ಮಾಡಲು ಹಿಂದೂ ಸಂಘಟನೆಯೊಂದು ನಿರ್ಧರಿಸಿ ತನ್ನ ಕಾಲಾಳುವನ್ನು ರಿವಾಲ್ವರ್‌ನೊಂದಿಗೆ ಕಳುಹಿಸುತ್ತದೆ. ಆತ ಪ್ರೊಫೆಸರ್ ಮತ್ತವರ ಶಿಷ್ಯರ ಜೊತೆ ಸಂವಾದ ನಡೆಸುತ್ತಲೇ ‘ಮನುಷ್ಯ’ ಆಗುತ್ತಾನೆ. ಗನ್ ಹಿಡಿದು ಬರುವ ಯುವಕನ ಎದುರು ನಿಂತಿರುವ ಪ್ರೊಫೆಸರ್ ಗುಂಡಿನಿಂದಲ್ಲ, ಪ್ರಶ್ನೆಯಿಂದ ಪ್ರತಿಕ್ರಿಯಿಸುತ್ತಾನೆ. ಇಲ್ಲಿ ಹತ್ಯೆಯು ನಿರೀಕ್ಷೆ ಸಂವಾದವಾಗಿ ಬದಲಾಗುತ್ತದೆ. ಇದೇ ನಾಟಕದ ವೈಶಿಷ್ಟ್ಯ. ಆದರೆ, ಈ ರೀತಿ ಕೊಲೆಗೆ/ಹಲ್ಲೆಗೆ ಬಳಸಲ್ಪಟ್ಟ ಸಂಘಪರಿವಾರದ ಕಾಲಾಳುಗಳು ಸಂವಹನದ ಮೂಲಕ ಪರಿವರ್ತನೆ ಆಗಿರುವ ಉದಾಹರಣೆಗಳಿಲ್ಲ. ಕಾನೂನು ಇಂತಹ ಪರಿವರ್ತನೆಗಳನ್ನು ಸೃಷ್ಟಿಸಿದ ಉದಾಹರಣೆಗಳಿವೆ.
2009 ಜನವರಿ 24ರಂದು ಮಂಗಳೂರು ಅಮ್ನೇಶಿಯಾ ಪಬ್‌ನಲ್ಲಿ ಯುವತಿಯರು ಮತ್ತು ಯುವಕರ ಮೇಲೆ ದಾಳಿ ನಡೆಸಿದ ಶ್ರೀರಾಮ ಸೇನೆಯು ಆ ಬಳಿಕ ಒಂದು ಬಾರಿ ಸುದ್ದಿಗೋಷ್ಠಿ ನಡೆಸಿದ್ದರು. ಆ ಪತ್ರಿಕಾಗೋಷ್ಠಿಯಲ್ಲಿ ಶ್ರೀರಾಮಸೇನೆಗೆ ನಾನು ಕೆಲ ನೇರ ಪ್ರಶ್ನೆಗಳನ್ನು ಕೇಳಿದ್ದೆ. ಪತ್ರಿಕಾಗೋಷ್ಠಿ ಮುಗಿಯುತ್ತಿದ್ದಂತೆ ಪಬ್ ಅಟ್ಯಾಕ್ ಆರೋಪಿಯಲ್ಲಿ ಒಬ್ಬನಾಗಿದ್ದ ಶ್ರೀರಾಮ ಸೇನೆಯ ಕಾರ್ಯಕರ್ತನೊಬ್ಬ ನನ್ನನ್ನು ಅಡ್ಡಗಟ್ಟಿ ‘‘ನಿನ್ನನ್ನು ಮುಗಿಸಿದರೆ ಮಂಗಳೂರು ಸರಿಯಾಗುತ್ತೆ’’ ಅಂದ. ನಾನು ನಕ್ಕು ಸುಮ್ಮನಾದೆ. ಆ ನಂತರ ಈ ವಿಷಯ ತಿಳಿದ ಅಂದಿನ ಪೊಲೀಸರೇ ನನ್ನ ಬಳಿ ಬಂದು ದೂರು ಕೊಡುವಂತೆ ಒತ್ತಾಯಿಸಿ ಎಫ್‌ಐಆರ್ ದಾಖಲಿಸಿ ಕೋರ್ಟಿಗೆ ಚಾರ್ಜ್ ಶೀಟನ್ನೂ ಸಲ್ಲಿಸಿದರು.
ಇದಾಗಿ ಕೆಲ ತಿಂಗಳು ಆಗಿರಬಹುದು. ಕೊಲೆ ಬೆದರಿಕೆ ಒಡ್ಡಿದ್ದ ಶ್ರೀರಾಮ ಸೇನೆಯ ಆರೋಪಿ ನಮ್ಮ ವಕೀಲರಾದ ದಿನೇಶ್ ಹೆಗ್ಡೆ ಉಳಿಪಾಡಿಯವರನ್ನು ಸಂಪರ್ಕಿಸಿ, ‘‘ಕ್ಷಮೆ ಕೇಳ್ತೀನಿ, ಕೇಸ್ ವಾಪಸ್ ಪಡೆಯೋಕೆ ಹೇಳಿ’’ ಎಂದು ಅಂಗಲಾಚಿದ. ನಂತರ ನಾವು ಆತನ ಮನೆ ಪರಿಸ್ಥಿತಿ ವಿಚಾರಿಸಿದಾಗ ಅಳುವ ಸರದಿ ನಮ್ಮದಾಗಿತ್ತು. ರೋಗಗ್ರಸ್ಥ ತಾಯಿ, ಮದುವೆಯಾಗದ ತಂಗಿಯರು, ಮನೆಯಲ್ಲಿ ಸರಿಯಾಗಿ ಊಟಕ್ಕೂ ಗತಿಯಿಲ್ಲದ ಪರಿಸ್ಥಿತಿ. ಅದ್ಯಾರೋ ಇವರ ತಲೆಯಲ್ಲಿ ತುಂಬಿದ ಧರ್ಮದ ಅಮಲು ಹೀಗೆಲ್ಲಾ ಮಾಡಿಸುತ್ತದೆ. ಕೊನೆಗೆ ಕೋರ್ಟಿಗೆ ಅಲೆಯಲು ತಾಯಿಯ ತಾಳಿ ಅಡವಿಡಬೇಕಾದ ಪರಿಸ್ಥಿತಿ. ಆತನ ತಾಯಿಯೇ ಖುದ್ದಾಗಿ ಮಾತನಾಡಿದ ಬಳಿಕ ಕೇಸ್ ವಾಪಸ್ ಪಡೆಯದಿರಲು ಸಾಧ್ಯವೇ ಇರಲಿಲ್ಲ. ಇನ್ನು ಇಂತಹ ದಾಳಿ ಕೃತ್ಯಗಳಲ್ಲಿ ಭಾಗಿಯಾಗಲ್ಲ ಎಂದು ಆತ ಮತ್ತು ಆತನ ತಾಯಿ ಬಳಿ ಖಾತರಿ ಮಾಡಿಕೊಂಡು ಕೇಸ್ ವಾಪಸ್ ಪಡೆಯಲಾಯಿತು. ಆನಂತರ ನಡೆದ ಹೋಂ ಸ್ಟೇ ದಾಳಿ ಸೇರಿದಂತೆ ಹಲವು ದಾಳಿಗಳಲ್ಲಿ 2009ರ ಪಬ್ ದಾಳಿಯ ಆರೋಪಿಗಳೇ ಬಹುತೇಕರು ಕಂಡು ಬರುತ್ತಾರೆ. ಆದರೆ ನಾವು ಕ್ಷಮಿಸಿದ ಆತ ಯಾವ ದಾಳಿಯಲ್ಲೂ ನಂತರ ಕಾಣಿಸಿಲ್ಲ.
ಹಿಂದೂ ಸಂಘಟನೆಗಳ ನಾಯಕರುಗಳು ಇಂತಹ ಬಡವರ ಮಕ್ಕಳನ್ನೇ ಕೊಲೆ ಮಾಡಲು, ಜೈಲಿಗೆ ಹೋಗಲು ಬಳಸುತ್ತಾರೆ. ಈವರೆಗೆ ಮಂಗಳೂರಿನಲ್ಲಿ ನಡೆದ ನೂರಾರು ಕೋಮುಗಲಭೆ, ಅನೈತಿಕ ಪೊಲೀಸ್ ಗಿರಿ ಪ್ರಕರಣದಲ್ಲಿ ಜೈಲು ಸೇರಿದ ಸಾವಿರಾರು ಕಾರ್ಯಕರ್ತರ ಪೈಕಿ ಎಲ್ಲರೂ ಹಿಂದುಳಿದ ವರ್ಗಕ್ಕೆ ಸೇರಿದವರು ಮತ್ತು ಬಡವರು.
ಸಮಾಜದ ಅಸಂಗತತೆಗಳನ್ನು ಪ್ರಶ್ನಿಸುವ, ಚರ್ಚೆಗೆ ದಾರಿ ಮಾಡುವ ಪ್ರಭಾವಶಾಲಿ ನಾಟಕ. ಪ್ರೇಕ್ಷಕರ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಹುಟ್ಟಿಸುವುದೇ ಇದರ ಯಶಸ್ಸು. ಚಿಂತನೆಗೆ ಒಯ್ಯುವ, ಸಂವಾದಕ್ಕೆ ಪ್ರೇರೇಪಿಸುವ ರಂಗಪ್ರಯೋಗವಾಗಿ ಇದು ಗಮನಾರ್ಹ.
ಧಾರ್ಮಿಕ ಅಸಹಿಷ್ಣುತೆ, ಉದ್ದೇಶಪೂರ್ವಕ ದ್ವೇಷದ ಸಂಘಟನೆ, ಯುವ ಮನಸ್ಸುಗಳ ಕೇಸರೀಕರಣ, ಸಾಮಾಜಿಕ ಅಸಮಾನತೆಯ ವಿಚಾರವನ್ನು ಒಂದೇ ಪಠ್ಯದಲ್ಲಿ ಸೇರಿಸಿ ರಂಗಮಂಚದ ಮೇಲೆ ತಂದಿರುವ ಪ್ರಯೋಗವೇ ‘ಭಗವಂತನ ಮರಣ’. ಇದು ಕೇವಲ ಕಥನಾತ್ಮಕ ನಾಟಕವಲ್ಲ; ಇಂದಿನ ಭಾರತದ ಸಾಮಾಜಿಕರಾಜಕೀಯ ವಾತಾವರಣದ ಒಳಸತ್ಯಗಳನ್ನು ಕಲೆಯ ಮೂಲಕ ವಿಶ್ಲೇಷಿಸುವ ಪ್ರಖರವಾದ ಪ್ರಯತ್ನ.
ಸಮಾನತಾವಾದಿ/ಬಸವವಾದಿ ಪ್ರೊಫೆಸರನ್ನು ಕೊಲ್ಲಲು ಹೋಗುವ ಯುವಕ ಸಂಘಟಿತ ದ್ವೇಷದ ಭಾಷೆಯನ್ನು ಪ್ರತಿನಿಧಿಸಿದರೆ, ಪ್ರೊಫೆಸರ್ ಅವರು ಬಸವ ತತ್ವ, ಪ್ರೀತಿ ಮತ್ತು ಮಾನವೀಯ ಮೌಲ್ಯಗಳ ಧ್ವನಿಯನ್ನು ಪ್ರತಿನಿಧಿಸುತ್ತಾರೆ. ನಾಟಕ ನೋಡುತ್ತಿದ್ದಂತೆ ‘ಧರ್ಮರಕ್ಷಣೆ’ ಎಂಬ ಘೋಷಣೆ ನಿಧಾನವಾಗಿ ತನ್ನ ಅರ್ಥವನ್ನು ಕಳೆದುಕೊಳ್ಳುತ್ತದೆ. ಪ್ರೇಕ್ಷಕರು ಮೂರನೇ ವ್ಯಕ್ತಿಗಳಾಗಿರದೆ, ಆ ವಿಚಾರಸಂಘರ್ಷದ ಸಾಕ್ಷಿಗಳಾಗುತ್ತಾರೆ. ಕೆಲವೊಮ್ಮೆ ಅವರೇ ತೀರ್ಪುಗಾರರಾಗುತ್ತಾರೆ.
ಈ ನಾಟಕದ ಶಕ್ತಿಯ ಮೂಲ ಬಸವಣ್ಣನ ವಚನಗಳು. ಬಸವಣ್ಣ ಅವರ ಚಿಂತನೆ ಇಲ್ಲಿ ಕೇವಲ ಉಲ್ಲೇಖವಾಗದೆ, ನಾಟಕದ ನೈತಿಕ ದಿಕ್ಕನ್ನು ರೂಪಿಸುವ ಶಕ್ತಿಯಾಗುತ್ತದೆ. ಕೋಮುವಾದ ವರ್ಸಸ್ ಬಸವವಾದ ಎಂದು ಪರಸ್ಪರ ಎರಡು ಸಿದ್ಧಾಂತಗಳನ್ನು ಎದುರುಬದುರು ನಿಲ್ಲಿಸುತ್ತದೆ. ವಚನಗಳ ಪ್ರಖರತೆ, ಶರಣರ ಸಾಮಾಜಿಕ ಸಮಾನತೆಯ ದೃಷ್ಟಿಕೋನವು ಕೋಮುವಾದಿ ಯುವಕನೊಳಗಿನ ದ್ವಂದ್ವವನ್ನು ಗಾಢಗೊಳಿಸುತ್ತವೆ. ಈ ಆಂತರಿಕ ಭಿನ್ನಾಭಿಪ್ರಾಯವೇ ನಾಟಕದ ನಿಜವಾದ ಕ್ಲೈಮ್ಯಾಕ್ಸ್.
ಮಂಗಳೂರಿನಲ್ಲಿ ಪ್ರೇಮಿಗಳ ಮೇಲೆ ದಾಳಿ ನಡೆಸಿದ್ದ ಹಿಂದೂ ಸಂಘಟನೆಯ ಯುವಕರನ್ನು ವಿಚಾರಣೆ ನಡೆಸಿದ್ದ ಅಡಿಷನಲ್ ಎಸ್ಪಿಯೊಬ್ಬರು ‘‘ನಿಮ್ಮನ್ನು ಯಾರೂ ಈವರೆಗೂ ಪ್ರೀತಿಸಿಲ್ಲವೇ?’’ ಎಂದು ಪ್ರಶ್ನಿಸಿದ್ದರು. ಭಗವಂತನ ಮರಣ ನಾಟಕದಲ್ಲಿ ತನ್ನನ್ನು ಕೊಲೆ ಮಾಡಲು ಬಂದ ಯುವಕನ ಬಳಿ ಇದನ್ನೆಲ್ಲಾ ಮಾಡಬಾರದು ಎನ್ನಲು ‘‘ನಿನಗೆ ಯಾರೂ ಪ್ರೀತಿಯನ್ನು ತೋರಿಸಿಲ್ಲವೇನೋ’’ ಎಂದು ಪ್ರೊಫೆಸರ್ ಕೇಳುವ ಕ್ಷಣ, ವೇದಿಕೆಯಲ್ಲಿ ಕೇವಲ ಪಾತ್ರವಲ್ಲ, ಮಾನವೀಯತೆ ಜೀವಂತವಾಗುತ್ತದೆ. ಹಿಂದೂ ನಾವೆಲ್ಲಾ ಒಂದು ಎಂದು ಘೋಷಣೆ ಕೂಗುತ್ತಿದ್ದ ಆ ಹಂತಕ ಜಾತಿಯ ಕಾರಣಕ್ಕಾಗಿ ಪ್ರಿಯತಮೆಯನ್ನು ಕಳೆದುಕೊಳ್ಳುತ್ತಾನೆ. ಹಿಂದುತ್ವದ ಹೋರಾಟಗಾರ ಮದುವೆಯಾಗಬೇಕಾದ ಹುಡುಗಿ ದಲಿತೆ ಎಂಬ ಕಾರಣಕ್ಕಾಗಿಯೇ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ಆ ಮೂಲಕ ‘ಹಿಂದೂ ನಾವೆಲ್ಲಾ ಒಂದು’ ಎನ್ನುವ ಘೋಷಣೆಗೂ ಹಿಂದುತ್ವದೊಳಗಿನ ವಾಸ್ತವತೆಗೂ ಇರುವ ವ್ಯತ್ಯಾಸವನ್ನು ನಾಟಕ ಬಯಲು ಮಾಡುತ್ತದೆ.
ನಾಟಕದಲ್ಲಿ ಉಪದೇಶ ಜಾಸ್ತಿ ಆಯಿತು ಅನ್ನಿಸಬಹುದು. ಆದರೆ, ‘ಭಗವಂತನ ಮರಣ’ ನಾಟಕವು ಉಪದೇಶ ನೀಡುವು ದಿಲ್ಲ. ಅದು ಪ್ರಶ್ನಿಸುತ್ತದೆ. ಹಿಂಸೆಯ ಬದಲು ಸಂವಾದವನ್ನು, ಅಂಧಾನುಸರಣೆ ಬದಲು ಆತ್ಮಪರಿಶೀಲನೆಯನ್ನು, ದ್ವೇಷ ಬದಲು ಮನುಷ್ಯತ್ವವನ್ನು ಆಯ್ಕೆಮಾಡುವ ಸಾಧ್ಯತೆಯನ್ನು ಇದು ತೋರಿಸುತ್ತದೆ. ಈ ನಾಟಕದಲ್ಲಿ ‘ಭಗವಂತ’ ಸಾಯುವುದಿಲ್ಲ; ಸಾಯುವುದು ಕೋಮುವಾದ. ಬದುಕುವುದು ಪ್ರಶ್ನಿಸುವ ಮನಸ್ಸು.
ಒಟ್ಟಾರೆಯಾಗಿ ‘ಭಗವಂತನ ಮರಣ’ ನಾಟಕವು ಧರ್ಮ, ರಾಜಕೀಯ ಮತ್ತು ಮಾನವೀಯ ಮೌಲ್ಯಗಳ ನಡುವಿನ ಸಂಘರ್ಷವನ್ನು ತೀವ್ರವಾಗಿ ಪ್ರಶ್ನಿಸುವ-ಚಿಂತನೆಗೆ ಹಚ್ಚುವ ರಂಗಕೃತಿ. ಮತೀಯವಾದ ಮತ್ತು ‘ಅರಿವು’ ನಡುವಿನ ಘರ್ಷಣೆಯನ್ನು ವೇದಿಕೆಯಲ್ಲಿ ಜೀವಂತಗೊಳಿಸುವ ಈ ನಾಟಕ ಪ್ರೇಕ್ಷಕರನ್ನು ವರ್ತಮಾನದ ಸತ್ಯಗಳ ಎದುರು ನಿಲ್ಲಿಸುತ್ತದೆ. ಸೌಹಾರ್ದ ಕದಡುವ ಮತ್ತು ಸೌಹಾರ್ದ ಬಯಸುವ ಮನಸ್ಸು ಗಳೆರಡೂ ಈ ರಂಗಕೃತಿಯನ್ನು ತಪ್ಪದೇ ವೀಕ್ಷಿಸಬೇಕು.